ಮಡಿಕೇರಿ, ಮಾ. 7: ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ವಿದ್ಯಾರ್ಥಿಗಳು ಉತ್ತಮ ಸಂವಹನ ಕೌಶಲ್ಯ ಬೆಳೆಸಿಕೊಳ್ಳಬೇಕು. ವೃತ್ತಿಯನ್ನು ಪಡೆಯುವ ಸಂದರ್ಭ ತಾವು ಪಡೆದ ಅಂಕದೊಂದಿಗೆ ತಮ್ಮ ಸಂವಹನ ಕಲೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಈಗಿನಿಂದಲೇ ಸಂವಹನದ ಕಡೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮಂಗಳೂರು ವಿಶ್ವ ವಿದ್ಯಾನಿಲಯ ಚಿಕ್ಕಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ರಾಬಿನ್ ಸಲಹೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವೃತ್ತಿ ಮತ್ತು ಉದ್ಯೋಗ ಕೋಶದ ವತಿಯಿಂದ ಸಂವಹನ ಕಲೆ ಹಾಗೂ ಪ್ರಸ್ತುತಿ ಕೌಶಲ್ಯ ವಿಷಯದ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಲೇಜಿನ ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಡಿ.ನಿರ್ಮಲಾ ಅವರು ಮಾತನಾಡಿ ದಿನದ ಶೇ.80 ರಷ್ಟು ಸಮಯವನ್ನು ಸಂವಹನದಲ್ಲಿ ಕಳೆಯುತ್ತೇವೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿದ್ದು, ನೇರ ಸಂವಹನದಿಂದ ದೂರ ಉಳಿದಿದ್ದಾರೆ. ಆದ್ದರಿಂದ ಮೊಬೈಲ್ ಬಳಕೆ ಕಡಿಮೆ ಮಾಡಿ ಉತ್ತಮ ಸಂವಹನ ಕಲೆ ಮೈಗೂಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ವೈ.ಚಿತ್ರಾ, ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರ ಇತರರು ಇದ್ದರು.