ಗೋಣಿಕೊಪ್ಪ ವರದಿ, ಮಾ. 3: ಬಾಳೆಲೆ ವ್ಯಾಪ್ತಿಗೆ ತುರ್ತು ವಿದ್ಯುತ್ ಸೌಲಭ್ಯ ನೀಡಿ ಎಂದು ಒತ್ತಾಯಿಸಿದ ಸ್ಥಳೀಯ ಬೆಳೆಗಾರರ ಒತ್ತಾಯಕ್ಕೆ ಅಧಿಕಾರಿಗಳು ಬಸವಳಿದರು.

ಈಗಾಗಲೇ ತುಂತುರು ಮಳೆಗೆ ಬಾಡುವ ಹಂತಕ್ಕೆ ಕಾಫಿ ಹೂ ತಲುಪಿದೆ. ರಕ್ಷಿಸಿಕೊಳ್ಳಲು ಮುಂದಿನ 4 ದಿನಗಳಾದರೂ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವಂತೆ ಸ್ಥಳೀಯ ಬೆಳೆಗಾರರು ಸೆಸ್ಕ್ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳನ್ನು ಒತ್ತಾಯಿಸಿದರು.

ಮಂಗಳವಾರ ಬಾಳೆಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರತ್ಯು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿದ್ಯುತ್ ಸಮಸ್ಯೆ ಚರ್ಚೆ ಸಭೆಯಲ್ಲಿ ಸ್ಥಳೀಯರು ಈ ಬಗ್ಗೆ ಒತ್ತಾಯಿಸಿದರು.

ವರ್ಷದ ಹಿಂದೆ ಈ ಭಾಗದ ಸಮಸ್ಯೆ ಅಧಿಕಾರಿಗಳಿಗೆ ತಿಳಿದಿದೆ. ಆದರೂ ಸ್ಪಂದನೆ ಇಲ್ಲ. 2 ದಿನಗಳ ಹಿಂದೆ ಬಿದ್ದ ತುಂತುರು ಮಳೆಯಿಂದ ಕಾಫಿ ಅರಳಲಾಗದೆ ಬಾಡುವ ಹಂತಕ್ಕೆ ತಲುಪಿದೆ. ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಲು ವಿದ್ಯುತ್ ಸಮಸ್ಯೆ ನಿತ್ಯ ಕಾಡುತ್ತಿದೆ. ಉತ್ತಮ ವೋಲ್ಟೇಜ್ ಇಲ್ಲದೆ ಯಂತ್ರಗಳು ಕೆಟ್ಟು ಹೋಗುತ್ತಿವೆ ಎಂದು ಬೆಳೆಗಾರರು ಅಳಲು ತೋಡಿಕೊಂಡರು.

ಪೊನ್ನಂಪೇಟೆ-ಬಾಳೆಲೆ ಎಕ್ಸ್‍ಪ್ರೆಸ್ ಕೇಬಲ್ ತೀರಾ ಕಳಪೆಯಿಂದ ಕೂಡಿದ್ದು, ವಿದ್ಯುತ್ ಹರಿಯುವಷ್ಟು ಗುಣಮಟ್ಟ ಹೊಂದಿಲ್ಲ. ಪರಿಣಾಮ ಪಂಪ್‍ಸೆಟ್ ನಡೆಸಲು ಆಗುತ್ತಿಲ್ಲ. ಈಗಾಗಲೇ ಅತಿವೃಷ್ಠಿಯಿಂದ ಒಂದು ವರ್ಷದ ಬೆಳೆ ಕಳೆದುಕೊಂಡು ನಷ್ಟದಲ್ಲಿದ್ದೇವೆ. ಈ ವರ್ಷವೂ ಬೆಳೆ ಕಳೆದುಕೊಳ್ಳುವ ಮಟ್ಟಕ್ಕೆ ಸೆಸ್ಕ್ ಅಸಮರ್ಪಕ ಸೇವೆ ನೀಡುತ್ತಿದೆ ಎಂದು ಬೆಳೆಗಾರರು ಆರೋಪಿಸಿದರು.

ಸುಮಾರು 2 ಗಂಟೆಗಳ ಕಾಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷಿಕರು, ಬೆಳೆಗಾರರ ಕಡೆಗಣನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ನೂತನ ಮಾರ್ಗದ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸದೆ ಹಣ ನೀಡಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಕಳಪೆ ಕಾಮಗಾರಿಯಲ್ಲಿ ಸೆಸ್ಕ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರತ್ಯು ವ್ಯಕ್ತಪಡಿಸಿ ದರು. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಇದು ಗ್ರಾಹಕರಿಗಾಗಿ ಮಾತ್ರ ಅನುಷ್ಠಾನ ಮಾಡಿರುವ ಯೋಜನೆಯಲ್ಲ. ಗುತ್ತಿಗೆದಾರ ಮತ್ತು ಅಧಿಕಾರಿ ವರ್ಗಗಳ ನಡುವಿನ ಹೊಂದಾಣಿಕೆ ಯಿಂದ ಜನರ ಹೆಸರಿನಲ್ಲಿ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿದರು.

ಪೊನ್ನಂಪೇಟೆ-ಬಾಳೆಲೆ ಎಕ್ಸ್‍ಪ್ರೆಸ್ ಮಾರ್ಗಕ್ಕೆ ಬಿಡುಗಡೆಯಾಗಿರುವ 2.5 ಕೋಟಿ ಅನುದಾನದಲ್ಲಿ ಈಗಾಗಲೇ ಶೇ. 90 ರಷ್ಟು ಗುತ್ತಿಗೆದಾರನಿಗೆ ಪಾವತಿಯಾಗಿದೆ ಎಂದು ಸೆಸ್ಕ್ ಜಿಲ್ಲಾ ಅಭಿಯಂತರ ಸೋಮಶೇಖರ್ ಮಾಹಿತಿ ನೀಡಿದರು. ಫೀಡರ್ ಅಳವಡಿಕೆ ಸೇರಿದಂತೆ ಅಲ್ಲಿನ ಲೋಪವನ್ನು ಸರಿಪಡಿಸಿಕೊಂಡು ತುರ್ತು ವಿದ್ಯುತ್ ಸೇವೆ ನೀಡುವು ದಾಗಿ ಅವರು ಭರವಸೆ ನೀಡಿದರು.

ಈ ಸಂದರ್ಭ ಬಾಳೆಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್, ಗೊಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸುಜಾ ಪೂಣಚ್ಚ, ಮಾಜಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಪ್ರಮುಖರಾದ ಆದೇಂಗಡ ವಿನು ಉತ್ತಪ್ಪ, ಸುಖೇಶ್, ಪ್ರದೀಪ್, ಅರಮಣಮಾಡ ರಂಜನ್ ಚಂಗಪ್ಪ, ಮಲ್ಚೀರ ಬೋಸ್, ಪುಚ್ಚಿಮಾಡ ರನ್ನು ಅಚ್ಚಪ್ಪ ಪಾಲ್ಗೊಂಡು ಗುಣಮಟ್ಟದ ವಿದ್ಯುತ್ ಸೇವೆ ನೀಡುವಂತೆ ಒತ್ತಾಯಿಸಿದರು.

ವೀರಾಜಪೇಟೆ ಉಪ ವಿಭಾಗ ಇಎಎ ಸುರೇಶ್ ಅವರನ್ನು ಗೋಣಿಕೊಪ್ಪಕ್ಕೆ ನಿಯೋಜಿಸುವಂತೆ ಸ್ಥಳೀಯರು ಒತ್ತಾಯಿಸಿದರು. ನೂರಾರು ಕೃಷಿಕರು ಭಾಗವಹಿಸಿದ್ದರು.