ಕುಶಾಲನಗರ, ಮಾ. 6: ಕರ್ನಾಟಕ ಲೋಕಾಯುಕ್ತ ಮಡಿಕೇರಿ ವಿಭಾಗದ ಪೊಲೀಸ್ ನಿರೀಕ್ಷಕರು ಕುಶಾಲನಗರ ಪಟ್ಟಣ ಪಂಚಾಯ್ತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಶಾಲನಗರ ಪಟ್ಟಣ ಪಂಚಾಯ್ತಿ ಕಛೇರಿಯಲ್ಲಿ ಕಡತ ವಿಲೇವಾರಿ, ಸಾರ್ವಜನಿಕ ಸೇವೆಗಳನ್ನು ಒದಗಿಸುತ್ತಿರುವ ಬಗ್ಗೆ ಮುಖ್ಯಾಧಿಕಾರಿ ಸುಜಯ್ ಕುಮಾರ್ ಅವರಿಂದ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಜಿ.ಕೆ.ಸುಬ್ರಮಣ್ಯ ಮಾಹಿತಿ ಕಲೆ ಹಾಕಿದರು.

ಈ ಸಂದರ್ಭ ಮಾತನಾಡಿದ ಸುಬ್ರಮಣ್ಯ ಅವರು, ಕಛೇರಿ ಕಾರ್ಯಗಳಲ್ಲಿ ಕೆಲವು ವಿಳಂಬ ಉಂಟಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಆ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಪಂಚಾಯ್ತಿಯಲ್ಲಿ ಯಾವುದೇ ರೀತಿಯ ಅಸಮರ್ಪಕ ಅಥವಾ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ನೀಡುವ ಅವಕಾಶ ಸಾರ್ವಜನಿಕರಿಗೆ ಇದೆ ಎಂದರು.ದೂರದ ಸ್ಥಳಗಳಿಂದ ಆಗಮಿಸುವ ಸಾರ್ವಜನಿಕರಿಗೆ ಮತ್ತು ಅತಿ ವಿಳಂಬ ಉಂಟಾಗುವ ಕಾರ್ಯಗಳಿಗೆ ಪ್ರಮುಖ ಆದ್ಯತೆ ನೀಡಿ ಆದಷ್ಟು ಬೇಗ ನಿಗದಿತ ಸೇವೆ ಒದಗಿಸುವಂತೆ ಅವರು ಪಂಚಾಯಿತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭ ಇಲಾಖೆಯ ಸಿಬ್ಬಂದಿಗಳಾದ ಲೋಕೇಶ್, ಶಶಿ ಇದ್ದರು.