ಬೀಟಿಕಟ್ಟೆ ಅಂಬೇಡ್ಕರ್ ಯುವಕ ಸಂಘಕ್ಕೆ ಪ್ರಶಸ್ತಿ
ಮಡಿಕೇರಿ, ಮಾ. 7: ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ತಾ. 10 ರಂದು ಜಿಲ್ಲಾ ಯುವ ಸಮಾವೇಶ ಹಾಗೂ ಉತ್ತಮ ಯುವ ಸಂಘ ಪ್ರಶಸ್ತಿ ಮತ್ತು ಕ್ರೀಡಾ ಸಾಮಗ್ರಿ ವಿತರಣಾ ಸಮಾರಂಭ ಮಡಿಕೇರಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಡಿಕೇರಿಯ ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಲ್ಲಕ್ಕಿ ಯುವತಿ ಮಂಡಳಿ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಆಶ್ರಯದಲ್ಲಿ ಜಿಲ್ಲಾ ಯುವ ಸಮಾವೇಶ ಅಂದು ಬೆಳಿಗ್ಗೆ 10 ಗಂಟೆಗೆ ಕಾವೇರಿ ಕಲಾಕ್ಷೇತ್ರದಲ್ಲಿ ಆರಂಭಗೊಳ್ಳಲಿದೆ. ಕೊಡಗು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಹಿಸಲಿದ್ದು, ಕೊಡಗು-ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಯುವ ಸಂಘ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಚಿತ್ರಾ ವೈ., ಎಫ್‍ಎಂಕೆಎಂಸಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಯೋಜನಾಧಿಕಾರಿ ಡಾ. ಗೀತಾಂಜಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥsÀಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಸಿ. ದಯಾನಂದ ‘ಪ್ರಸ್ತುತ ಸಮಾಜದಲ್ಲಿ ಯುವಜನತೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಜಿಲ್ಲಾ ಯುವ ಸಂಘ ಪ್ರಶಸ್ತಿ - ಈ ಬಾರಿಯ ನೆಹರು ಯುವ ಕೇಂದ್ರದ ಅತ್ಯುತ್ತಮ ಜಿಲ್ಲಾ ಯುವ ಸಂಘ ಪ್ರಶಸ್ತಿಯನ್ನು ಸೋಮವಾರಪೇಟೆಯ ಬೀಟಿಕಟ್ಟೆ ಅಂಬೇಡ್ಕರ್ ಯುವಕ ಸಂಘ ಪಡೆದುಕೊಂಡಿದ್ದು, ಪ್ರಶಸ್ತಿಯು ರೂ. 25 ಸಾವಿರದ ಚೆಕ್, ಸ್ಮರಣಿಕೆ ಮತ್ತು ಫಲತಾಂಬೂಲಗಳನ್ನು ಒಳಗೊಂಡಿದೆ. ಅಲ್ಲದೇ ಜಿಲ್ಲೆಯ ಆಯ್ದ ಯುವ ಸಂಘಗಳಿಗೆ ನೆಹರು ಯುವ ಕೇಂದ್ರ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಿರುವುದಾಗಿ ಸುಕುಮಾರ್ ತಿಳಿಸಿದ್ದಾರೆ.