ಸೋಮವಾರಪೇಟೆ, ಮಾ. 6: ತಾಲೂಕಿನ ಕೆಲವೆಡೆ ಕಾಮಗಾರಿ ಯನ್ನು ಕೈಗೊಳ್ಳುವ ಸಂದರ್ಭ ಸ್ಥಳೀಯರು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರು ಮಾನಸಿಕ ಕಿರುಕುಳದೊಂದಿಗೆ ಗುತ್ತಿಗೆದಾರರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ತಾಲೂಕು ಗುತ್ತಿಗೆದಾರರ ಸಂಘ ಆರೋಪಿಸಿದೆ.

ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿ.ಎ. ಲಾರೆನ್ಸ್, ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕೇವಲ 3-4 ತಿಂಗಳ ಅವಧಿಯಲ್ಲಿ ಗುತ್ತಿಗೆದಾರರು ಎಲ್ಲ ಕಾಮಗಾರಿ ಯನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ವಿವಿಧ ಮೂಲಗಳಿಂದ ಜಿಲ್ಲೆಗೆ ಸುಮಾರು ರೂ. 600ಕೋಟಿ ಹಣ ಬಿಡುಗಡೆಯಾಗಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಇಷ್ಟು ಮೊತ್ತದ ಕಾಮಗಾರಿಗಳು ನಡೆಯುವ ಸಂದರ್ಭ ಕೆಲವೊಮ್ಮೆ ತಪ್ಪಾಗಿರುವ ಸಾಧ್ಯತೆಗಳು ಇರುತ್ತವೆ. ಅವುಗಳನ್ನು ಸರಿಪಡಿಸುವ ಕೆಲಸವನ್ನು ಗುತ್ತಿಗೆದಾರರು ಮಾಡುತ್ತಿದ್ದಾರೆ ಎಂದರು.

ಒಂದೆರಡು ಕಾಮಗಾರಿಗಳು ಕಳಪೆಯಾಗಿದ್ದರೆ ಇಡೀ ಗುತ್ತಿಗೆದಾರರೆಲ್ಲರೂ ಕಳಪೆ ಕಾಮಗಾರಿ ಮಾಡುವವರು ಎಂದು ಬಿಂಬಿಸುವ ಯತ್ನಗಳು ನಡೆಯುತ್ತಿವೆ. ಹಲವು ಸಂದರ್ಭಗಳಲ್ಲಿ ಕಾಮಗಾರಿ ಮುಗಿದಿದ್ದರೂ, ಎರಡು ಮೂರು ವರ್ಷ ಇಲಾಖೆಯಿಂದ ಹಣ ಬಿಡುಗಡೆಯಾಗುವದಿಲ್ಲ.

ಅಲ್ಲದೆ, ಸರ್ಕಾರಕ್ಕೆ ತೆರಿಗೆ, ರಾಜಧನ ಭರಿಸಿ ಕಾಮಗಾರಿ ನಿರ್ವಹಿಸುವ ಸಂದರ್ಭ, ಕೆಲ ವ್ಯಕ್ತಿಗಳು ನಮ್ಮ ಮೇಲೆ ವೃಥಾ ಆರೋಪ ಹೊರಿಸುತ್ತಿದ್ದಾರೆ ಎಂದು ದೂರಿದರು.

ತಾಲೂಕಿನಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರೆಂದು ಹೇಳಿಕೊಳ್ಳು ವವರು ನೇರವಾಗಿ ಕಾಮಗಾರಿಯ ಪರಿಶೀಲನೆ ಮಾಡುತ್ತಿದ್ದಾರೆ. ಕಾಮಗಾರಿ ನಡೆಯುವ ಸಂದರ್ಭವೇ ಸ್ಥಳಕ್ಕೆ ಬಂದು ಯಾವ್ಯಾವದೋ ಯಂತ್ರಗಳನ್ನು ತಂದು ಗುಣಮಟ್ಟ ಪರಿಶೀಲನೆಯ ನೆಪದಲ್ಲಿ ಗುತ್ತಿಗೆ ದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಲಾರೆನ್ಸ್ ಆರೋಪಿಸಿದರು.

ಮಾಹಿತಿ ಹಕ್ಕು ಕಾನೂನಿಗೆ ವಿರುದ್ಧವಾಗಿ ಇಂತಹ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪೊಲೀಸ್ ದೂರು ದಾಖಲಿಸಲಾಗುವದು. ಕಾಮಗಾರಿಯ ಬಗ್ಗೆ ಸಂಶಯವಿದ್ದಲ್ಲಿ ಅದರ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಬಹುದು. ಇದನ್ನು ಬಿಟ್ಟು ಸ್ಥಳೀಯರನ್ನು ಗುತ್ತಿಗೆದಾರರ ವಿರುದ್ಧ ಎತ್ತಿಕಟ್ಟಿ, ದೈಹಿಕ ಹಲ್ಲೆ ಪ್ರಕರಣಗಳು ನಡೆಯುವಂತೆ ಪ್ರಚೋದನೆ ಮಾಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕಾಮಗಾರಿಯನ್ನು ಉತ್ತಮವಾಗಿ ಮಾಡಲು ಅವಕಾಶ ಮಾಡಿಕೊಡ ಬೇಕು. ಕಾಮಗಾರಿ ಕಳಪೆಯಾದರೆ ಸಂಬಂಧಿಸಿದ ಇಲಾಖೆಯ ಮೇಲಧಿ ಕಾರಿಗಳಿಗೆ ದೂರು ನೀಡಬಹುದು. ಇದನ್ನು ಹೊರತುಪಡಿಸಿ ಗುತ್ತಿಗೆದಾರರ ಮೇಲೆ ದೌರ್ಜನ್ಯಕ್ಕೆ ಮಂದಾದರೆ ಸಂಘದ ವತಿಯಿಂದ ದೂರು ದಾಖಲಿಸಲಾಗುವದು ಎಂದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಓ.ಎಂ. ಸಂತೋಷ್, ಕಾರ್ಯದರ್ಶಿ ವಿನೋದ್, ಪದಾಧಿಕಾರಿಗಳಾದ ಟಿ.ಎಲ್. ಪುರುಷೋತ್ತಮ್, ದಿನೇಶ್, ಪುರುಷೋತ್ತಮ್ ರೈ, ಆರ್.ಸಿ. ಗಣೇಶ್ ಉಪಸ್ಥಿತರಿದ್ದರು.