ಗೋಣಿಕೊಪ್ಪ, ಮಾ. 6: ಬಿದ್ದು ಸಿಕ್ಕಿದ ಪರ್ಸ್‍ನ್ನು ನಗದು ಹಾಗೂ ದಾಖಲೆ ಸಮೇತ ವಾರಸುದಾರನಿಗೆ ಹಿಂತಿರುಗಿಸುವ ಮೂಲಕ ಪಟ್ಟಣದ ನವರತ್ನ ಫೈನಾನ್ಸ್‍ನ ಉದ್ಯೋಗಿ ರಾಚಯ್ಯ ಪ್ರಾಮಾಣಿಕತೆ ಮೆರೆದಿದ್ದಾರೆ. ವಾರಸುದಾರನಿಗೆ ಗೋಣಿಕೊಪ್ಪ ಪ್ರೆಸ್‍ಕ್ಲಬ್‍ನಲ್ಲಿ ಹಸ್ತಾಂತರ ಮಾಡಿ, ಖುಶಿ ಪಟ್ಟುಕೊಂಡರು. ವಾರಸುದಾರ ಉಸ್ಮಾನ್ ವೃದ್ಧನನ್ನು ಅಪ್ಪಿಕೊಂಡು ಕೃತಜ್ಞತೆ ಸಲ್ಲಿಸಿದರು.
ಮಂಗಳವಾರ ಸಾಯಂಕಾಲ ಗೋಣಿಕೊಪ್ಪ ಬಸ್ ನಿಲ್ದಾಣ ಸಮೀಪ ರಾಚಯ್ಯ ಅವರಿಗೆ ಪರ್ಸ್ ಬಿದ್ದು ಸಿಕ್ಕಿದೆ. ಪರ್ಸ್‍ನಲ್ಲಿದ್ದ ಐಡಿ ಕಾರ್ಡ್ ನೋಡಿ ವಾರಸುದಾರನನ್ನು ಪತ್ತೆಹಚ್ಚುವ ಕಾರ್ಯ ಮಾಡಿದರು. ಇದರಂತೆ ಬುಧವಾರ ಜಾಂಬವ ಯುವಸೇನೆ ಜಿಲ್ಲಾಧ್ಯಕ್ಷ ಸಿಂಗಿ ಸತೀಶ್ ಸಲಹೆಯಂತೆ ಹಸ್ತಾಂತರ ಮಾಡಿದರು.
ಪರ್ಸ್‍ನಲ್ಲಿದ್ದ ರೂ. 10,500 ಹಣ ಕಂಡು ಹೆಚ್ಚು ಬೇಸರವಾಯಿತು. ಯಾರು ಯಾವ ಕಾರ್ಯಕ್ಕೆ ತೆಗೆದುಕೊಂಡು ಹೊರಟಿದ್ದರೋ ಎಂದು ವಾರಸುದಾರನನ್ನು ಹುಡುಕುವ ಕೆಲಸ ಮಾಡಿದೆ. ಇದನ್ನು ಹಿಂತಿರುಗಿಸಿರುವುದು ಹೆಚ್ಚು ಖುಶಿ ತಂದಿದೆ ಎಂದು ರಾಚಯ್ಯ ತಮ್ಮ ಮನದಾಳ ಹಂಚಿಕೊಂಡರು.
ವಾರಸುದಾರ ಉಸ್ಮಾನ್ ಮಾತನಾಡಿ, ವಾಹನ ಪೈಟಿಂಗ್‍ಗೆಂದು ಇಟ್ಟಿದ್ದೆ. ಸಾಯಂಕಾಲ ಬಸ್ ನಿಲ್ದಾಣದತ್ತ ತೆರಳುವಾಗ ಕಳೆದುಹೋಗಿತ್ತು. ಸಿಗುವುದಿಲ್ಲ ಎಂದು ಭಾವಿಸಿ ಅದರಲ್ಲಿದ್ದ ಎಟಿಎಂ ಕಾರ್ಡ್ ಬ್ಲಾಕ್ ಮಾಡಿಸಿದೆ. ನನ್ನ ಡ್ರೈವಿಂಗ್ ಲೈಸೆನ್ಸ್ ಕೂಡ ಇತ್ತು. ಎಲ್ಲಾವೂ ನನ್ನ ಕೈಸೇರಿರುವುದು ಸಂತೋಷವಾಗಿದೆ. ವೃದ್ಧನ ಪ್ರಮಾಣಿಕತೆ ಮೆಚ್ಚುವಂತದ್ದು ಎಂದರು.
ಹಸ್ತಾಂತರ ಸಂದರ್ಭ ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.