ಮಡಿಕೇರಿ, ಮಾ. 3: ಗಂಗಾಕಲ್ಯಾಣ ಯೋಜನೆಯಡಿ ಪರಿಶಿಷ್ಟ ಜಾತಿಯ ಸಣ್ಣ ಹಾಗೂ ಅತಿಸಣ್ಣ ರೈತರ ಕೃಷಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಪಂಪ್ ಮೋಟಾರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. 3.5 ಲಕ್ಷ ರೂ ಘಟಕ ವೆಚ್ಚದಲ್ಲಿ, 3 ಲಕ್ಷರೂ ಸಹಾಯಧನ, ಇದರಲ್ಲಿ ವಿದ್ಯುತ್ ಸಂಪರ್ಕ ವೆಚ್ಚ ಸೇರಿರುತ್ತದೆ.
ಸಮೃದ್ಧಿ ಯೋಜನೆಯಡಿ ಸಾಮಾಜಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿಯ ಯುವಕ /ಯುವತಿಯರನ್ನು ಉದ್ಯಮಶೀಲರನ್ನಾಗಿ ಮಾಡಲು 800 ಕೋಟಿ ರೂ. ವೆಚ್ಚದಲ್ಲಿ ಸಮೃದ್ಧಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಫಲಾನುಭವಿಗಳಿಗೆ ಬ್ರಾಂಡೆಡ್ ಸಂಸ್ಥೆಗಳ ಫ್ರಾಂಚೈಸಿ/ ಡೀಲರ್ಶಿಪ್ ಒದಗಿಸಿ ರಿಡೇಲ್ ವ್ಯಾಪಾರಿ ಮಳಿಗೆಗಳನ್ನು ಲಾಭದಾಯಕವಾಗಿ ನಡೆಸಲು ಆರ್ಥಿಕ ಮತ್ತು ತಾಂತ್ರಿಕ ಬೆಂಬಲ ನೀಡಲಾಗುವುದು. ನಿಗಮದಿಂದ ಆರ್ಥಿಕ ಸಹಾಯ ಗರಿಷ್ಠ ರೂ.10 ಲಕ್ಷ.
ಭೂ ಒಡೆತನ ಯೋಜನೆಯಡಿ ಭೂರಹಿತ ಪರಿಶಿಷ್ಟ ಜಾತಿಯ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಜಮೀನನ್ನು ಖರೀದಿಸಿ ನೀಡಿ ಭೂಮಾಲೀಕರನ್ನಾಗಿ ಮಾಡಲಾಗುವುದು. ಘಟಕ ವೆಚ್ಚದ ಮೊತ್ತ ರೂ.15 ಲಕ್ಷದಲ್ಲಿ ಜಿಲ್ಲಾಧಿಕಾರಿಗಳು ನಿಗದಿಪಡಿಸುವ ದರದಲ್ಲಿ ಕನಿಷ್ಠ 1 ಎಕರೆಗೆ ಮೇಲ್ಪಟ್ಟು ಖುಷ್ಕಿ ಜಮೀನು ಅಥವಾ ಕನಿಷ್ಟ 1/2 ಎಕರೆ ಮೇಲ್ಪಟ್ಟು ತರಿ ಜಮೀನು ಖರೀದಿಸಿ ನೀಡಲಾಗುವುದು.
ಮೈಕ್ರೋ ಕ್ರೆಡಿಟ್ ಯೋಜನೆಯಡಿ 10 ಮಹಿಳೆಯರ ಸ್ವಸಹಾಯ ಗುಂಪಿಗೆ ಆದಾಯಗಳಿಸುವ ಉತ್ಪಾದನಾ ಚಟುವಟಿಕೆಗಳಿಗೆ ರೂ.2.50 ಲಕ್ಷ ಆರ್ಥಿಕ ಸಹಾಯ ನೀಡಲಾಗುವುದು. ರೂ.1.50 ಲಕ್ಷ ನೇರಸಾಲ ಮತ್ತು ರೂ.1 ಲಕ್ಷ ಸಹಾಯಧನ ಒದಗಿಸಲಾಗುವುದು.
ಸ್ವಯಂ-ಉದ್ಯೋಗ-ಉದ್ಯಮಶೀಲತಾ ಯೋಜನೆಯಡಿ ಪರಿಶಿಷ್ಟ ಜಾತಿಯ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಆರಂಭಿಸಲು ಬ್ಯಾಂಕ್ ಸಾಲದ ಸಹಯೋಗದಲ್ಲಿ ನಿಗಮದಿಂದ ಸಹಾಯಧನ ಒದಗಿಸಲಾಗುವುದು. ರೂ.5 ಲಕ್ಷಗಳವರೆಗಿನ ಘಟಕಗಳಿಗೆ ಶೇ.70 ರಷ್ಟು. ರೂ.10 ಲಕ್ಷಗಳವರೆಗಿನ ಘಟಕಗಳಿಗೆ ಶೇ.60 ರಷ್ಟು ಅಥವಾ ಗರಿಷ್ಟ ರೂ.5 ಲಕ್ಷ. ರೂ.20 ಲಕ್ಷಗಳವರೆಗಿನ ಘಟಕಗಳಿಗೆ ಶೇ.50 ರಷ್ಟು ಅಥವಾ ಗರಿಷ್ಟ ರೂ.5 ಲಕ್ಷ.ಘಟಕ ವೆಚ್ಚದ ಉಳಿದ ಭಾಗ ಬ್ಯಾಂಕ್ಸಾಲ.
ಐರಾವತ ಯೋಜನೆಯಡಿ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ ಯುವತಿಯರಿಗೆ 225 ರೂ ವೆಚ್ಚದಲ್ಲಿ ಊಬರ್, ಓಲಾ, ಮೇರು ಸಂಸ್ಥೆಗಳ ಮಾರುಕಟ್ಟೆ ಸಹಯೋಗದಲ್ಲಿ ಐರಾವತ ಯೋಜನೆ. ಪ್ರತೀ ಫಲಾನುಭವಿಗೆ ಟ್ಯಾಕ್ಸಿ ಖರೀದಿಸಲು 5 ಲಕ್ಷಗಳ ಸಹಾಯಧನ. ಉಳಿದಮೊತ್ತ ಬ್ಯಾಂಕ್ ಸಾಲ ಅಥವಾ ಫಲಾನುಭವಿಯ ಪಾಲು.
ಉನ್ನತ ಯೋಜನೆಯಡಿ ತಾಂತ್ರಿಕ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಿ ಚಿಂತನೆಯುಳ್ಳ ಪರಿಶಿಷ್ಟ ಜಾತಿಯ ನವೋದ್ಯಮಿಗಳಿಗೆ ರೂ.50 ಲಕ್ಷ ಧನಸಹಾಯ. ಗ್ರಾಮೀಣ ಅಭಿವೃದ್ಧಿ ಅಥವಾ ಸಾಮಾಜಿಕ ಚಿಂತನೆಯ ಆವಿಷ್ಕಾರಗಳ ನೂತನ ಉದ್ಯಮಿಗಳಿಗೆ ರೂ.50 ಲಕ್ಷ ಧನಸಹಾಯ. ತಾಂತ್ರಿಕ ಮತ್ತು ಸೇವಾ ಕ್ಷೇತ್ರದ ಉದ್ಯಮಗಳ ಸಹಯೋಗದಲ್ಲಿ ನಿರುದ್ಯೋಗಿಗಳಿಗೆ ಉಚಿತ ತರಬೇತಿ ಮತ್ತು ಉದ್ಯೋಗ ಯೋಜನೆ.