ಮಡಿಕೇರಿ, ಮಾ. 6: ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಖಾಸಗಿ ವಲಯದ ಉದ್ಯೋಗಗಳಲ್ಲಿ ಹೆಚ್ಚು ಹೆಚ್ಚು ನೇಮಕಾತಿ ಮಾಡಿಕೊಳ್ಳಲು ಮಾಲೀಕರನ್ನು ಅಥವಾ ಉದ್ಯೋಗದಾತರನ್ನು ಉತ್ತೇಜಿಸುವ ದೃಷ್ಠಿಯಿಂದ ಮತ್ತು ಈ ಮೂಲಕ ಪ.ಜಾ ಹಾಗೂ ಪ.ಪಂ. ಅಭ್ಯರ್ಥಿಗಳು ಖಾಸಗಿ ವಲಯದಲ್ಲಿ ಉದ್ಯೋಗವಕಾಶ ಪಡೆಯಲು ಅನುಕೂಲವಾಗುವಂತೆ ‘ಆಶಾದೀಪ’ ಎಂಬ ನೂತನ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯನ್ನು ಕರ್ನಾಟಕ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭಧ್ರತಾ (ಆಶಾದೀಪ ಯೋಜನೆ) ಸೊಸೈಟಿಯ ಮೂಲಕ ಜಾರಿಗೊಳಿಸಲಾಗುತ್ತಿದೆ. ಯೋಜನೆಯ ಉದ್ದೇಶಗಳೆಂದರೆ, ಖಾಸಗಿ ವಲಯದ ಸಂಸ್ಥೆಗಳಲ್ಲಿ ಪ.ಜಾ. ಹಾಗೂ ಪ.ಪಂ. ರವರಿಗೆ ಉದ್ಯೋಗ ದೊರಕಿಸಿಕೊಡುವುದು, ಪ.ಜಾ. ಹಾಗೂ ಪ.ಪಂ. ಜನರ ಸಾಮಾಜಿಕ ಹಾಗೂ ಆರ್ಥಿಕ ಜೀವನಮಟ್ಟವನ್ನು ಸುಧಾರಿಸುವುದು, ಪ.ಜಾ., ಪ.ಪಂ. ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವುದನ್ನು ಉತ್ತೇಜಿಸಲು, ನೇಮಕಾತಿ ಮಾಡಿಕೊಂಡ ಸಂಸ್ಥೆಗಳಿಗೆ ಅಂತಹ ನೌಕರರ ಇ.ಎಸ್.ಐ. ಮತ್ತು ಪಿ.ಎಫ್. ವಂತಿಕೆಯನ್ನು ಮರು ಪಾವತಿಸುವ ಮೂಲಕ ಆರ್ಥಿಕ ಸಹಾಯ ನೀಡುವುದು, ತರಬೇತಿ ಪಡೆಯುವ ಅಪ್ರೆಂಟೈಸ್ಗಳಿಗೆ ಶಿಷ್ಯವೇತನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಯೋಜನೆಯ ಸೌಲಭ್ಯಗಳೆಂದರೆ, ಮಾಲೀಕರು ಪಾವತಿಸುವ ಇ.ಎಸ್.ಐ. ಮತ್ತು ಪಿ.ಎಫ್. ವಂತಿಕೆ ಮರುಪಾವತಿಗೆ ಸಂಬಂಧಿಸಿದಂತೆ, ಖಾಸಗಿ ವಲಯದ ಸಂಸ್ಥೆಗಳಲ್ಲಿ ಹೊಸದಾಗಿ ನೇಮಿಸಿಕೊಳ್ಳುವ ಪ.ಜಾ. ಹಾಗೂ ಪ.ಪಂ. ಉದ್ಯೋಗಿಗಳಿಗೆ ಮಾಲೀಕರು ಅಥವಾ ಉದ್ಯೋಗದಾತರು ಕಡ್ಡಾಯವಾಗಿ ಪಾವತಿಸಬೇಕಾದ ಶಾಸನಬದ್ಧ ಭವಿಷ್ಯ ನಿಧಿ ಹಾಗೂ ಇ.ಎಸ್.ಐ ವಂತಿಕೆಯನ್ನು ರಾಜ್ಯ ಸರ್ಕಾರದಿಂದ ಮಾಲೀಕರು ಅಥವಾ ಉದ್ಯೋಗದಾತರಿಗೆ ಎರಡು ವರ್ಷಗಳ ಅವಧಿ ಮೇರೆಗೆ ಮರುಪಾವತಿಸುವುದು, ಅಪ್ರೆಂಟೈಸ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳ ಶಿಷ್ಯ ವೇತನ ಮರುಪಾವತಿಗೆ ಸಂಬಂಧಿಸಿದಂತೆ, ಒಂದು ವರ್ಷದ ಅವಧಿಯ ಸಾಮಾನ್ಯ ಹಾಗೂ ಎರಡು ವರ್ಷದ ಅವಧಿಯ ಸಮಗ್ರ ಅಪ್ರೆಂಟೈಸ್ ತರಬೇತಿ ಪಡೆಯುತ್ತಿರುವ ಪ.ಜಾ ಮತ್ತು ಪ.ಪಂ ಅಭ್ಯರ್ಥಿಗಳಿಗೆ ಪಾವತಿಸಬೇಕಾದ ಮಾಸಿಕ ಶಿಷ್ಯವೇತನ ಮೊತ್ತದಲ್ಲಿ ಶೇ. 50 ರಷ್ಟು (ಗರಿಷ್ಠ ಮಾಸಿಕ ರೂ. 3000) ಮರುಪಾವತಿಸುವುದು. ಅಪ್ರೆಂಟೈಸ್ ನಂತರ ಖಾಯಂ ಮಾಡಿದಲ್ಲಿ ವೇತನ ಮರುಪಾವತಿಗೆ ಸಂಬಂಧಿಸಿದಂತೆ, ಅಪ್ರೆಂಟಿಸ್ ತರಬೇತಿ ಪಡೆದ ಪ.ಜಾ ಹಾಗೂ ಪ.ಪಂ ಅಭ್ಯರ್ಥಿಗಳನ್ನೇ ಖಾಯಂ ಹುದ್ದೆಗಳಲ್ಲಿ ನೇಮಕಾತಿ ಮಾಡಿಕೊಂಡಲ್ಲಿ, ಅಂತಹ ನೌಕರರಿಗೆ ಆಯಾ ಹುದ್ದೆಗಳಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಟ ವೇತನ ದರದಲ್ಲಿ ಶೇ. 50 ರಷ್ಟು ಮೊತ್ತವನ್ನು ಉದ್ಯೋಗದಾತರಿಗೆ ಗರಿಷ್ಠ ಎರಡು ವರ್ಷಗಳ ಅವಧಿಗೆ ಮರುಪಾವತಿ ಮಾಡಲಾಗುತ್ತದೆ.
ಕಾರ್ಮಿಕರಿಗೆ ‘ಆಶಾದೀಪ’: ಕಾರ್ಮಿಕ ಸಹಾಯವಾಣಿ ನಾನಾ ಕ್ಷೇತ್ರಗಳ ಕಾರ್ಮಿಕರಿಗೆ ಸರ್ಕಾರದ ಸವಲತ್ತು ಕುರಿತಂತೆ ಸೂಕ್ತ ಮಾಹಿತಿ ಒದಗಿಸುವುದು ಹಾಗೂ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕರಿಸಿ ಪರಿಹಾರ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಅದಕ್ಕಾಗಿ ದಿನದ 24 ತಾಸು ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಟ್ಟಡದ 4ನೇ ಮಹಡಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ 155214 ಕ್ಕೆ ಕರೆಮಾಡಿ ಸಮಸ್ಯೆ ಹೇಳಿಕೊಳ್ಳಬಹುದು. ವಾಟ್ಸ್ಆಪ್ ಸಂಖ್ಯೆ 9333333684 ಮೂಲಕವು ದೂರು ದಾಖಲಿಸಬಹುದಾಗಿದೆ.
ಆಶಾದೀಪದ ಆಶಯ: ಕಾರ್ಮಿಕರಿಗೆ ಸರ್ಕಾರ ವಿವಿಧ ಕಾರ್ಮಿಕ ಕಲ್ಯಾಣ ಕಾರ್ಯಕ್ರಮ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಕಾರ್ಮಿಕರನ್ನು ಕಾರ್ಮಿಕ ಕಲ್ಯಾಣ ಯೋಜನೆಗಳ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗೆ ನೋಂದಾಯಿಸಿ, ಅದರ ಪ್ರಯೋಜನ ತಲುಪುವಂತೆ ಮಾಡುವುದು, ಕಾರ್ಮಿಕರ ಉದ್ಯೋಗಕ್ಕೆ ಸಂಬಂಧಿಸಿದ ದೂರು, ಕೆಲಸದ ಸ್ಥಳದಲ್ಲಿ ಸುರಕ್ಷತೆ, ಕನಿಷ್ಟ ವೇತನ, ಪ್ರಸೂತಿ ಸೌಲಭ್ಯ, ಬಾಲ ಕಾರ್ಮಿಕರ ನೇಮಕಾತಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಕುಂದುಕೊರತೆಗಳಿಗೆ ಪರಿಹಾರ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾದೀಪ ಯೋಜನೆ) ಸೊಸೈಟಿ, ಕಲ್ಯಾಣ ಸುರಕ್ಷಾ ಭವನ, 3ನೇ ಮಹಡಿ, ಐ.ಟಿ.ಐ ಕಾಂಪೌಂಡ್, ಡೈರಿ ವೃತ್ತ, ಬನ್ನೇರುಘಟ್ಟ ರಸ್ತೆ, ಬೆಂಗಳೂರು, ದೂರವಾಣಿ ಸಂಖ್ಯೆ 080-29759983/8883, ಇ-ಮೇಲ್ ವಿಳಾಸ ಚಿshಚಿಜeeಠಿಚಿ29@gmಚಿiಟ.ಛಿom ಹಾಗೂ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿರುವ ಕಾರ್ಮಿಕ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.