(ವಿಶೇಷ ವರದಿ : ರಫೀಕ್ ತೂಚಮಕೇರಿ)

ಪ್ರವಾಸೋದ್ಯಮಕ್ಕೆ ಪ್ರಸಿದ್ಧಿಯಾಗಿರುವ ಮೈಸೂರು ನಗರ ತನ್ನದೇ ಆದ ವಿಮಾನ ನಿಲ್ದಾಣ ಹೊಂದಿಕೊಂಡಿದ್ದರೂ ಪೂರ್ಣಪ್ರಮಾಣದ ಪ್ರಭಾವ ಸಾಧಿಸುವಲ್ಲಿ ಇನ್ನೂ ಯಶಸ್ವಿಯಾಗಲಿಲ್ಲ. ಆದ್ದರಿಂದ ನೆರೆ ಜಿಲ್ಲೆ ಕೊಡಗಿಗೂ ಇದರ ಪ್ರಯೋಜನ ಇನ್ನೂ ತಲುಪಿಲ್ಲ ಎನ್ನಬಹುದು. ರಾಜ್ಯದಲ್ಲಿ ಐಟಿ ಉತ್ಪನ್ನಗಳ ಎರಡನೇ ಅತಿದೊಡ್ಡ ರಫ್ತುದಾರ ನಗರ ಎಂಬ ಖ್ಯಾತಿಗಳಿಸಿರುವ ಮೈಸೂರು, ನಿರೀಕ್ಷೆಯಂತೆ ವಿಮಾನಯಾನ ಕ್ಷೇತ್ರದಲ್ಲಿ ಮುನ್ನೆಡೆದಿದ್ದರೆ ಇಂದು ಮೈಸೂರಿನಲ್ಲಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಿಸಬೇಕಿತ್ತು. ಈಗಿರುವ ಮೈಸೂರು ವಿಮಾನ ನಿಲ್ದಾಣ ಜನಾಕರ್ಷಣೆಗೆ ಒಳಪಡಬೇಕಿದೆ. ಹಾಗಾದರೆ ಕೊಡಗಿಗೆ ಸಮೀಪವಿರುವ ಮೈಸೂರು ವಿಮಾನ ನಿಲ್ದಾಣದ ಬಗ್ಗೆ ಪ್ರಚಾರದ ಕೊರತೆ ಇದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ.

ಮೈಸೂರು ನಗರದಿಂದ (ಮಂಡಕಳ್ಳಿ) ವಿಮಾನ ನಿಲ್ದಾಣ ಕೇವಲ 10 ಕಿಲೋಮೀಟರ್ ದೂರದಲ್ಲಿದೆ. ಇದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಈ ವಿಮಾನ ನಿಲ್ದಾಣದ ಕಾರ್ಯಚಟುವಟಿಕೆಗಳು ಸ್ವಲ್ಪ ಚೇತರಿಕೆ ಕಾಣುತ್ತಿದೆ. ಇದು ಮೈಸೂರು ಮತ್ತು ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬುದು ಉಭಯ ಜಿಲ್ಲೆಯ ವಿವಿಧ ಉದ್ಯಮಿಗಳ ಅಭಿಪ್ರಾಯವಾಗಿದೆ. ಹೈದರಾಬಾದ್, ಚೆನ್ನೈ, ಗೋವಾ, ಬೆಂಗಳೂರು, ಕಲಬುರಗಿ, ಬೆಳಗಾಂ ನಗರಗಳಿಗೆ ಇಲ್ಲಿಂದ ನೇರ ವಿಮಾನಯಾನ ಸೌಲಭ್ಯವಿದೆ.

ಬೆಂಗಳೂರು, ಕಣ್ಣೂರು ಮೊದಲಾದ ವಿಮಾನ ನಿಲ್ದಾಣಗಳಿಗೆ ಇದನ್ನು ಹೋಲಿಸಲು ಅಸಾಧ್ಯವಾದರೂ ನಿರ್ಜನ ಪ್ರದೇಶದಲ್ಲಿ ಸುಂದರವಾಗಿ ರೂಪುಗೊಂಡ ವಿಮಾನ ನಿಲ್ದಾಣವಿದು. ಭವಿಷ್ಯದಲ್ಲಿ ಸಾಕಷ್ಟು ಭರವಸೆಗಳನ್ನು ಇಡಬಹುದಾದ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಮೈಸೂರು ಕೂಡ ಒಂದಾಗಿದೆ.

ಪ್ರಯಾಣಿಕರ ಒತ್ತಡ ಕಡಿಮೆ ಇರುವುದರಿಂದ ಬೇರೆ ವಿಮಾನ ನಿಲ್ದಾಣಗಳಲ್ಲಿರುವಂತೆ ಇಲ್ಲಿ ಯಾವುದೇ ಕಿರಿಕಿರಿಗಳಿಲ್ಲ. ಇದೀಗ ಇಲ್ಲಿಗೆ ಬರುವ ಮತ್ತು ಇಲ್ಲಿಂದ ತೆರಳುವ ಎಲ್ಲಾ ವಿಮಾನಗಳಲ್ಲಿ ಪ್ರತಿದಿನ ಪ್ರಯಾಣಿಕರ ಸಂಖ್ಯೆ ಭರ್ತಿ ಆಗಿರುತ್ತದೆ ಎಂದು ಮೈಸೂರು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳುತ್ತಾರೆ. ದಿನೇ-ದಿನೇ ಪ್ರಯಾಣಿಕರಿಂದ ಬೇರೆ-ಬೇರೆ ನಗರಗಳಿಗೆ ವಿಮಾನಯಾನ ಸೇವೆ ಕಲ್ಪಿಸುವಂತೆ ಬೇಡಿಕೆಗಳು ಬರುತ್ತಿವೆ ಎಂಬುದು ಇವರ ಹೇಳಿಕೆಯಾಗಿದೆ.

ಕೊಡಗಿನಲ್ಲಿ ಈ ಕುರಿತು ಪ್ರಚಾರ ತೀರಾ ಕಡಿಮೆಯೇ ಎನ್ನಬಹುದು. ಆದ್ದರಿಂದ ಸಂಬಂಧಿಸಿದವರು ಈ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸಿದರೆ ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ ಇದರಿಂದ ಕೊಡಗಿನ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ಅಲ್ಲದೆ ಕೊಡಗಿನ ಪರಿಸರ ಪ್ರವಾಸೋದ್ಯಮಕ್ಕೂ ಹೊಸ ಆಯಾಮ ದೊರಕಬಹುದೇನೊ.

ಮೈಸೂರು ವಿಮಾನ ನಿಲ್ದಾಣದ ಇತಿಹಾಸ : 1940ರಲ್ಲಿ ಅಂದಿನ ಮೈಸೂರು ಸಾಮ್ರಾಜ್ಯದ ಮಹಾರಾಜರ ದೂರದೃಷ್ಟಿತ್ವದಲ್ಲಿ 290ಎಕರೆ (120 ಹೆಕ್ಟೇರ್) ಪ್ರದೇಶದಲ್ಲಿ (ಈಗಿನ ಮಂಡಕ್ಕಳ್ಳಿ) ಮೈಸೂರು ವಿಮಾನ ನಿಲ್ದಾಣವು ಸ್ಥಾಪನೆಯಾಯಿತು. 1947ರ ನಂತರ ಕರ್ನಾಟಕ ಸರ್ಕಾರ ಈ ವಿಮಾನ ನಿಲ್ದಾಣದ ನಿಯಂತ್ರಣವನ್ನು ವಹಿಸಿಕೊಂಡಿತು. ಬಳಿಕ ಇದನ್ನು 1950ರಿಂದ ಕೇಂದ್ರ ಸರಕಾರದ ಅಧೀನದ ನಾಗರಿಕ ವಿಮಾನಯಾನ ಸಚಿವಾಲಯವು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಆರಂಭದಲ್ಲಿ ಅಪರೂಪಕ್ಕೆ ಪ್ರಯಾಣಿಕರ ಸಣ್ಣ ವಿಮಾನ ಸೇವೆ, ಭಾರತೀಯ ವಾಯುಪಡೆಯ ತರಬೇತಿ ವಿಮಾನಗಳು ಮತ್ತು ಇತರ ಕಾರ್ಯಾಚರಣೆಗಳು ಮಾತ್ರ ಮೈಸೂರು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದ್ದವು.

ಹೇಗಿದೆ ಈಗ ?: ಅಡ್ಡಿ ಆತಂಕಗಳ ನಡುವೆಯೂ ಮೈಸೂರು ಸಂಸದರ ಆಸಕ್ತಿಯ ಫಲವಾಗಿ 2019ರ ಅಕ್ಟೋಬರ್‍ನಿಂದ ಮೈಸೂರು ವಿಮಾನ ನಿಲ್ದಾಣದಿಂದ ಹೆಚ್ಚು ವಿಮಾನಯಾನ ಸಂಸ್ಥೆಗಳು ಸೇವೆ ಒದಗಿಸುತ್ತಿವೆ. ಇದರಿಂದ ಮೈಸೂರು ವಿಮಾನಯಾನ ಸೇವೆಯಲ್ಲಿ ಸ್ವಲ್ಪ ಚೇತರಿಕೆ ಕಂಡು ಬರತೊಡಗಿದೆ. ಮೈಸೂರು ವಿಮಾನ ನಿಲ್ದಾಣವು ಪ್ರಸ್ತುತ 1,740 ಮೀಟರ್ ಉದ್ದದ ಮತ್ತು 30 ಮೀಟರ್ ಅಗಲದ ಒಂದು ರನ್‍ವೇಯನ್ನು ಹೊಂದಿದೆ. ಇದರಿಂದಾಗಿ ಎಟಿಆರ್ 72 ಟರ್ಬೊಪೆÇ್ರಪ್ ಮಾದರಿಯ ವಿಮಾನಗಳಿಗೆ ಮಾತ್ರ ಈ ರನ್‍ವೇ ಬಳಕೆಯಾಗುತ್ತಿದೆ. ವಿಮಾನ ನಿಲ್ದಾಣದ ಏಪ್ರನ್ (ವಿಮಾನವನ್ನು ನಿಲುಗಡೆ ಮಾಡುವ ಪ್ರದೇಶ)ನಲ್ಲಿ ಏಕಕಾಲಕ್ಕೆ ಮೂರು ನಿಮಾನಗಳ ನಿಲುಗಡೆಗೆ ಮಾತ್ರ ಅವಕಾಶವಿದೆ. ಮೈಸೂರು ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್ 3,250 ಚದರ ಮೀಟರ್ (35,000 ಚದರ ಅಡಿ) ವಿಸ್ತಿರ್ಣ ಹೊಂದಿದ್ದು, ಗರಿಷ್ಠ 150 ಪ್ರಯಾಣಿಕರನ್ನು ಏಕಕಾಲಕ್ಕೆ ನಿರ್ವಹಿಸುವ ಸಾಮಥ್ರ್ಯ ಪಡೆದಿದೆ. ಕಾಣಲು ಪುಟ್ಟದಾದ ಮೈಸೂರು ವಿಮಾನ ನಿಲ್ದಾಣದಲ್ಲಿ ಎಲ್ಲಾ ಆಧುನಿಕ ವ್ಯವಸ್ಥೆಗಳಿವೆ. ಎಟಿಎಂ, ತುರ್ತುಚಿಕಿತ್ಸೆ, ಪೆÇಲೀಸ್ ರಕ್ಷಣೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಇಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಒದಗಿಸಲಾಗಿದೆ. ವಿಶೇಷವೆಂದರೆ ಕೆ.ಎಸ್.ಆರ್.ಟಿ.ಸಿ. ಮೈಸೂರು ನಗರ ಸಾರಿಗೆಯ ಎ.ಸಿ. ಬಸ್ಸುಗಳ ಸೌಲಭ್ಯ ಕೂಡ ಇಲ್ಲಿದೆ. ಕೇವಲ ರೂ. 100ಕ್ಕೆ ಮೈಸೂರು ನಗರ ದಿಂದ ವಿಮಾನ ನಿಲ್ದಾಣಕ್ಕೆ, ವಿಮಾನ ನಿಲ್ದಾಣದಿಂದ ಮೈಸೂರು ನಗರಕ್ಕೆ ಪ್ರಯಾಣಿಸಬಹುದಾಗಿದೆ. ಅಲ್ಲದೆ ಟ್ಯಾಕ್ಸಿ ಮತ್ತು ಆಟೋರಿಕ್ಷಾಗಳ ಸೌಲಭ್ಯವೂ ಇಲ್ಲಿ ಲಭ್ಯವಿದೆ.

ಮುಂದಿನ ಗುರಿ: ಮೈಸೂರು ವಿಮಾನ ನಿಲ್ದಾಣವನ್ನು ಎರಡನೇ ಹಂತದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆ ಇದೀಗ ಸರಕಾರದ ಮುಂದಿದೆ. ರನ್‍ವೇಯನ್ನು 2,750ಮೀಟರ್ ಉದ್ದಕ್ಕೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಇದು ಅನುಷ್ಠಾನಗೊಂಡರೆ ಜೆಟ್ ವಿಮಾನಗಳಾದ ಬೋಯಿಂಗ್ 737, ಬೋಯಿಂಗ್ 747, ಏರ್‍ಬಸ್ ಎ 320 ಮತ್ತು ಏರ್‍ಬಸ್ ಎ380 ನಂತಹ ಭಾರೀ ವಿಮಾನಗಳು ಮೈಸೂರು ವಿಮಾನ ನಿಲ್ದಾಣದಲ್ಲಿ ಇಳಿಯಬಹುದಾಗಿದೆ. ರನ್‍ವೇ ವಿಸ್ತರಿಸಲು ಉದ್ದೇಶಿತ ಜಾಗದಲ್ಲಿ ರೈಲ್ವೆ ಮಾರ್ಗ ಇರುವುದರಿಂದ ವಿಮಾನ ನಿಲ್ದಾಣದ ರನ್‍ವೇಯನ್ನು ಪಶ್ಚಿಮಕ್ಕೆ ವಿಸ್ತರಿಸಲು ಸಾಧ್ಯವಿಲ್ಲ. ಪೂರ್ವದಲ್ಲಿಯೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ರನ್‍ವೇ ವಿಸ್ತರಣೆಗೆ ತೊಡಕಾಗಿದೆ. ಆದ್ದರಿಂದ ಎರಡನೇ ಹಂತದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಸಲ್ಲಿಸಿದ್ದು, ರನ್‍ವೇ ವಿಸ್ತರಣೆಗಾಗಿ ಪೂರ್ವ ದಿಕ್ಕಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ 766ರ ಕೆಲ ಭಾಗವನ್ನು ಸುರಂಗಮಾರ್ಗ ಮಾಡಲು ಪ್ರಸ್ತಾಪಿಸಿದೆ. ಇದು ಜಾರಿಯಾದಲ್ಲಿ ಸುರಂಗದ ಮೇಲ್ಭಾಗದಲ್ಲಿ ಸುಸಜ್ಜಿತ ರನ್‍ವೇ ನಿರ್ಮಾಣಗೊಂಡು ಮೈಸೂರು ವಿಮಾನ ನಿಲ್ದಾಣದ ಸ್ವರೂಪ ಬದಲಾಗಲಿದೆ. ಇದರಿಂದ ಭವಿಷ್ಯದಲ್ಲಿ ಇದೊಂದು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ರೂಪುಗೊಳ್ಳುವ ಕನಸು ಚಿಗುರೊಡೆಯಬಹುದು.