ಕುಶಾಲನಗರ, ಮಾ. 7: ಕೊಡಗಿನ ಯುವನಟಿ ಸಿಂಚನ ಚಂದ್ರಮೋಹನ್ ನಟಿಸಿದ ತುಳು ಹಾಗೂ ಕನ್ನಡ ಚಲನಚಿತ್ರ `ಪಿಂಗಾರ' ಕ್ಕೆ ಈ ಬಾರಿಯ ಅಂತರರಾಷ್ಟ್ರೀಯ ಸ್ಪೆಷಲ್ ಜ್ಯೂರಿ ಅವಾರ್ಡ್ ಲಭ್ಯವಾಗಿದೆ.
ಪ್ರೀತಂ ಶೆಟ್ಟಿ ನಿರ್ದೇಶನದ ಈ ಚಲನಚಿತ್ರ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ತಾ. 4 ರಂದು ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕೆಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಾಜುಬಾಯಿ ವಾಲಾ ಪ್ರಶಸ್ತಿ ವಿತರಿಸಿದರು. ನಿರ್ದೇಶಕ ಪ್ರೀತಂ ಶೆಟ್ಟಿ ಅವರ ಅನುಪಸ್ಥಿತಿಯಲ್ಲಿ ಅವರ ತಾಯಿ ವಿಜಯಲಕ್ಷ್ಮಿ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ತುಳು ಭಾಷೆಯ ಚಲನಚಿತ್ರವೊಂದು ಇದೇ ಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿರುವುದು ಗಮನಾರ್ಹವಾಗಿದೆ.
ನಿಜವಾದ ಅಪರಾಧಿಗೆ ದೈವ ನೀಡುವ ಶಿಕ್ಷೆ ಹೇಗಿರುತ್ತದೆ ಎನ್ನುವ ಕುತೂಹಲಗಳಿಗೆ ಉತ್ತರ ನೀಡುವ ಪಿಂಗಾರ ಚಿತ್ರದ ಪ್ರಮುಖ ಪಾತ್ರದಲ್ಲಿ ಗುರುಹೆಗ್ಡೆ, ಉಷಾ ಭಂಡಾರಿ, ನೀಮಾ ರೇ, ಸಿಂಚನಾ ಚಂದ್ರಮೋಹನ್, ಸುನಿಲ್ ನೆಲ್ಲಿಗುಡ್ಡೆ ಅಭಿನಯಿಸಿದ್ದಾರೆ.
ನಿರ್ಮಾಪಕರಾದ ಅವಿನಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಮಂಜುನಾಥ ರೆಡ್ಡಿ ಸಹ ನಿರ್ಮಾಪಕ, ಪವನ್ ಕುಮಾರ್ ಛಾಯಾಗ್ರಹಣ, ಜನಾರ್ಧನ್ ಕಲಾನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ಸಿಂಚನಾ ಅವರು ಚಿತ್ರದಲ್ಲಿ ಪ್ರಮುಖ ನಾಯಕಿಯಾಗಿದ್ದು ವಸ್ತ್ರವಿನ್ಯಾಸ, ಸಹಾಯಕ ನಿರ್ದೇಶಕಿಯಾಗಿ ಕೂಡ ಕೆಲಸ ನಿರ್ವಹಿಸಿದ್ದಾರೆ.