ವೃತ್ತ ನಿರೀಕ್ಷಕರ ಹೇಳಿಕೆ
ಕುಶಾಲನಗರ, ಮಾ.3: ಕುಶಾಲನಗರ ಪಟ್ಟಣದಲ್ಲಿ ಸಂಚಾರಿ ನಿಯಮ ಪಾಲನೆಗೆ ವಿಶೇಷ ಸಿಬ್ಬಂದಿಗಳ ತಂಡವನ್ನು ರಚಿಸಿದ್ದು ಸಮರ್ಪಕ ಸಂಚಾರಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಸಂಚಾರಿ ಸಿಗ್ನಲ್ ವ್ಯವಸ್ಥೆ ತಾಂತ್ರಿಕತೆಯ ತೊಂದರೆಯಿಂದ ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಶಕ್ತಿಯಲ್ಲಿ ವರದಿಯಾದ ಬೆನ್ನಲ್ಲೇ ಸರಿಪಡಿಸಿ ಇದೀಗ ಯಾವುದೇ ನ್ಯೂನತೆಯಿಲ್ಲದೆ ಎಫ್ಎಂಸಿ ವೃತ್ತದಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಟ್ಟಣದಲ್ಲಿ ಹೆಲ್ಮೆಟ್ ರಹಿತವಾಗಿ ಚಾಲನೆ ಮಾಡುತ್ತಿರುವ ಮತ್ತು ಸೀಟ್ ಬೆಲ್ಟ್ ಹಾಕದೆ ವಾಹನ ಚಾಲನೆ ಮಾಡುವ ಚಾಲಕರಿಗೆ ಸೂಚನೆ ನೀಡಿ ಇದೀಗ ದಂಡ ವಿಧಿಸಲಾಗುತ್ತಿದೆ. ವಿಶೇಷವಾಗಿ ಜನರಿಗೆ ಸಂಚಾರಿ ವ್ಯವಸ್ಥೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಮಧರ್ಮ-ಚಿತ್ರಗುಪ್ತ ವೇಷಧಾರಿಗಳ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಅರಿವು ಜಾಗೃತಿ ಮೂಡಿಸಲಾಗಿತ್ತು. ದಿನನಿತ್ಯ ಸಂಚಾರಿ ಪೊಲೀಸರು ಆಯಕಟ್ಟಿನ ರಸ್ತೆಗಳಲ್ಲಿ ಸುಗಮ ಸಂಚಾರಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.