ವರದಿ: ಚಂದ್ರಮೋಹನ್ ಕುಶಾಲನಗರ, ಮಾ 8: ವಿಶ್ವವಿಖ್ಯಾತ ಪ್ರವಾಸಿ ಕೇಂದ್ರ ಎನಿಸಿರುವ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳುವ ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿರುವ ಪ್ರಕರಣ ಗಳು ಆಗಾಗ್ಯೆ ಮರುಕಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರವಾಸಿ ಕೇಂದ್ರದಲ್ಲಿ ಭದ್ರತೆಯ ಕೊರತೆಯೊಂದಿಗೆ ಭೇಟಿ ನೀಡುವ ಪ್ರವಾಸಿಗರ ದಿವ್ಯ ನಿರ್ಲಕ್ಷ್ಯ ಕೂಡ ಈ ಎಲ್ಲಾ ಅನಾಹುತಗಳಿಗೆ ಕಾರಣ ಎನ್ನಲಾಗಿದೆ.ಮಳೆಗಾಲದಲ್ಲಿ ತುಂಬಿ ಹರಿಯುವ ಕಾವೇರಿ ನದಿಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಗಳು ಸಂಭವಿಸದಿದ್ದರೂ ಬೇಸಿಗೆ ಅವಧಿಯಲ್ಲಿ ಮಾತ್ರ ಕೊಡಗಿನ ಪ್ರವಾಸಿ ಕೇಂದ್ರಗಳಲ್ಲಿ ನೀರಿನಲ್ಲಿ ಮುಳುಗಿ ಸಾಯುತ್ತಿರುವ ಪ್ರಕರಣಗಳು ಆಗಾಗ್ಯೆ ಮರುಕಳಿಸುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಜಿಲ್ಲೆಯ ಕಾವೇರಿ ನಿಸರ್ಗಧಾಮ, ದುಬಾರೆ, ಮಲ್ಲಳ್ಳಿ ಫಾಲ್ಸ್, ಚೇಲಾವರ ಫಾಲ್ಸ್, ಅಬ್ಬಿಫಾಲ್ಸ್ ಸೇರಿದಂತೆ ವಿವಿಧೆಡೆ ಪ್ರವಾಸಿ ಕೇಂದ್ರಗಳಲ್ಲಿ ಬೇಸಿಗೆ ಅವಧಿಯಲ್ಲಿ ಈ ದುರಂತಗಳು ಆಗಾಗ್ಯೆ ಮರುಕಳಿಸುತ್ತಿರುವುದು ಪ್ರವಾಸಿಗರಲ್ಲಿ ಆತಂಕಕ್ಕೆ ಎಡೆಮಾಡಿದೆ. ಸಂಬಂಧಿಸಿದ ಇಲಾಖೆಗಳು ಮಾತ್ರ ಇದಕ್ಕೆ ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕಿದೆ.
ಕಳೆದ ಎರಡು ದಿನಗಳ ಹಿಂದೆ ಗೋಣಿಕೊಪ್ಪದಿಂದ ದುಬಾರೆಗೆ ಭೇಟಿ ನೀಡಿದ ಶಾಲಾ ಮಕ್ಕಳ ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಈಜಲು ತೆರಳಿ ಮೃತಪಟ್ಟಿರುವ ಘಟನೆ ನಡೆದಿದ್ದು ಇದು ಪ್ರವಾಸ ಆಯೋಜಕರ ದಿವ್ಯ ನಿರ್ಲಕ್ಷ್ಯದಿಂದಲೇ ನಡೆದಿದೆ ಎನ್ನುವುದು ಅಲ್ಲಿನವರ ಅಭಿಪ್ರಾಯವಾಗಿದೆ. ಮಕ್ಕಳ ಬಗ್ಗೆ ಜಾಗೃತೆ ವಹಿಸದೆ ನೀರಿಗೆ ಇಳಿಯಲು ಅವಕಾಶ ನೀಡಿರುವುದರಿಂದ ಈ ದುರ್ಘಟನೆ ನಡೆದಿದೆ ಎಂದು ಅಲ್ಲಿನ ಉದ್ಯಮ ಕೆ.ಎಸ್.ರತೀಶ್ ಶಕ್ತಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ದುಬಾರೆಯಲ್ಲಿ ವಾರ್ಷಿಕ ಕೋಟ್ಯಾಂತರ ರೂಗಳ ಆದಾಯ ಬರುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಮಾತ್ರ ಪ್ರವಾಸಿಗರ ಭದ್ರತೆಗೆ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಕಾವೇರಿ ನದಿಗೆ ಎಲ್ಲೆಂದರಲ್ಲಿ ಬೇಕಾದರೂ ಇಳಿಯುವ ಅವಕಾಶ ಉಂಟಾಗಿದ್ದು ಪ್ರವಾಸಿಗರು ಅಪ್ಪಿತಪ್ಪಿ ಅಪಾಯದ ಪರಿಸ್ಥಿತಿಗೆ ಸಿಲುಕಿಕೊಳ್ಳಲು ಇದೂ ಒಂದು ಕಾರಣವಾಗಿದೆ.
ನದಿಯ ಇನ್ನೊಂದು ಭಾಗದಲ್ಲಿರುವ ಸಾಕಾನೆ ಶಿಬಿರಕ್ಕೆ ಕೆಲವೊಂದು ಬಾರಿ ಬೋಟ್‍ಗಳಲ್ಲಿ ತೆರಳುತ್ತಿದ್ದು ನೀರಿನ ಹರಿವು ಕಡಿಮೆಯಾದ ಸಂದರ್ಭ ಅಪಾಯ ಕಾರಿ ನದಿ ಮೂಲಕ ಕಾಲ್ನಡಿಗೆಯಲ್ಲೇ ಪ್ರವಾಸಿಗರು ಸಾಗಬೇಕಾಗುತ್ತದೆ. ಈ ಸಂದರ್ಭ ಅವಘಡಗಳು ಸಂಭವಿಸುವುದು ಸಾಮಾನ್ಯವಾಗಿದೆ.
ಸಾಕಾನೆ ಶಿಬಿರಕ್ಕೆ ನದಿಗೆ ಅಡ್ಡಲಾಗಿ ತೂಗುಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಇದುವರೆಗೆ ಅದು ಕಾರ್ಯಗತವಾಗದಿರುವುದು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ತೂಗುಸೇತುವೆ ನಿರ್ಮಾಣವಾದಲ್ಲಿ ದುಬಾರೆಯ ಪ್ರವಾಸಿ ಕೇಂದ್ರ
(ಮೊದಲ ಪುಟದಿಂದ) ಇನ್ನೂ ಹೆಚ್ಚಿನ ಆಕರ್ಷಣೆಯೊಂದಿಗೆ ಅಪಾಯಕಾರಿ ಸನ್ನಿವೇಶವನ್ನು ತಪ್ಪಿಸಬಹುದು ಎನ್ನುವುದು ಕುಶಾಲನಗರದ ಹೋಟೆಲ್ ಉದ್ಯಮಿ ಕೆ.ಕೆ.ಭಾಸ್ಕರ್ ಅವರ ಅಭಿಪ್ರಾಯವಾಗಿದೆ.
ದುಬಾರೆ ಪ್ರವಾಸಿ ಕೇಂದ್ರದಲ್ಲಿ ಸ್ಥಳೀಯ ನಂಜರಾಯಪಟ್ಟಣ ಗ್ರಾಮಪಂಚಾಯ್ತಿಗೆ ವಾರ್ಷಿಕ 20 ಲಕ್ಷಕ್ಕೂ ಅಧಿಕ ವಾಹನ ನಿಲುಗಡೆ ಶುಲ್ಕ ಲಭಿಸುತ್ತಿದ್ದರೆ ಇತ್ತ ಅರಣ್ಯ ಇಲಾಖೆಗೆ ಮೋಟಾರ್ ಬೋಟ್ ಪ್ರವೇಶ ಶುಲ್ಕ ವಾರ್ಷಿಕ ಕೋಟಿ ರೂಗಳಿಗೆ ಅಧಿಕ ಸಂಗ್ರಹವಾಗುತ್ತದೆ. ಇನ್ನೊಂದೆಡೆ ಸಾಹಸಿ ಕ್ರೀಡಾ ರ್ಯಾಫ್ಟಿಂಗ್ ಮೂಲಕ ಕೂಡ ಸಂಬಂಧಿಸಿದ ಇಲಾಖೆಗಳಿಗೆ ತೆರಿಗೆ ಲಭ್ಯವಾದರೂ ಇಲ್ಲಿ ಪ್ರವಾಸಿಗರ ಭದ್ರತೆಗೆ ಮಾತ್ರ ಅಧಿಕಾರಿಗಳು ಯಾವುದೇ ನಿಗಾವಹಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಸಾಕಾನೆ ಶಿಬಿರಕ್ಕೆ ಪ್ರವಾಸಿಗರು ಎಗ್ಗಿಲ್ಲದೆ ಲಗ್ಗೆಯಿಡುತ್ತಿರುವ ಹಿನ್ನಲೆಯಲ್ಲಿ ಶಿಬಿರದಲ್ಲಿ ತರಬೇತಿಗೊಳ್ಳುತ್ತಿರುವ ಕಾಡಾನೆಗಳಿಗೂ, ಮಾವುತ ಕಾವಾಡಿಗರಿಗೂ ಕಿರಿಕಿರಿ ಉಂಟಾಗುತ್ತಿರುವುದು ದಿನನಿತ್ಯದ ಸಮಸ್ಯೆ ಆಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ.
ಬೆಳಗ್ಗೆ 9 ರಿಂದ 11.30 ರ ತನಕ ಮಾತ್ರ ಶಿಬಿರಕ್ಕೆ ಪ್ರವೇಶ ಇರುವುದಾದರೂ ಪ್ರವಾಸಿಗರು ನಿರಾತಂಕವಾಗಿ ನದಿ ದಾಟಿ ಶಿಬಿರಕ್ಕೆ ನುಗ್ಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇನ್ನೊಂದೆಡೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ದುಬಾರೆ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರೂ ಸ್ಥಳೀಯವಾಗಿ ಪೊಲೀಸ್ ವ್ಯವಸ್ಥೆ ಕೂಡ ಕಂಡುಬರುತ್ತಿಲ್ಲ. ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ ಸಂದರ್ಭ ಜೀವ ರಕ್ಷಣೆಗೆ ಕೂಡಲೆ ಮುಳುಗು ತಜ್ಞರು ಕೂಡ ಲಭ್ಯವಿರುವುದಿಲ್ಲ.