ಕುಶಾಲನಗರ, ಮಾ. 7: ಕುಶಾಲನಗರದ ಪಟ್ಟಣದ ವ್ಯಾಪ್ತಿಯಲ್ಲಿ ನದಿ ಪ್ರವಾಹದಿಂದ ಬಡಾವಣೆಗಳು ಜಲಾವೃತವಾಗುವುದನ್ನು ತಪ್ಪಿಸಲು ನಬಾರ್ಡ್ ಸಹಾಯದೊಂದಿಗೆ ನದಿ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದ್ದಾರೆ.ಅವರು ಕುಶಾಲನಗರದಲ್ಲಿ ಪಟ್ಟಣ ಪಂಚಾಯ್ತಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಕಾವೇರಿ ನದಿಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕುಶಾಲನಗರದ ಬೈಚನಹಳ್ಳಿಯಿಂದ ಕಣಿವೆ ತನಕ ನದಿ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ನಬಾರ್ಡ್ ಮೂಲಕ 100 ಕೋಟಿ ಅನುದಾನಕ್ಕೆ ಸರಕಾರಕ್ಕೆ ಕೋರಲಾಗುವುದು ಎಂದರು.ಕುಶಾಲನಗರದಲ್ಲಿ ಬಡಾವಣೆಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ಉನ್ನತ ಮಟ್ಟದ ತಂತ್ರಜ್ಞಾನದೊಂದಿಗೆ ತಡೆಗೋಡೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಲ್ಲಿಸಲು ನೀರಾವರಿ ನಿಗಮದ ಅಧಿಕಾರಿಗಳಿಗೆ
(ಮೊದಲ ಪುಟದಿಂದ) ಶಾಸಕರು ನಿರ್ದೇಶನ ನೀಡಿದರು. ಕಲುಷಿತ ನೀರು ನೇರವಾಗಿ ನದಿಗೆ ಸೇರದಂತೆ ಕ್ರಿಯಾಯೋಜನೆ ರೂಪಿಸುವಂತೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಅವರಿಗೆ ನಿರ್ದೇಶನ ನೀಡಿದ ಶಾಸಕ ರಂಜನ್, ಕುಶಾಲನಗರ ಒಳಚರಂಡಿ ಯೋಜನೆಯ ಕಾಮಗಾರಿಯನ್ನು ಕೂಡಲೆ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಕೆಲವೆಡೆ ನದಿಯಿಂದ ನೀರು ಬಡಾವಣೆಗೆ ನುಗ್ಗದಂತೆ ತಡೆಗೋಡೆ ನಿರ್ಮಿಸಲಾಗುವುದು. ನದಿಯ ನಿರ್ವಹಣೆಯನ್ನು ಮಾಡುವ ನಿಟ್ಟಿನಲ್ಲಿ ಈಗಾಗಲೆ ಕಾವೇರಿ ನೀರಾವರಿ ನಿಗಮ ಅಂದಾಜು ಪಟ್ಟಿ ಸಲ್ಲಿಸಿದೆ ಎಂದು ಮಾಹಿತಿ ನೀಡಿದರು. ಹಾರಂಗಿ ಮತ್ತು ಚಿಕ್ಲಿಹೊಳೆ ನಾಲೆಗಳ ದುರಸ್ಥಿ ಕಾರ್ಯ ಮಳೆಗಾಲಕ್ಕೆ ಮುನ್ನ ನಡೆಯಲಿದೆ ಎಂದು ರಂಜನ್ ತಿಳಿಸಿದರು.
ಇದೇ ಸಂದರ್ಭ ಮೈಸೂರು ಮತ್ತು ಕೊಡಗು ಸಂಪರ್ಕ ಸೇತುವೆಯೊಂದನ್ನು ನಿರ್ಮಿಸಲು ಕೂಡ್ಲೂರು ಕೈಗಾರಿಕಾ ಬಡಾವಣೆ ಬಳಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಶಾಸಕರು ಮೈಸೂರು-ಕುಶಾಲನಗರ ರಸ್ತೆ ನಡುವೆ ಕೊಪ್ಪ ಮುತ್ತಿನ ಮುಳ್ಳುಸೋಗೆ ಬಳಿಯಿಂದ ಕೈಗಾರಿಕಾ ಬಡಾವಣೆ ಮೂಲಕ ಹಾರಂಗಿ ರಸ್ತೆಯಿಂದ ಗುಡ್ಡೆಹೊಸೂರು ಬಳಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕುಶಾಲನಗರ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಪ್ರವಾಹ ಬಂದು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಹಿನ್ನಲೆಯಲ್ಲಿ ಕುಶಾಲನಗರ ಮಡಿಕೇರಿ ರಸ್ತೆಯ ತಾವರೆಕೆರೆ ಮತ್ತು ಗಂಧದಕೋಟೆ ಬಳಿ ಸರಕಾರಿ ಪಾಲಿಟೆಕ್ನಿಕ್ ಎದುರು ಭಾಗದ ಹೆದ್ದಾರಿ ರಸ್ತೆಯನ್ನು ಎತ್ತರ ಮಾಡುವ ಮೂಲಕ ಅಭಿವೃದ್ಧಿಪಡಿ ಸಲಾಗುವುದು ಎಂದು ತಿಳಿಸಿದರು.
ಈ ಬಾರಿಯ ಬಜೆಟ್‍ನಲ್ಲಿ ಕೊಡಗು ಜಿಲ್ಲೆಯನ್ನು ನಿರ್ಲಕ್ಷಿಸಿಲ್ಲ. ಬಜೆಟ್‍ಗೂ ಮುನ್ನವೇ ಕೊಡಗು ಜಿಲ್ಲೆಗೆ ಒಟ್ಟು 536 ಕೋಟಿ ಹಣ ಬಿಡುಗಡೆಗೆ ವಿಶೇಷ ಪ್ಯಾಕೆಜ್ ನೀಡಲಾಗಿತ್ತು. ಇದರಲ್ಲಿ 200 ಕೋಟಿ ಈಗಾಗಲೆ ಬಂದಿದೆ. ಉಳಿದ ಅನುದಾನ ಬಿಡುಗಡೆಗೊಳಿಸುವಲ್ಲಿ ಒತ್ತಾಯ ಮಾಡಲಾಗುವುದು ಎಂದು ರಂಜನ್ ಹೇಳಿದರು.
ಈಗಾಗಲೆ ಉಪಮುಖ್ಯ ಮಂತ್ರಿಗಳ ಮೂಲಕ ಕೊಡಗು ಜಿಲ್ಲೆಯ ಶಿಕ್ಷಣ ಕೇಂದ್ರಗಳ ಮೂಲಭೂತ ಸೌಕರ್ಯ ಕಲ್ಪಿಸಲು 12.6 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಈ ಸಂದರ್ಭ ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್, ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳಾದ ರಾಜೇಗೌಡ, ಮಹೇಂದ್ರ, ನಾಗರಾಜ್, ಪಪಂ ಸದಸ್ಯರಾದ ಅಮೃತ್‍ರಾಜ್, ಜಯವರ್ಧನ್, ಮಾಜಿ ಸದಸ್ಯ ಎಂ.ಎಂ.ಚರಣ್, ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು, ಪ್ರಮುಖರಾದ ಎಂ.ಎನ್.ಕುಮಾರಪ್ಪ, ಬಿ.ಡಿ. ಮಂಜುನಾಥ್, ಕಾವೇರಿ ನದಿ ಪ್ರವಾಹ ಸಂತ್ರಸ್ಥರ ರಕ್ಷಣಾ ವೇದಿಕೆ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ತೋರೆರ ಉದಯಕುಮಾರ್, ಕೊಡಗನ ಹರ್ಷ, ಮಂಡೇಪಂಡ ಬೋಸ್ ಮೊಣ್ಣಪ್ಪ, ಬಿ.ಎಸ್.ದಿನೇಶ್ ಮತ್ತಿತರರು ಇದ್ದರು.