ಮಡಿಕೇರಿ, ಮಾ. 8: ಸರ್ಕಾರದ ವಿವಿಧ ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿ ಕೊಳ್ಳಬೇಕು, ಜೊತೆಗೆ ತರಗತಿಗಳನ್ನು ತಪ್ಪಿಸದೆ ಹಾಜರಾಗ ಬೇಕು ಎಂದು ವಿರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕಾಲೇಜಿನ ವಾಣಿಜ್ಯ ವಿಭಾಗದ ಧ್ವನಿ-ದೃಶ್ಯ ಕೊಠಡಿಯಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಪಠ್ಯ ಮತ್ತು ಸಹಪಠ್ಯದಲ್ಲಿ ಆಸಕ್ತಿಯಿಂದ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಶಿಕ್ಷಣ ಮುಗಿದ ನಂತರ ಉದ್ಯೋಗಕ್ಕಾಗಿ ಹಲವು ಅವಕಾಶಗಳಿವೆ. ಆದ್ದರಿಂದ ಉದ್ಯೋಗಕ್ಕಾಗಿ ಬೇಕಾದ ಕೌಶಲ್ಯವನ್ನು ಪಡೆದು ಉದ್ಯೋಗ ಪಡೆಯುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ತಯಾರಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಲ್ಯಾಪ್‍ಟಾಪ್ ನೀಡಲಾಗುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜೀವನ್‍ಕುಮಾರ್ ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಉಪನ್ಯಾಸಕಿ ಗೀತಾ ನಾಯ್ಡು ನಿರೂಪಿಸಿ, ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಸಹಾಯಕ ಪ್ರಾಧ್ಯಾಪಕ ವೇಣುಗೋಪಾಲ್ ಸ್ವಾಗತಿಸಿ, ಪ್ರಾಧ್ಯಾಪಕಿ ಸುನೀತ ವಂದಿಸಿದರು.