ಕುಶಾಲನಗರ, ಮಾ. 10: ಕುಶಾಲನಗರ ತಾಲೂಕು ಅಧಿಕೃತವಾಗಿ ಕಾರ್ಯಾರಂಭ ಮಾಡಲು ಕಾಣದ ಕೈಗಳು ಅಡ್ಡಿಯುಂಟು ಮಾಡುತ್ತಿದ್ದು ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ ಬಗ್ಗೆ ಕಾವೇರಿ ತಾಲೂಕು ಹೋರಾಟ ಸಮಿತಿ ಪ್ರಮುಖರು ಎಚ್ಚರಿಸಿದ್ದಾರೆ.ಈ ಬಗ್ಗೆ ಸಮಿತಿಯ ತುರ್ತು ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ತಾಲೂಕು ಹೋರಾಟ ಸಮಿತಿ ಸಂಚಾಲಕ ವಿ.ಪಿ.ಶಶಿಧರ್, ಕುಶಾಲನಗರ ಮತ್ತು ಪೊನ್ನಂಪೇಟೆ ಏಕಕಾಲದಲ್ಲಿ ನೂತನ ತಾಲೂಕುಗಳಾಗಿ ಘೋಷಣೆಯಾಗಿದೆ. ಆದರೆ ಪೊನ್ನಂಪೇಟೆ ತಾಲೂಕು ಈಗಾಗಲೇ ಕಾರ್ಯಾರಂಭ ಮಾಡಲು ಸರಕಾರ ಆದೇಶ ಹೊರಡಿಸಿದ್ದು, ಕುಶಾಲನಗರ ತಾಲೂಕು ಬಗ್ಗೆ ಮಾತ್ರ ನಿರ್ಲಕ್ಷ್ಯ ತಾಳುತ್ತಿದ್ದಾರೆ. ಗ್ರಾಮಗಳ ಗಡಿಗುರುತು, ಸರಹದ್ದು ರಚನೆ, ನಕ್ಷೆ ತಯಾರಿ ಕಾರ್ಯ ಪೂರ್ಣಗೊಂಡಿಲ್ಲ ಎಂಬಿತ್ಯಾದಿ ನೆಪವನ್ನು ಮುಂದಿಟ್ಟುಕೊಂಡು ಸರಕಾರಕ್ಕೆ ವರದಿ ಕಳಿಸದೆ ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿದೆ. ಇದರ ಹಿಂದೆ ಕಾಣದ ಕೈಗಳು ಕಾರ್ಯ ನಿರ್ವಹಿಸುತ್ತಿರುವ ಕಾರಣ ಕುಶಾಲನಗರಕ್ಕೆ ಹಿನ್ನಡೆ ಉಂಟಾಗಿದೆ ಎಂದು ಆರೋಪಿಸಿದರು. ತಾಲೂಕು ಕಛೇರಿಗೆ ಅಗತ್ಯವಾದ ಎಲ್ಲಾ ರೀತಿಯ ಸೌಕರ್ಯಗಳು, ಆಡಳಿತ ವ್ಯವಸ್ಥೆಗಳು ಪೂರಕವಾಗಿದ್ದರೂ ಕೂಡ ಅಧಿಕೃತ ಕಾರ್ಯಾರಂಭಕ್ಕೆ ವಿಧ್ಯುಕ್ತ ಚಾಲನೆ ಒದಗಿಸಲು ಮೀನಾಮೇಷ ಎಣಿಸುತ್ತಿರುವ ಜಿಲ್ಲಾಡಳಿತ ಇದೇ ಶನಿವಾರದೊಳಗೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದಲ್ಲಿ ಸೋಮವಾರದಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವು ದಾಗಿ ಶಶಿಧರ್ ಎಚ್ಚರಿಸಿದರು.

ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಕೆ. ನಾಗೇಂದ್ರಬಾಬು ಮಾತನಾಡಿ, ಪೊನ್ನಂಪೇಟೆ ತಾಲೂಕಿಗೆ ಸಂಬಂಧಿಸಿದ ವರದಿಯನ್ನು ಸರಕಾರಕ್ಕೆ ಸಲ್ಲಿಸಿರುವ ಜಿಲ್ಲಾಡಳಿತ ಕುಶಾಲನಗರ ಬಗ್ಗೆ ತಾತ್ಸಾರ ತೋರಿದೆ. ತನ್ನದೇ ಆದ ಕೆಲವು ಮಾನದಂಡಗಳನ್ನು ಹೊಂದಿರುವ ಜಿಲ್ಲಾಡಳಿತ ಯಾವುದೇ ಅಡಚಣೆ ಇಲ್ಲದ ಕುಶಾಲನಗರದ ಬಗ್ಗೆ ಸಮರ್ಪಕ ವರದಿ ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಬೇಕಿದೆ ಎಂದರು.

ಗೋಷ್ಠಿಯಲ್ಲಿ ತಾಲೂಕು ಹೋರಾಟ ಸಮಿತಿ ಪ್ರಮುಖರಾದ ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಪಪಂ ಸದಸ್ಯರು ಗಳಾದ ವಿ.ಎಸ್. ಆನಂದಕುಮಾರ್, ಶೇಖ್ ಖಲೀಮುಲ್ಲಾ, ಸುಂದರೇಶ್, ಜಗದೀಶ್, ಸುರೇಶ್, ಪ್ರಮುಖರಾದ ಉಮಾಶಂಕರ್, ಅಬ್ದುಲ್ ಖಾದರ್, ಮುಸ್ತಾಫ, ರಾಜಶೇಖರ್, ಕೆ.ಎನ್. ದೇವರಾಜ್, ಜೋಸೆಫ್ ವಿಕ್ಟರ್ ಸೋನ್ಸ್, ಜಯಪ್ರಕಾಶ್ ಮತ್ತಿತರರು ಇದ್ದರು.