ಸೋಮವಾರಪೇಟೆ, ಮಾ. 3: ಸರ್ಕಾರದ ಸಾಲ ಮನ್ನಾ ಯೋಜನೆಯನ್ನು ಅರ್ಹ ರೈತರಿಗೆ ಒದಗಿಸಲು ಸಂಬಂಧಿಸಿದ ಇಲಾಖಾ ಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವದು ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಲಿಂಗೇರಿ ರಾಜೇಶ್ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಸಾಲ ಮನ್ನಾ ಯೋಜನೆ ಹಲವಷ್ಟು ರೈತರಿಗೆ ಲಭಿಸಿಲ್ಲ. ಅಗತ್ಯ ದಾಖಲಾತಿಗಳನ್ನು ನೀಡಿದ್ದರೂ ಸಹ ಈವರೆಗೆ ಯೋಜನೆಯ ಹಣ ಬಂದಿಲ್ಲ ಎಂದು ಆರೋಪಿಸಿದರು.

ಈ ಬಗ್ಗೆ ಡಿಸಿಸಿ ಬ್ಯಾಂಕ್‍ನ ಅಧಿಕಾರಿಗಳನ್ನು ವಿಚಾರಿಸಿದರೆ ಆನ್‍ಲೈನ್‍ನಲ್ಲಿ ಸಮಸ್ಯೆ ಇದೆ ಎಂಬುದಾಗಿ ಹೇಳಿಕೆ ನೀಡುತ್ತಿದ್ದಾರೆ. ಸಮರ್ಪಕ ದಾಖಲಾತಿ ನೀಡಿದರೆ ಸಾಲಮನ್ನಾ ಯೋಜನೆ ಲಭಿಸಲಿದೆ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದು, ರೈತರು ಸಾಲಮನ್ನಾಕ್ಕೆ ಯಾವೆಲ್ಲಾ ದಾಖಲಾತಿಗಳನ್ನು ಸಲ್ಲಿಸಬೇಕು ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಂದಕ್ಕೆ 145 ಮಂದಿ ರೈತರಿಗೆ ಸಾಲಮನ್ನಾದ ಹಣ ಬಂದಿಲ್ಲ. ಜಿಲ್ಲೆಯ ಇತರ ವ್ಯವಸಾಯ ಸಂಘಗಳಲ್ಲೂ ಇದೇ ರೀತಿಯ ಸಮಸ್ಯೆಯಾಗಿದ್ದು, ಸಾಲಮನ್ನಾಕ್ಕೆ ಸರ್ಕಾರದಲ್ಲಿ ಹಣ ಇದೆಯೋ ಇಲ್ಲವೋ ಎಂಬ ಸಂಶಯ ಮೂಡುವಂತೆ ಮಾಡಿದೆ ಎಂದು ರಾಜೇಶ್ ಹೇಳಿದರು.

ಗೋಷ್ಠಿಯಲ್ಲಿದ್ದ ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಮಾತನಾಡಿ, ಸಂಘದ ವತಿಯಿಂದ ಈಗಾಗಲೇ ಸಾಲಮನ್ನಾದ ಸಮಸ್ಯೆಯ ಬಗ್ಗೆ ತಹಸೀಲ್ದಾರ್, ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಒಂದು ವೇಳೆ ರೈತರು ಸಲ್ಲಿಸಿರುವ ದಾಖಲಾತಿಗಳು ಅಸಮರ್ಪವಾಗಿದ್ದರೆ, ಮತ್ತೊಮ್ಮೆ ಸಮರ್ಪಕ ದಾಖಲಾತಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ರೈತರು ತೀರಾ ಸಂಕಷ್ಟಕ್ಕೆ ತಲುಪಿದ್ದು, ಸಾಲಮನ್ನಾ ಆಗದಿದ್ದಲ್ಲಿ ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ. ಕೆಲವರ ಹೆಸರು ಪಟ್ಟಿಯಲ್ಲಿಯೇ ಇಲ್ಲ; ಇನ್ನು ಪಟ್ಟಿಯಲ್ಲಿರುವ ಕೆಲವರಿಗೆ ಸಾಲಮನ್ನಾದ ಹಣವೂ ಬಂದಿಲ್ಲ. ಒಟ್ಟಾರೆ ಈ ಬಗ್ಗೆ ಯಾವ ಅಧಿಕಾರಿಗಳೂ ಸೂಕ್ತ ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಮುದ್ದಪ್ಪ ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಎಸ್.ಎಂ. ಡಿಸಿಲ್ವಾ, ಎಂ.ಪಿ. ತಿಮ್ಮಯ್ಯ, ಜಿ.ಯು. ರಾಜೇಶ್ ಅವರುಗಳು ಉಪಸ್ಥಿತರಿದ್ದರು.