ಕುಶಾಲನಗರ, ಮಾ. 7: ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಚಿತ್ರಪಟ (ತಂಕಾ) ಎಂಬ ಹಿರಿಮೆ ಹೊಂದಿರುವ ಬೌದ್ದಧರ್ಮ ಗುರು ಪದ್ಮಸಾಂಭ ಅವರ ಬೃಹತ್ ಚಿತ್ರಪರದೆಯನ್ನು ಬೈಲುಕೊಪ್ಪೆಯ ಗೋಲ್ಡನ್ ಟೆಂಪಲ್ ಆವರಣದಲ್ಲಿ ಬುಧವಾರ ಅನಾವರಣಗೊಳಿಸಲಾಯಿತು.

ಟಿಬೆಟಿಯನ್ನರ ನೂತನ ವರ್ಷದ 10ನೇ ದಿನದ ಅಂಗವಾಗಿ ಕೇವಲ 30 ನಿಮಿಷಗಳ ದರ್ಶನ ಪಡೆಯುವ ಮೂಲಕ ಟಿಬೆಟಿಯನ್ನರು ಪದ್ಮಸಾಂಭವ ಜನ್ಮ ದಿನಾಚರಣೆಯನ್ನು ಸಡಗರದಿಂದ ಆಚರಿಸಿದರು. ಬುದ್ಧನ ಅವತಾರ ಎಂದು ಟಿಬೆಟಿಯನ್ನರು ನಂಬಿರುವ ಪದ್ಮಸಾಂಭವರು ಭೂಮಿಗೆ ಬಂದ ದಿನವನ್ನು ‘ಸೆಚು’ ಎಂದು ಕರೆಯುತ್ತಾರೆ. ಬೈಲುಕೊಪ್ಪೆಯಲ್ಲಿ ಕಳೆದ 18 ವರ್ಷಗಳಿಂದ ಈ ಬೃಹತ್ ಚಿತ್ರಪಟವನ್ನು ಪೂಜಿಸಲಾಗುತ್ತಿದೆ.