ತಾ. 8 ರಂದು ಒಂದೆಡೆ ಮಹಿಳಾ ದಿನಾಚರಣೆಯ ಸಂಭ್ರಮ ಮಹಿಳೆಯರಲ್ಲಿ ಕಂಡು ಬಂದರೆ, ಇನ್ನೊಂದೆಡೆ ಮಡಿಕೇರಿ ನಗರದಲ್ಲಿ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಅನಾಥರಂತೆ ಗೋಚರಿಸಿರುವು ದನ್ನು ಯಾರೂ ಗಮನಿಸದೇ ಇರುವುದು ಸೋಜಿಗವೇ ಸರಿ.

ಅನಾಥೆಯೋ ಅಥವಾ ಅಬಲೆಯೋ ಕಳೆದ ಮೂರು ದಿನಗಳಿಂದ ಮಡಿಕೇರಿ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿ ಕಂಡು ಬಂದ ಮಹಿಳೆಯೊಬ್ಬರಿಗೆ ನಗರದ ವೃದ್ಧಾಶ್ರಮವೊಂದರಲ್ಲಿ ಆಶ್ರಯ ಕಲ್ಪಿಸುವ ಮೂಲಕ ಕೆಲ ಸಾಮಾಜಿಕ ಸಂಘಟನೆಯ ಕಾರ್ಯಕರ್ತರು ಮಾನವೀಯತೆ ಮೆರೆದಿದ್ದಾರೆ. ಅಂದಾಜು 50-55 ವಯಸ್ಸಿನ ಮಹಿಳೆಯೊಬ್ಬರು ಕುಳಿತಿರುವದನ್ನು ಗಮನಿಸಿದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಓಂಕಾರ್ ಟೈಲರ್ಸ್‍ನ ಮಾಲೀಕರಾದ ಚಂದ್ರಶೇಖರ್ ಅವರು ಊಟ ಮತ್ತು ಹೊದೆಯಲು ಬೆಡ್‍ಶೀಟ್ ನೀಡಿದರು.

ಈ ಅಪರಿಚಿತ ಮಹಿಳೆ ಬಂದು ಮೂರು ದಿನಗಳು ಆಗುತ್ತಾ ಬಂದರೂ ಸ್ಥಳದಿಂದ ಕದಲದಿರುವುದನ್ನು ಗಮನಿಸಿದ ಚಂದ್ರಶೇಖರ್ ಅವರು ಮರುದಿನ ಸಾಮಾಜಿಕ ಸಂಘಟನೆಯ ಕಾರ್ಯಕರ್ತರಾದ ಬಿ. ಬಿ. ಮಹೇಶ್ ಮತ್ತು ಚಂದ್ರಉಡೋತ್ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಸೇವಾ ಭಾರತಿ ಮತ್ತು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಾದ ಮಹೇಶ್, ಕುಮಾರ್, ನಂದೀಶ್, ಚಂದ್ರ ಉಡೋತ್ ಅವರು ನಗರದ ಶಕ್ತಿ ವೃದ್ಧಾಶ್ರಮದ ಸಿಬ್ಬಂದಿಗೆ ಮಾಹಿತಿ ನೀಡಿದಾಗ ಸಿಬ್ಬಂದಿ ಸಂತೋಷ್ ಹಾಗೂ ಸಂದೀಪ್, ವಿನೋದ್ ಅವರುಗಳು ಆಗಮಿಸಿದರು.

ಬಳಿಕ ಮಹಿಳೆಯ ಯೋಗಕ್ಷೇಮ ವಿಚಾರಿಸಿದ ಸಂದರ್ಭ ಮಹಿಳೆ ತನ್ನ ಹೆಸರು ವಿಜಯಲಕ್ಷ್ಮಿ ಎಂದೂ, ಗಂಡ ವರುಣ್, ತನಗೆ ಬೆಳೆದು ನಿಂತಿರುವ ಇಬ್ಬರು ಪುತ್ರರೂ ಹಾಗೂ ಇಬ್ಬರು ಪುತ್ರಿಯರು ಇರುವುದಾಗಿಯೂ, ತನ್ನ ಊರು ಹೈದರಾಬಾದ್ ಎಂದೂ, ತಾನು ಅಲ್ಲಿಂದ ನಡೆದು ಬಂದುದಾಗಿ ಹೇಳುತ್ತಾರೆ. ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದು, ಇಂಗ್ಲೀಷ್ ಕೂಡ ಚೆನ್ನಾಗಿ ಉಚ್ಛರಿಸುತ್ತಾರೆ.

ಮಹಿಳೆಯು ವಿದ್ಯಾವಂತರಂತೆ ಕಂಡು ಬರುತ್ತಿದ್ದಾರೆ. ಅನಾಥ ಆಶ್ರಮದಿಂದ ತಪ್ಪಿಸಿಕೊಂಡು ಬಂದವರಂತೆ ಕಂಡುಬರುತ್ತಿದ್ದು, ಮುಖದಲ್ಲಿ ಕಳವಳ ಗೋಚರಿಸುತ್ತಿತ್ತು. ಇವರು ಹೇಗೆ ಬೀದಿಗೆ ಬಂದರು ಎಂಬದು ಇನ್ನಷ್ಟೇ ತಿಳಿಯಬೇಕಾಗಿದೆ.

ಆಶ್ರಮದ ಸಿಬ್ಬಂದಿ ಮಹಿಳೆಯ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಆರೋಗ್ಯ ತಪಾಸಣೆ ಬಳಿಕ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಯಿತು. ಟೈಲರ್ ಚಂದ್ರಶೇಖರ್ ಅವರು ಶ್ರೀ ಶಕ್ತಿ ವೃದ್ಧಾಶ್ರಮದ ಸೇವಾ ಕಳಕಳಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.