ಸೋಮವಾರಪೇಟೆ, ಮಾ. 3: ನಿವೇಶನ ರಹಿತ ಕಾರ್ಮಿಕರಿಗೆ ಉಚಿತ ನಿವೇಶನ ನೀಡುವಂತೆ ಆಗ್ರಹಿಸಿ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಯೂನಿಯನ್ನ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ನೇತೃತ್ವದಲ್ಲಿ ಪಟ್ಟಣದ ಗಾಂಧಿ ಪ್ರತಿಮೆಯ ಸುತ್ತಮುತ್ತ ಸ್ವಚ್ಛತೆ ಕೈಗೊಂಡ ಪ್ರತಿಭಟನಾಕಾರರು ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ತಾಲೂಕು ಕಚೇರಿಯ ಮುಂಭಾಗ ಘೋಷಣೆ ಕೂಗಿದ ಕಾರ್ಮಿಕರು ಕೂಡಲೆ ಕಾರ್ಮಿಕರಿಗೆ ನಿವೇಶನ ನೀಡುವಂತೆ ಆಗ್ರಹಿಸಿದರು. ಜಿಲ್ಲೆಯಲ್ಲಿ ತೋಟ, ಕೃಷಿ, ಕಟ್ಟಡ, ಹಮಾಲಿ ಕಾರ್ಮಿಕರು ಸೇರಿದಂತೆ ಇನ್ನಿತರ ಬಹತೇಕ ಕಾರ್ಮಿಕರಿಗೆ ಇಂದಿಗೂ ಸ್ವಂತ ಮನೆಯಿಲ್ಲ. ಅನೇಕರು ಲೈನ್ಮನೆಯಲ್ಲಿ ವಾಸಮಾಡುತ್ತಿದ್ದಾರೆ. ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಕಳೆದ ಹಲವಾರು ವರ್ಷಗಳಿಂದ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಸೋಮಪ್ಪ ಆರೋಪಿಸಿದರು.
ಬಿಳಿಗೇರಿ ಗ್ರಾಮದ ಸ.ನಂ. 193/3ರ ಪೈಸಾರಿ ಜಾಗವನ್ನು ಗುರುತಿಸಿ, ಅಲ್ಲಿನ ನಿವೇಶನ ರಹಿತರಿಗೆ ವಿತರಿಸಬೇಕೆಂದು ತಹಶೀಲ್ದಾರ್ ಅವರನ್ನು ಒತ್ತಾಯಿಸಿದರು. ಕಂದಾಯ ಇಲಾಖೆಯಿಂದ ಪೈಸಾರಿ ಜಾಗವನ್ನು ಸರ್ವೆ ಮಾಡಿಸಿ, ಗ್ರಾಮ ಪಂಚಾಯಿತಿಗೆ ನೀಡಲಾಗುವದು ಎಂದು ತಹಶೀಲ್ದಾರ್ ಗೋವಿಂದ ರಾಜ್ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭ ಯೂನಿಯನ್ ಪದಾಧಿಕಾರಿಗಳಾದ ಗೋಪಾಲ್, ಕೆ.ಎಂ. ನಾರಾಯಣ, ಗಣೇಶ್, ಸಂಜೀವ, ಪಿ.ಟಿ. ಸುಂದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.