ಮಡಿಕೇರಿ, ಮಾ. 3: ಕಾಲೂರು ಶ್ರೀ ಅಯ್ಯಪ್ಪ ದೇವಾಲಯದ ಜೀರ್ಣೋದ್ಧಾರದೊಂದಿಗೆ, ಫೆಬ್ರವರಿ 29 ರಿಂದ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು, ಎಂಟು ಶತಮಾನಗಳ ಇತಿಹಾಸ ವಿರುವ ದೇವರ ಪುನರ್‍ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವವು ಇಂದು ನೆರವೇರಿತು.

ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ, ಇಂದು ಉಷಾಕಾಲದಿಂದ ಹೋಮ ಹವನಗಳ ಬಳಿಕ ಬೆಳಿಗ್ಗೆ 9.15(ರಿಂದ)9.30ರ ಅವಧಿಯ ಶುಭ ಮೇಷ ಲಗ್ನದಲ್ಲಿ, ದೇವರ ಮೂರ್ತಿಯ ಪ್ರತಿಷ್ಠಾಪನೆÀಯೊಂದಿಗೆ, ಬ್ರಹ್ಮಕಲಶೋತ್ಸವ ಹಾಗೂ ಮಹಾಪೂಜೆ ನೆರವೇರಿತು.

ದೇವಾಲಯ ಅರ್ಚಕ ನಾಗೇಶ್ ಕಾಲೂರು ಹಾಗೂ ಪುರೋಹಿತರ ಬಳಗ ಪೂಜಾ ಕೈಂಕರ್ಯಗಳನ್ನು ತಂತ್ರಿಗಳ ನೇತೃತ್ವದಲ್ಲಿ ನಿರ್ವಹಿಸಿದರು, ಊರಿನವರೇ ಆಗಿರುವ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಇತರ ಪ್ರಮುಖರು, ತಕ್ಕ ಮುಖ್ಯಸ್ಥರು, ವಿವಿಧ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಈ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿತ್ತು.

ಈ ಪ್ರಯುಕ್ತ ಜರುಗಿದ ಧಾರ್ಮಿಕ ಸಭೆಯಲ್ಲಿ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಬೋಧಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಕಾಲೂರಿನಲ್ಲಿ ಎದುರಾದ ಪ್ರಾಕೃತಿಕ ದುರಂತ ಸಂದರ್ಭ ಜನತೆ ದೇವರ ದಯೆಯಿಂದ ದೃತಿಗೆಡದೆ ಪರಿಸ್ಥಿತಿ ಎದುರಿಸಿದ ಬಗ್ಗೆ ಶ್ಲಾಘಿಸಿದರು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ತಮ್ಮ ಹುಟ್ಟೂರು ಕಾಲೂರಿನ ಸನ್ನಿವೇಶವನ್ನು ಮೆಲುಕು ಹಾಕಿದರು, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಪಿ.ಜೆ. ಸುಭಾಷ್ ಸೋಮಯ್ಯ, ದೇವಾಲಯದ ಅರ್ಚಕ ನಾಗೇಶ್ ಕಾಲೂರು ಸೇರಿದಂತೆ ಗ್ರಾಮದ ಹಿರಿಯರು ಭಾಗವಹಿಸಿದ್ದರು.