ಒಂದಾಣೆಗೆ ಸಾಮಗ್ರಿ ತೆಗೆದುಕೊಂಡರೆ ಒಂದು ದಿನದ ಮಟ್ಟಿಗೆ ಮನೆ ನಿರ್ವಹಣೆಗೆ ಬೇಕಾದ ಸಾಮಗ್ರಿ ಸರಂಜಾಮು ತರಲು ಸಾಕಾಗುತ್ತಿತ್ತು, ಇಂದು ದಿನಕ್ಕೆ ನೂರು ರೂಪಾಯಿ ಇದ್ದರೂ ದಿನದೂಡಲು ಬದುಕು ದುಸ್ತರ ಎಂದು ನಮ್ಮ ಅಜ್ಜ ಅಜ್ಜಿ ಅಂದು ಹೇಳುತ್ತಿದ್ದದ್ದು ಮತ್ತೊಮ್ಮೆ ಯಾಕೋ ಮರುಕಳಿಸುತ್ತಿದೆ.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಇತಿಹಾಸ ವಿಭಾಗದಿಂದ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರದರ್ಶನದಲ್ಲಿ ಇಡಲಾಗಿದ್ದ 180 ದೇಶಗಳ ಹಳೇ ನಾಣ್ಯ, ನೋಟು, ಹಳೇ ಸ್ಟ್ಯಾಂಪು ಕೇವಲ ನಮ್ಮ ಹಿರಿಯರ ಬದುಕು ಬವಣೆಯನ್ನು ಮಾತ್ರ ಹೇಳಲಿಲ್ಲ, ಬದಲಾಗಿ ಒಂದೊಂದು ನಾಣ್ಯದ ಮೇಲೆ ಮುದ್ರಿತವಾಗಿದ್ದ ಚಿತ್ರಗಳು ಅದರ ಹಿಂದಿರುವ ಗತವೈಭವವನ್ನು ಮರುಕಳಿಸುತ್ತಿತ್ತು.

1982 ರಲ್ಲಿ ಮುದ್ರಿತವಾಗಿದ್ದ ಒಂದು ರೂಪಾಯಿ ನಾಣ್ಯದಲ್ಲಿ ಮೂಡಿಬಂದಿದ್ದ ಬತ್ತದ ಪೈರಿನ ಚಿತ್ರ ನಮ್ಮ ದೇಶದ ಹಸಿರು ಕ್ರಾಂತಿಯನ್ನು ನೆನಪಿಸುತ್ತಿತ್ತು. ಇನ್ನು ಹತ್ತು ಪೈಸೆಯ ತಾಮ್ರದ ನಾಣ್ಯ ಸತ್ತ ಹೆಣದ ಹಣೆಯ ಮೇಲಿಡುವ ‘ಹಣೆಕಾಸು’ನ ಕಥೆ ನೆನಪಾಯ್ತು.

ಇಷ್ಟೆಲ್ಲಾ ನೆನಪುಗಳನ್ನು ಮರುಕಳಿಸಲು ಕಾರಣರಾದ ನಾಣ್ಯ ಸಂಗ್ರಹಕಾರ ವೀರಾಜಪೇಟೆಯ ನಿವಾಸಿ ಎಂ. ಅಜಯ್ ನಾರಾಯಣ ರಾವ್ ಅವರ ಈ ಹವ್ಯಾಸದ ಹಿಂದಿರುವ ಛಲದ ಬಗ್ಗೆ ಕೇಳಿದರೆ ಅವರು ಹೇಳಿದ್ದೇ ಬೇರೆ. “ಅನಾರೋಗ್ಯದಿಂದ ಬಳಲಿ ಬದುಕು ಇನ್ನೇನೋ ಮುಗಿಯಿತು ಅನ್ನುವಷ್ಟರಲ್ಲಿ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಏನಾದರೂ ಮಾಡಲೇಬೇಕು ಅನಿಸುತ್ತಿತ್ತು. ಆಗ ಹೊಳೆದದ್ದು ಈ ನಾಣ್ಯ ಸಂಗ್ರಹ” ಅಂದರು.

ಆಗಿನ ಕಾಲದಲ್ಲಿ ವಸ್ತುಗಳನ್ನು ಕೊಡು ಕೊಂಡುಕೊಳ್ಳುವ ಸಂಸ್ಕøತಿ ಇತ್ತು. ಇದೇ ಹಣ ಅಲ್ವಾ ನಮ್ಮಲ್ಲಿ ಸಂಬಂಧಗಳನ್ನು ಹಾಳು ಮಾಡಲು ಪ್ರಭಾವ ಬೀರಿದ್ದು ಅಂತಲೂ ಒಮ್ಮೆಗೆ ಅನ್ನಿಸಿತ್ತಾದರೂ, ಮತ್ಯಾಕೊ ಹಣ ವಿನಿಮಯವೇ ನಮ್ಮನ್ನು ಮತ್ತಷ್ಟು ನಾಗರಿಕರಾಗಲು ಅನುವುಮಾಡಿಕೊಟ್ಟಿದೆ ಎಂಬುದು ಮನವರಿಕೆಯಾಯಿತು.

ವಿಶೇಷ ವರದಿ:

ಕುಸುಮ. ಡಿ, ತೃತೀಯ ಪತ್ರಿಕೋದ್ಯಮ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ.