ಮಡಿಕೇರಿ, ಮಾ. 7: ಮಾರ್ಚ್ 8 ಮಹಿಳಾ ವಿಶೇಷತೆಯ ದಿನವಾಗಿದೆ. ಈ ದಿನವನ್ನು ಜಗತ್ತಿನಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ, ಮಾಡುತ್ತಿರುವ ಸಾಧನೆ.. ವಿಶೇಷತೆಗಳನ್ನು ಈ ಕಾರ್ಯಕ್ರಮದ ಅಂಗವಾಗಿ ಗುರುತಿಸಲಾಗುತ್ತದೆ.ಭಾರತದ ಪಾಲಿಗೆ ಈ ವರ್ಷ ಇದು ಮತ್ತೊಂದು ರೀತಿಯ ವಿಶೇಷತೆಯ ದಿನವಾಗಿದೆ. ಕ್ರೀಡಾರಂಗದಲ್ಲಿ ವಿವಿಧ ಕ್ರೀಡೆಗಳಲ್ಲಿ ಸಾಧನೆ ತೋರುತ್ತಿರುವ ಮಹಿಳೆಯರು ಮತ್ತೊಂದು ಸಾಧನೆ ತೋರಿದ್ದಾರೆ. ಜಗತ್ತಿನಲ್ಲಿ ಗಮನ ಸೆಳೆದಿರುವ ಕ್ರೀಡೆಯಾದ ಕ್ರಿಕೆಟ್.. ಅದರಲ್ಲೂ ಟಿ.20 ಕ್ರಿಕೆಟ್ ವಿಶ್ವಕಪ್ ಫೈನಲ್ ಮಾ.8ರಂದು (ಇಂದು) ನಡೆಯಲಿದ್ದು ನಮ್ಮ ಮಹಿಳಾ ತಂಡ ಫೈನಲ್ ಹಂತ ತಲುಪಿದ್ದು ಹಣಾಹಣಿಗೆ ಸಿದ್ಧವಾಗಿದೆ. ಮಹಿಳಾ ದಿನವಾದ ತಾ. 8 (ಇಂದು) ಭಾರತ ಮಹಿಳಾ ತಂಡ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು ಇದು ವಿಶೇಷ ಆಕರ್ಷಣೆ ಪಡೆದಿದೆ.