(ಫೆ. 28 ರ ಸಂಚಿಕೆಯಿಂದ)

ಹವಾಮಾನದ ಏರುಪೇರು: ಸಂಜೆಯ ಹೊತ್ತು ಬೇಸ್ ಕ್ಯಾಂಪ್‍ಗೆ ಸುಮಾರು 70 ಮಂದಿಯ ಬೇಸರ ಮುಖಗಳನ್ನು ಒಳಗೊಂಡ ಗುಂಪು ಆಗಮಿಸಿತು. ಸ್ವಲ್ಪ ಸಮಯದ ನಂತರ ಹಸನ್ಮುಖವಾಗಿರುವ ಗುಂಪಿನವರೂ ಆಗಮಿಸಿದರು.

ಮೊದಲು ಬಂದ ಗುಂಪು ಕೇವಲ 8 ದಿನದ ಚಾರಣದ ನಂತರ ಚಾರಣ ಮುಂದುವರಿಸಲಾಗದಷ್ಟು ಕೆಟ್ಟದಾಗಿದ್ದ ಹವಾಮಾನದ ಕಾರಣ ಚಾರಣದ ಗುರಿಯಾಗಿದ್ದ ತಿಲಾ ಲೋಟನಿಯನ್ನು ತಲುಪದೆ ವಾಪಸಾದರೂ, 2ನೇ ಗುಂಪಿನವರಿಗೆ ಅದೃಷ್ಟ ಒಳ್ಳೆಯದಿದ್ದರಿಂದ ಸಂಪೂರ್ಣ ಚಾರಣ ಮುಗಿಸಿ ಬಂದಿದ್ದರು. ಚಾರಣ ಮುಗಿಸಿ ಬಂದವರು ತಮ್ಮ ಅನುಭವವನ್ನು ನಮ್ಮಲ್ಲಿ ಹಂಚಿಕೊಂಡಾಗಲೇ ನಮ್ಮ ಮೈ ಜುಮ್ ಎಂದಿತು.

ಬೇಸ್ ಕ್ಯಾಂಪ್ನಲ್ಲಿ ಅಂದು ಕಾರ್ಯಕ್ರಮವನ್ನು ನಮ್ಮ ಗುಂಪು ನೀಡಬೇಕಾಗಿದ್ದುದರಿಂದ ಸಿದ್ಧರಾಗತೊಡಗಿದೆವು. ಕೇವಲ 2 ತಾಸಿನೊಳಗೆ ಡ್ಯಾನ್ಸ್, ಹಾಡು, ನಾಟಕ ಹೀಗೆ ಹಲವು ಕಾರ್ಯಕ್ರಮಗಳನ್ನು ನೀಡಲು ತಯಾರಾಗಿ ನಮ್ಮ ಗುಂಪಿನಲ್ಲಿದ್ದ ವೈದ್ಯರ ನಿರೂಪಣೆಯೊಂದಿಗೆ ಉತ್ತಮ ಕಾರ್ಯಕ್ರಮ ನೀಡುವಲ್ಲಿ ಯಶಸ್ವಿಯಾದೆವು.

ಮೇ 14: ಸಮುದ್ರ ಮಟ್ಟದಿಂದ ಸುಮಾರು 7000 ಅಡಿ ಇರುವ ಗ್ರಹಣ್ ಎಂಬ ಹಳ್ಳಿಗೆ ಚಾರಣ. ಅಲ್ಲಿನ ಕನಿಷ್ಟ ತಾಪಮಾನ ಸುಮಾರು 5 ಡಿಗ್ರಿ ಸೆಲ್‍ಶಿಯಸ್.

ಜಡಿ ಮಳೆಯ ನಡುವೆ ಮಂದಗತಿಯ ಚಾರಣ: ಮೇ 14 ರಂದು ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಚಾರಣಕ್ಕೆ ಸಿದ್ದರಾಗುತ್ತಿದ್ದಂತೆಯೇ ಧಾರಾಕಾರ ಮಳೆ. ಇಷ್ಟು ದಿನ ಕಾಣದ ಮಳೆ ಇದೀಗ ಚಾರಣ ಶುರುವಾಗುವ ಮೊದಲೇ ದುರಾದೃಷ್ಟ ಬಂದು ಹೊಡೆದಂತೆ ರಭಸದಿಂದ ಸುರಿಯಿತು. ಟೆಂಟ್‍ಗಳಿಂದ ಹೊರಗೆ ಬಂದು ಚಾರಣಕ್ಕೆ ತಯಾರಾಗಿದ್ದ ಎಲ್ಲರೂ ತಮ್ಮ ತಮ್ಮ ಟೆಂಟ್‍ಗಳಿಗೆ ಹಿಂತಿರುಗಿದರು. ಸುಮಾರು 1 ಗಂಟೆ ಕಾದರೂ ನಿಲ್ಲದ ಮಳೆ, ನಿಲ್ಲುವ ಕುರುಹುಗಳೂ ಇರಲಿಲ್ಲ. ಅಷ್ಟರಲ್ಲಿ ಮಳೆಯ ಗರ್ಜನೆಯನ್ನೂ ಮೀರಿಸುವ ಲೆಫ್ಟಿನೆಂಟ್ ಅವರ ಗರ್ಜನೆ ! ಟೆಂಟಿನಿಂದ ಧಾವಿಸಿ ಎಲ್ಲರೂ ಹೊರಗೆ ಸೇರಿಕೊಂಡರು. “ಮಳೆ ನಿಲ್ಲುವ ಹಾಗೆ ಕಾಣುತ್ತಿಲ್ಲ, ಮಳೆಯಲ್ಲೇ ಚಾರಣ ಮಾಡಲು ತಯಾರಿದ್ದೀರ?” ಎಂಬ ಲೆಫ್ಟಿನೆಂಟ್‍ನ ಪ್ರಶ್ನೆಗೆ 78 ಮಂದಿಯನ್ನು ಹೊಂದಿದ್ದ ನಮ್ಮ ಗುಂಪಿನ ಪ್ರತಿಯೊಬ್ಬರ ಉತ್ತರ “ಎಸ್ ಸರ್” ಎಂದು ಪ್ರತಿಧ್ವನಿಸಿತು. ಮಳೆಯ ನಡುವೆಯೇ ರಾಷ್ಟ್ರಗೀತೆಯನ್ನು ಹಾಡಿ ಬೇಸ್ ಕ್ಯಾಂಪ್‍ಗೆ ಅಂದು ಬಂದಿದ್ದ ಹೊಸ ಗುಂಪಿನವರ ಚಪ್ಪಾಳೆಯ ಪ್ರೋತ್ಸಾಹದಿಂದ ನಮ್ಮ ಚಾರಣಕ್ಕೆ ಚಾಲನೆ ದೊರಕಿತು. ಸುಮಾರು 10 ಕೆ.ಜಿ ತೂಕದ ಬ್ಯಾಗ್, ವಾಟರ್‍ಪ್ರೂಫ್ ಶೂಸ್, ಮರದ ಕೋಲು, ಮಧ್ಯಾಹ್ನ ಊಟಕ್ಕೆ ಬುತ್ತಿ, ಇವೆಲ್ಲವನ್ನು ಹೊತ್ತು 2 ಕಿ.ಮೀ ಕೆಸರುಭರಿತ ಹಾದಿಯಲ್ಲಿ ಚಲಿಸುವಷ್ಟರಲ್ಲಿ 78ರಲ್ಲಿ ಕನಿಷ್ಟ 10 ಮಂದಿಗಾದರೂ ಜಾರಿ ಬಿದ್ದು ದೇಹವಿಡೀ ಕೆಸರು ಮಾಡಿಕೊಳ್ಳುವ ಭಾಗ್ಯ.

ಮಧ್ಯಾಹ್ನ 1 ಗಂಟೆಯವರೆಗೆ ಮಳೆ ಸುರಿಯುತ್ತಿದ್ದು, ಮಂದ ಗತಿಯಲ್ಲೆ ಸಾಗುತ್ತಿದ್ದ ನಮಗೆ ಬೆಟ್ಟದ ನಡುವೆಯೇ ಅಂಗಡಿಗಳು, ಕೆಲವು ತೆರೆದ ಕೊಠಡಿಗಳು ಇರುವ ಸ್ಥಳ ಗೋಚರಿಸಿತು. ಒಬ್ಬಾತನು ಇಲ್ಲಿ ತಲುಪಿದಾಕ್ಷಣ ಬ್ಯಾಗ್, ಶೂಸ್, ಕೋಟ್‍ಗಳನ್ನೆಲ್ಲ ತೆಗೆದು ವಿಶ್ರಮಿಸುವ ಸ್ಥಿತಿಯಲ್ಲಿ ಬಿದ್ದುಕೊಂಡನು, ಇದನ್ನು ಗಮನಿಸಿದ ಗೈಡ್ ಇದು ಲಂಚ್ ಪಾಯಿಂಟ್ (ಊಟದ ಸ್ಥಳ), ಊಟದ ನಂತರ ಇನ್ನು 3 ತಾಸು ಚಾರಣಿಸಿದ ನಂತರ ಗ್ರಹಣ್ ಹಳ್ಳಿ ತಲುಪುತ್ತೇವೆ ಎಂದು ಹೇಳಿದಾಕ್ಷಣ ಅವನ ಮುಖ ಬಾಡಿ ಹೋಯಿತು. ಇಂದಿನ ಚಾರಣ ಮುಗಿಯಿತೆಂದು ಅವನು ತಿಳಿದಿದ್ದನು ! ನಗಾಡುತ್ತಾ ಊಟಕ್ಕೆ ಕುಳಿತೆವು. ಊಟಕ್ಕೆ 3 ಚಪಾತಿ ಅಷ್ಟೆ ತೆಗೆದುಕೊಂಡು ಬಂದಿದ್ದೆ, ಬೇಸ್ ಕ್ಯಾಂಪಿನಲ್ಲಿಯ ಸ್ವಯಂ ಸೇವಕರು 3 ಸಾಕಾಗುವುದಿಲ್ಲ, ಇನ್ನೂ 2 ತಗೊಳ್ಳಿ ಎಂದು ಧಾರಾಳವಾಗಿ ನೀಡಿದ್ದರೂ, 3 ಸಾಕು ಎಂದು ನಗಾಡುತ್ತ ನಿರಾಕರಿಸಿದ್ದು ಈಗ ವಿಷಾದಿಸುವಂತೆ ಮಾಡಿತ್ತು. ಕೊರೆಯುವ ಚಳಿಯಲ್ಲಿ ಕಡಿದಾದ ಬೆಟ್ಟವನ್ನು ಹತ್ತಿದ್ದು, 2 ಪಟ್ಟು ಹೆಚ್ಚು ಹಸಿವಾಗಿತ್ತು. ನಮ್ಮ ಟೆಂಟಿನಲ್ಲಿದ್ದ ಓರ್ವ ಒಂದು ದೊಡ್ಡ ಡಬ್ಬಿಯಲ್ಲಿ ಸುಮಾರು 20 ಚಪಾತಿ ಗಳನ್ನು ತುಂಬಿಕೊಂಡು ಬಂದಿದ್ದರಿಂದ ನನ್ನ ಹಸಿವು ನೀಗಿಸಲು ಸಹಕಾರಿಯಾಯಿತು. ಊಟದ ನಂತರ ಅಂದಿನ ಗುರಿಯಾದ ಗ್ರಹಣ್ ಹಳ್ಳಿಗೆ ನಮ್ಮ ಪಯಣ. ದಾರಿಯ ಉದ್ದಕ್ಕೂ ಅಧಿಕ ಪ್ರೊಟೀನ್ ಉಳ್ಳ ತಿಂಡಿಗಳು (ಹೆಚ್ಚಾಗಿ ಸಿಹಿ ತಿಂಡಿಗಳು) ಚಾರಣಿಸುವ ಶಕ್ತಿ ನೀಡಿತು. ಹೀಗೆ ಮುಂದೆ ಸಾಗುತ್ತ ಇದ್ದಂತೆ ದೂರದಲ್ಲಿ ಹಿಮದಿಂದ ಸಿಂಗಾರಗೊಂಡ ಪರ್ವತಗಳ ಸಾಲು, ನೋಡುತ್ತಿದ್ದಂತೆಯೆ ಮೈಮರೆತ ಭಾವನೆ.

ಕಿರಿಯರೆಲ್ಲರು “ವಾವ್”, ‘‘ಅಮೇಜಿಂಗ್” ಎಂದರೆ ಹಿರಿಯರ ಬಾಯಲ್ಲಿ “ಜೈ ಭಜರಂಗ್ ಬಲಿ” ಹಾಗೂ ಇನ್ನಿತರ ದೇವರ ನಾಮಗಳ ಸ್ತುತಿ. ಸಂಜೆ ಸುಮಾರು 4 ಗಂಟೆಗೆ ಗ್ರಹಣ್ ಹಳ್ಳಿಯನ್ನು ಸಮೀಪಿಸುತ್ತಿದ್ದಂತೆಯೇ ನಮ್ಮನ್ನು ನೋಡಿದ ಆ ಹಳ್ಳಿಯ ಮಕ್ಕಳು ನಮ್ಮೆಡೆಗೆÀ ಓಡಿ ಬಂದು ‘ಟಾಫಿ, ಟಾಫಿ’ ಎಂದು ಹೇಳುತ್ತಾ ಕೈ ಚಾಚುತ್ತಾ ಓಡಿ ಬಂದರು. ಅಲ್ಲಿಗೆ ಚಾರಣಿಗರು ಪ್ರತಿನಿತ್ಯ ಬರುತ್ತಾರೆ. ಇವರೊಡನೆ ಯಾವಾಗಲೂ ಮಕ್ಕಳು ಈ ರೀತಿ ಚಾಕಲೇಟ್ ಇತ್ಯಾದಿ ತಿಂಡಿಗಳನ್ನು ಕೇಳುತ್ತಾರೆ. ಮಕ್ಕಳು ಈ ಕೊರೆಯುವ ಚಳಿಯಲ್ಲಿ ಹರಿದುಹೋದ ಬ್ಯಾಗ್, ಅದರಲ್ಲಿ 2 ಪುಸ್ತಕಗಳು, ಚಳಿಯೇ ತಾಗದ ರೀತಿಯಲ್ಲಿ ಸ್ವೆಟರ್ ರಹಿತ ಯೂನಿಫಾರ್ಮ್ ಧರಿಸಿದ್ದನ್ನು ನೋಡಿ ಅಲ್ಲಿನ ಜನರ ಆರ್ಥಿಕ ಪರಿಸ್ಥಿತಿಯ ಅರಿವು ಆಯಿತು. ಈ ಹಳ್ಳಿಯಲ್ಲಿರು ವವರು ಮುಖ್ಯವಾಗಿ ಪ್ರವಾಸಿಗರಿಗೆ ಅನುಕೂಲವಾಗುವಂತಹ ವಸ್ತುಗಳನ್ನು, ತಿಂಡಿ ತಿನುಸುಗಳು, ಸಣ್ಣ-ಪುಟ್ಟ ವ್ಯಾಪಾರಗಳನ್ನು ಕೂಡ ಮಾಡುತ್ತಾರೆ. ಕೆಲವರು ಹೋಂಸ್ಟೇಗಳನ್ನು ನಡೆಸುತ್ತಾರೆ, ಇನ್ನು ಕೆಲವರು ರಾತ್ರಿ ಸಮಯ ‘ಕ್ಯಾಂಪ್ ಫೈರ್’ ಬಯಸುವ ಪ್ರವಾಸಿಗರಿಗೆ ವ್ಯವಸ್ಥೆ ಕಲ್ಪಿಸಿಕೊಡುತ್ತಾರೆ. ಆದರೆ ಇವೆಲ್ಲವೂ ತಾತ್ಕಾಲಿಕ. ಏಕೆಂದರೆ ಡಿಸೆಂಬರ್ ತಿಂಗಳಿನಲ್ಲಿ ಯಾವಾಗ ಚಳಿಗಾಲ ಶುರುವಾಗುತ್ತದೆಯೊ, ಗ್ರಹಣ್ ಹಳ್ಳಿಯು ಸಂಪೂರ್ಣ ಹಿಮದಿಂದ ಆವರಣಗೊಳ್ಳುತ್ತದೆ. ಇವರೆಲ್ಲರು ಈ ಹಳ್ಳಿಯನ್ನು ಬಿಟ್ಟು ಕಸೋಲ್‍ಗೆ ಹಿಂತೆರಳುತ್ತಾರೆ. ಇಲ್ಲಿ ಪುನಃ ತಾತ್ಕಾಲಿಕವಾಗಿ ಅಂಗಡಿಗಳನ್ನು ತೆಗೆಯುತ್ತಾರೆ.

ಗ್ರಹಣ್ ಹಳ್ಳಿಯ ಕ್ಯಾಂಪಿನಲ್ಲಿ ಕೂಡ ಬೇಸ್ ಕ್ಯಾಂಪಿನಲ್ಲಿದ್ದ ಹಾಗೆಯೇ ಪ್ರತಿ ಟೆಂಟ್‍ನಲ್ಲಿ ಗರಿಷ್ಠ 12 ಮಂದಿಗೆ ಜಾಗ. ಕ್ಯಾಂಪ್ ಗ್ರಹಣ್ ತಲುಪಿದಾಕ್ಷಣ ನಮ್ಮ ಟೆಂಟಿನ 12 ಮಂದಿ ಒಂದೇ ಟೆಂಟಿನಲ್ಲಿ ಸೇರಿಕೊಂಡೆವು. ಪರಿಚಯ ವಾಗಿ 3 ದಿನಗಳು ಆಗದಿದ್ದರೂ ನಮ್ಮಲ್ಲಿನ ಬಾಂಧವ್ಯ ಗಟ್ಟಿಯಾಗಿತ್ತು. ಓರ್ವ ಚಾರಣಿಗನಿಗೆ ಬಹಳ ಆಯಾಸವಾಗಿದ್ದು, ಬೇಸ್ ಕ್ಯಾಂಪಿಗೆ ಹಿಂತೆರಳಲು ಬಯಸಿದನು. ಮುಂದಿನ ದಿನ ಬೆಳಿಗ್ಗೆ ಅವನನ್ನು ಹಳ್ಳಿಯವರ ಜೊತೆ ಬೇಸ್ ಕ್ಯಾಂಪಿಗೆ ಕಳುಹಿಸಲು ತೀರ್ಮಾನಿಸಲಾಯಿತು. ನಮ್ಮ ಗುಂಪಿನ ಸಂಖ್ಯೆ 77 ಕ್ಕೆ ಇಳಿಯಿತು.

ಶೌಚಾಲಯದ ಸಮಸ್ಯೆ : 77 ಜನರಿಗೆ ಇಲ್ಲಿ ಕೇವಲ 4 ಶೌಚಾಲಯ, 2 ಹೆಂಗಸರಿಗೆ, 2 ಗಂಡಸರಿಗೆ. ಗುಂಪಿನಲ್ಲಿ 18 ಹೆಂಗಸರು. ಇನ್ನುಳಿದ 59 ಮಂದಿ ಗಂಡಸರಿಗೆ ಎರಡೇ ಶೌಚಾಲಯ ಬಳಸಲು ಸೌಲಭ್ಯ. ಆದ್ದರಿಂದ ಬೇಗನೆ ಎದ್ದು ಶೌಚಾಲಯಕ್ಕೆ ಹೋಗಲು ನನ್ನ ಉಪಾಯವಾಗಿದ್ದು ಬೆಳಿಗ್ಗೆ 4 ಗಂಟೆಗೆ ಎದ್ದು ಟೆಂಟಿನ ಹೊರಗೆ ಬಂದೆ. ಆಗಸವನ್ನು ನೋಡಿದಕ್ಷಣ ಯಾವುದೋ ಬೇರೆ ಗ್ರಹದಲ್ಲಿದ್ದ ಹಾಗೆ ಭಾವನೆ; ಕಾರಣ ಅಲ್ಲಿ ವಿದ್ಯುತ್ ಸೌಲಭ್ಯ ಇರಲಿಲ್ಲ, ಕ್ಯಾಂಪಿನಲ್ಲಿದ್ದ ಜನರೇಟರ್ ಹಾಳಾಗಿತ್ತು. ಸುತ್ತ ಮುತ್ತ ಯಾವುದೇ ಸಣ್ಣ ಪ್ರಮಾಣದ ಬೆಳಕು ಕೂಡ ಇರದ ಕಾರಣ ಕಗ್ಗತ್ತಲಿನಿಂದ ಕೂಡಿದ್ದು, ನಕ್ಷತ್ರಗಳು ಬಹಳ ಸ್ಪಷ್ಟವಾಗಿ ಕಾಣಿಸುತ್ತಿದ್ದವು. ನಗರ-ಪಟ್ಟಣಗಳಲ್ಲಿ ಬೀದಿ ದೀಪಗಳು, ಮನೆಯಲ್ಲಿನ ದೀಪಗಳು, ಹೀಗೆ ಹಲವು ಬೆಳಕಿನ ಮೂಲ ಗಳಿಂದ ಆಗಸದಲ್ಲಿನ ಸುಂದರ ದೃಶ್ಯಾವಳಿಗಳನ್ನು ನೋಡಲು ಕಷ್ಟವಾಗುತ್ತದೆ, ಆದರೆ ಅಲ್ಲಿನ ಆಗಸವು 100 ಪಟ್ಟು ಹೆಚ್ಚು ನಕ್ಷತ್ರಗಳನ್ನು ಹೊಂದಿತ್ತು.

ಮೇ 15: ಸಮುದ್ರ ಮಟ್ಟದಿಂದ ಸುಮಾರು 9000 ಅಡಿ ಎತ್ತರದ ಪಾದ್ರಿಗೆ ಪಯಣ. ಅಲ್ಲಿನ ಕನಿಷ್ಟ ತಾಪಮಾನ ಸುಮಾರು 3 ಡಿಗ್ರಿ ಸೆಲ್‍ಶಿಯಸ್.

ಪ್ರತಿನಿತ್ಯ ಚಾರಣಿಸುವ ಮಜ್ಜಿಗೆ ಮಾರುವ ಅಜ್ಜಿ, ಕುರಿ ಮೇಯಿಸುವ ವೃದ್ಧ.

ಅಂದು ಅಕ್ಕನ ಹುಟ್ಟುಹಬ್ಬ, ಶುಭ ಹಾರೈಸಲು ಫೋನ್ ಸಿಗ್‍ನಲ್ ಇಲ್ಲ. ಇನ್ನು ಕೊನೆಯ ಕ್ಯಾಂಪ್ ತಲುಪುವ ತನಕ ಸಿಗ್‍ನಲ್ ಹಾಗೂ ವಿದ್ಯುತ್ ರಹಿತ ಸುಮಾರು 7 ದಿನಗಳು ಕಳೆಯಬೇಕಿತ್ತು. ಫೋನ್ ಬೇಸ್ ಕ್ಯಾಂಪಿನಲ್ಲೆ ಚಾರ್ಜ್ ಮಾಡಲಾಗಿದ್ದು, ಬರಿ ಫೋಟೋ ತೆಗೆಯಲು ಬಳಕೆಯಾಗುತ್ತಿತ್ತು. ಬೆಳಿಗ್ಗೆ ಸುಮಾರು 8 ಗಂಟೆಗೆ ಗ್ರಹಣ್ ಹಳ್ಳಿಯನ್ನು ಬಿಟ್ಟೆವು. ಮೋಡ ಭರಿತ, ಮಳೆ ರಹಿತ ತಂಪಾದ ಹವಾಮಾನ. ದಾರಿಯಂತು ಬಣ್ಣಿಸಲಾಗದಷ್ಟು ಸುಂದರ. 4 ದಿನಗಳಿಂದ ರೋಟಿ, ಪೂರಿ, ದಾಲ್ ಗಳನ್ನೊಳಗೊಂಡ ಆಹಾರದ ಸೇವನೆಯ ಫಲ-, ದೇಹದಲ್ಲಿ ಉಷ್ಣಾಂಶ ಏರಿ, ತಡೆಯಲಾರದ ಎದೆ ಉರಿ. ಚಾರಣಿಗರನ್ನು ಬಿಟ್ಟು ಯಾರೊಬ್ಬ ನರ ಪಿಳ್ಳೆಯು ಕಾಣಸಿಗದ ಈ ಪರ್ವತದ ಕಾಡಿನಲ್ಲಿ ಒಬ್ಬಾಕೆ ಮಜ್ಜಿಗೆ ಹಾಗೂ ಜೂಸ್ ಬಾಟಲಿಗಳನ್ನು ಹಿಡಿದುಕೊಂಡು ನಮ್ಮತ್ತ ಬಂದಳು. ಚಾರಣಿಗರಿಗೆ ಅನುಕೂಲವಾಗುವಂತೆ ಈಕೆ ಪ್ರತಿ ದಿನ ಈ ಪರ್ವತವನ್ನು ಚಾರಣಿಸಿ ಮಜ್ಜಿಗೆ, ಜೂಸ್‍ಗಳನ್ನು ಮಾರಿ ಜೀವನ ಸಾಗಿಸುತ್ತಾಳೆ. 2 ಗ್ಲಾಸ್ ಮಜ್ಜಿಗೆ ಸೇವಿಸಿದ ನಂತರ ಎದೆ ಉರಿ ಕಡಿಮೆಯಾಯಿತು. ಸ್ವಲ್ಪ ಸಮಯದ ನಂತರ ಲಂಚ್ ಪಾಯಿಂಟ್ ತಲುಪಿದೆವು. ಊಟದ ನಂತರ ಸ್ವಲ್ಪ ಸಮಯ ವಿಶ್ರಮಿಸಲು ಗೈಡ್‍ಗಳು ತಿಳಿಸಿದರು. (ಮುಂದುವರಿಯುವುದು)

- ಜಿ.ಆರ್. ಪ್ರಜ್ವಲ್