ಮಡಿಕೇರಿ, ಮಾ. 6: ಕೊಡಗು ಜಿಲ್ಲೆಯ ಹೊದ್ದೂರು ಪಾಲೆಮಾಡುವಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಕ ನಿರ್ಮಿಸಲು ಉದ್ದೇಶಿಸಿರುವ ರೂ. 100 ಕೋಟಿ ವೆಚ್ಚದ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿ ವಿಳಂಬಗೊಳ್ಳುತ್ತಿರುವ ಬಗ್ಗೆ ಇಂದು ವಿಧಾನಪರಿಷತ್ನಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಸರಕಾರದ ಗಮನ ಸೆಳೆದಿದ್ದಾರೆ. ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಚಿವರೂ ಆಗಿರುವ ಸಿ.ಟಿ. ರವಿ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಲಾಖೆಯ ಆಯುಕ್ತರ ಮೂಲಕ ಕೊಡಗು ಜಿಲ್ಲಾಧಿಕಾರಿಗಳಿಗೆ ಪತ್ರ ಕಳುಹಿಸ ಲಾಗಿದೆ ಎಂದು ಸಮರ್ಥಿಸಿ ಕೊಂಡರು.ಕ್ರೀಡಾಜಿಲ್ಲೆ ಖ್ಯಾತಿಯ ಕೊಡಗಿಗೆ ಕೆಎನ್ಸಿಎ ಮೂಲಕ ಸ್ಟೇಡಿಯಂ ನಿರ್ಮಿಸಲು ಜಾಗವನ್ನು ಕ್ಯಾಬಿನೆಟ್ ತೀರ್ಮಾನದ ಮೂಲಕ ಮಂಜೂರು ಮಾಡಿ ಹಲವು ವರ್ಷಗಳು ಕಳೆದಿವೆ. ಈ ಜಾಗಕ್ಕೆ ಸಂಬಂಧಿಸಿದಂತೆ ಸ್ಮಶಾನ ಸ್ಥಳಬೇಕೆಂಬ (ಮೊದಲ ಪುಟದಿಂದ) ವಿವಾದವಿತ್ತಾದರೂ ಇವೆಲ್ಲವೂ ಬಗೆಹರಿದು ಅಂತಿಮ ತೀರ್ಮಾನವಾಗಿದೆ. ಸರಕಾರದ ಅನುದಾನವೂ ಇದಕ್ಕೆ ಬೇಕಿಲ್ಲ. ಆದರೂ ಜಾಗವನ್ನು ಸೂಕ್ತ ರೀತಿಯಲ್ಲಿ ಸಂಸ್ಥೆಗೆ ವಹಿಸದ ಕಾರಣ ವಿಳಂಬವಾಗುತ್ತಿರುವ ಬಗ್ಗೆ ವೀಣಾ ಅಚ್ಚಯ್ಯ ಗಮನ ಸೆಳೆದು ಸೂಕ್ತ ನಿರ್ದೇಶನಕ್ಕೆ ಕೋರಿದರು.
ಈ ಸಂದರ್ಭ ಉತ್ತರಿಸಿದ ಸಚಿವ ಸಿ.ಟಿ. ರವಿ ಅವರು ಈ ವಿಚಾರ ನ್ಯಾಯಾಲಯದ ಮೆಟ್ಟಲೇರಿದ್ದರಿಂದ ತಡವಾಗಿತ್ತು. ಜಿಲ್ಲಾಡಳಿತದ ಮೂಲಕ ಜಾಗದ ಸರ್ವೆ ನಡೆಸಿ ಗಡಿಗುರುತಿಸುವ ಕೆಲಸವಾಗಬೇಕಿದೆ. ಈ ಕುರಿತಾಗಿ ಈಗಾಗಲೇ ಇಲಾಖೆಯ ಸಭೆಯಲ್ಲಿ ಚರ್ಚಿಸಲಾಗಿದ್ದು; ಆಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಪತ್ರ ಕಳುಹಿಸಲಾಗಿದೆ. ಸದ್ಯದಲ್ಲೇ ಗಡಿ ಗುರುತಿಸಿ ಜಾಗವನ್ನು ಅಧಿಕೃತವಾಗಿ ವಹಿಸಲು ಕ್ರಮವಹಿಸಲಾಗುವದು ಎಂದರು. ಈ ಬಗ್ಗೆ ಕೆಲವು ದಿನಗಳ ಹಿಂದೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.