ಕಣಿವೆ, ಮಾ. 6: ರಸ್ತೆಗಳಲ್ಲಿ ಸರಕುಗಳನ್ನು ಹೊತ್ತು ಸಾಗುವ ಲಾರಿಗಳು ಯಥೇಚ್ಛವಾದ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟುಮಾಡುತ್ತಿದ್ದು ಕೂಡಲೇ ಸಾರಿಗೆ ಅಥವಾ ಪರಿಸರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಏಲಕ್ಕನೂರು ಹೊಸಳ್ಳಿ, ಬಾಣಾವರ ಮೊದಲಾದ ಕಲ್ಲು ಕೋರೆಗಳಿಂದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿನ ಕ್ರಷರ್ಗಳಿಗೆ ದಿನಂಪ್ರತೀ ನೂರಾರು ಲಾರಿಗಳು ಕಲ್ಲು, ಜಲ್ಲಿ ಮತ್ತಿತರ ಸರಕುಗಳನ್ನು ಸಾಗಿಸುತ್ತಿವೆ. ಈ ಪೈಕಿ ಹಲವು ಲಾರಿಗಳು ಹಳೆಯದಾಗಿದ್ದು ಕಪ್ಪು ಹೊಗೆಯನ್ನು ಹೊರಸೂಸಿ ಪರಿಸರ ಮಾಲಿನ್ಯ ಉಂಟುಮಾಡುತ್ತಿವೆ. ಇದರಿಂದಾಗಿ ಇಂತಹ ಲಾರಿಗಳ ಹಿಂದೆ ಸಾಗುವ ದ್ವಿಚಕ್ರ ಸವಾರರ ಗೋಳು ಹೇಳುವಂತಿಲ್ಲ. ಏಕೆಂದರೆ, ಅತೀ ವೇಗ ಮತ್ತು ಅಜಾಗರೂಕತೆ ಯಿಂದ ಲಾರಿಗಳು ಮುಂದೆ ಸಾಗುತ್ತಿರುತ್ತವೆ. ಈ ಲಾರಿಗಳನ್ನು ಹಿಂಬಾಲಿಸಿ ದ್ವಿಚಕ್ರ ಸವಾರರು ಮುಂದೆ ಸಾಗದ ರೀತಿಯಲ್ಲಿ ಚಾಲಕರು ಲಾರಿಗಳ ಚಾಲನೆ ಮಾಡುತ್ತಿರುತ್ತಾರೆ. ಜೊತೆಗೆ ಈ ಲಾರಿಗಳು ಹೊರ ಸೂಸುವ ಕಪ್ಪುಹೊಗೆ ಜನಸಾಮಾನ್ಯರ ಶ್ವಾಸಕೋಶಕ್ಕೆ ಹಾನಿ ಉಂಟು ಮಾಡಲಿದೆ. ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ಇಂತಹ ಲಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಣಿವೆ, ಕೂಡಿಗೆ, ಹುಲುಸೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿ ನೂರಾರು ಲಾರಿಗಳು ಓಡಾಡುತ್ತಿದ್ದು ಹೆಚ್ಚು ಸಂಖ್ಯೆಯ ಲಾರಿಗಳು ಕೇರಳ ರಾಜ್ಯದ ನೋಂದಣಿ ಹೊಂದಿರುವ ಲಾರಿಗಳಾಗಿದ್ದು ಕೂಡಲೇ ತಪಾಸಣೆ ನಡೆಸಬೇಕು. ಕುಶಾಲನಗರ ಗ್ರಾಮಾಂತರ ಠಾಣೆಯ ಮುಂದೆಯೇ ಇಂತಹ ಲಾರಿಗಳು ಓಡಾಡುತ್ತಿರುವು ದರಿಂದ ಕೂಡಲೇ ಪೊಲೀಸರು ಲಾರಿಗಳ ದಾಖಲಾತಿಗಳನ್ನು ಪರಿಶೀಲಿಸಬೇಕು ಎಂದು ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.
- ಕೆ.ಎಸ್. ಮೂರ್ತಿ