ಸೋಮವಾರಪೇಟೆ, ಮಾ. 3: ವಿಭಜಿತ ಸೋಮವಾರಪೇಟೆ ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಮಾದಾಪುರ, ಗರ್ವಾಲೆ ಮತ್ತು ಹರದೂರು ಗ್ರಾಮ ಪಂಚಾಯಿತಿ ಗಳನ್ನು ಸೋಮವಾರಪೇಟೆಗೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಿತಿಯ ಪದಾಧಿಕಾರಿಗಳು ಇಂದು ಜಿಲ್ಲಾಧಿ ಕಾರಿಗಳನ್ನು ಭೇಟಿ ಮಾಡಿದರು.
ಈ ಸಂದರ್ಭ ಪದಾಧಿಕಾರಿಗಳ ಮನವಿ ಆಲಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಸಮಿತಿಯ ಬೇಡಿಕೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವದು ಎಂದು ಭರವಸೆ ನೀಡಿದರು.
ವಿಭಜಿತ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಮನವಿಯನ್ನು ಗಮನಿಸಿದ್ದೇನೆ. ಸರ್ಕಾರದ ಆದೇಶದ ಅನ್ವಯ ಹೊಸ ಹೋಬಳಿ ರಚನೆ ಸಾಧ್ಯವಿಲ್ಲ. ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿಯನ್ನು ಕುಶಾಲನಗರ ತಾಲೂಕಿಗೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆ ಹರದೂರು, ಗರ್ವಾಲೆ, ಮಾದಾಪುರ ಗ್ರಾಮ ಪಂಚಾಯಿತಿಗಳು ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಗೆ ಈಗಾಗಲೇ ಒಳಪಟ್ಟಿರುವದರಿಂದ, ಅನಿವಾರ್ಯ ವಾಗಿ ಕುಶಾಲನಗರ ತಾಲೂಕಿಗೆ ಸೇರ್ಪಡೆಗೊಳಿಸುವಂತಾಗಿದೆ. ಇದೀಗ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯಿಂದ ತನಗೆ ಮನವಿ ನೀಡಿರುವ ಹಿನ್ನೆಲೆ ನಿಮಗಳ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವದು ಎಂದರು.
ಹೊಸ ಹೋಬಳಿ ರಚನೆಗೆ ಅವಕಾಶ ನೀಡಬಾರದೆಂದು ಸರ್ಕಾರ ದ ಆದೇಶವಿದೆಯೇ ಹೊರತು, ಈಗಿರುವ ಹೋಬಳಿ ಯಿಂದ ಗ್ರಾಮ ಪಂಚಾಯಿತಿಯನ್ನು ಬೇರ್ಪಡಿಸ ಬಾರದೆಂದು ಆದೇಶವಿಲ್ಲ. ಈ ಹಿನ್ನೆಲೆ ಮೇಲಿನ ಮೂರೂ ಗ್ರಾ.ಪಂ.ಗಳನ್ನು ಸೋಮವಾರಪೇಟೆ ತಾಲೂಕಿಗೆ ಸೇರ್ಪಡೆಗೊಳಿಸಲು ಕ್ರಮ ವಹಿಸುವಂತೆ ಸಮಿತಿಯ ಅಧ್ಯಕ್ಷ ಅಭಿಮನ್ಯುಕುಮಾರ್ ಮನವಿ ಮಾಡಿದರು.
ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದ್ದು, ನೂತನ ತಾಲೂಕುಗಳಿಗೆ ಸೇರ್ಪಡೆ ಗೊಳ್ಳುವ ಗ್ರಾಮ ಪಂಚಾಯಿತಿಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಇಲಾಖೆಯಿಂದ ಈಗಾಗಲೇ ಸಿದ್ದ ಪಡಿಸಿರುವ ನಕಾಶೆಯಲ್ಲಿ ಮಾದಾ ಪುರ, ಗರ್ವಾಲೆ, ಹರದೂರು ಗ್ರಾಮ ಪಂಚಾಯಿತಿಗಳನ್ನು ಸೋಮ ವಾರಪೇಟೆಯಿಂದ ಕೈಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ದರಲ್ಲದೇ ಈ ಮೂರೂ ಗ್ರಾ.ಪಂ. ಗಳನ್ನು ಸೋಮವಾರಪೇಟೆ ಯಲ್ಲಿಯೇ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಹಿಂದೆ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕುಗಳನ್ನು ವಿಂಗಡಿಸುವ ಸಂದರ್ಭ ಸೋಮ ವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿ, ಸೋಮವಾರಪೇಟೆ ಹೋಬಳಿ, ಶನಿವಾರಸಂತೆ ಹೋಬಳಿ ಯ ಗರ್ವಾಲೆ, ಮಾದಾಪುರ, ಹರದೂರು ಪಂಚಾಯಿತಿಗಳನ್ನು ಮಾದಾಪುರ ಹೋಬಳಿ ಎಂದು ಘೋಷಿಸುವ ಉದ್ದೇಶ ಹೊಂದಿತ್ತು. ಆದರೆ ಹೊಸ ಹೋಬಳಿಗಳನ್ನು ರಚಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಾದಾಪುರ, ಹರದೂರು, ಗರ್ವಾಲೆ ಪಂಚಾಯಿತಿಗಳನ್ನು ಸುಂಟಿಕೊಪ್ಪ ಹೋಬಳಿಯಲ್ಲೇ ಉಳಿಸಿ ಈ ಪಂಚಾಯಿತಿಗಳನ್ನು ಕುಶಾಲನಗರ ತಾಲೂಕಿಗೆ ಸೇರ್ಪಡೆಗೊಳಿಸಲು ಮುಂದಾಗಿರುವದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಗ್ರಾಮಕ್ಕೊಳಪಡುವ ಜನರಿಗೆ ವ್ಯಾಪಾರ ವಹಿವಾಟಿಗೆ, ಕಚೇರಿ ಕೆಲಸಗಳಿಗೆ ಓಡಾಡಲು ಸೋಮವಾರ ಪೇಟೆ ಕೇಂದ್ರಸ್ಥಾನವಾಗಿದೆ. ಇವುಗಳನ್ನು ಕುಶಾಲನಗರಕ್ಕೆ ಸೇರಿಸಿದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಸಮಿತಿ ಪ್ರಧಾನ ಸಂಚಾಲಕ ಎಸ್.ಮಹೇಶ್ ಮಾತನಾಡಿ, ಇದೀಗ ಕುಗ್ರಾಮಗಳನ್ನೇ ಹೊಂದಿರುವ ಪ್ರದೇಶಗಳನ್ನು ಒಂದು ತಾಲೂಕಾಗಿ, ಅಭಿವೃದ್ಧಿ ಹೊಂದಿರುವ ಪ್ರದೇಶಗಳನ್ನು ಮತ್ತೊಂದು ತಾಲೂಕಾಗಿ ಮಾಡಲಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಗರ್ವಾಲೆ, ಮಾದಾಪುರ, ಹರದೂರು ಪಂಚಾಯಿತಿಗಳನ್ನು ಮಾದಾಪುರ ಹೋಬಳಿಯೆಂದು ಘೋಷಿಸಲು ಅಸಾಧ್ಯವಾದರೆ, ಇವುಗಳನ್ನು ಸುಂಟಿಕೊಪ್ಪದಿಂದ ಬೇರ್ಪಡಿಸಿ ಸೋಮವಾರಪೇಟೆಗೆ ಸೇರಿಸಬೇಕು ಎಂದರು.
ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸುವದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ನಂತರ ಸಮಿತಿಯ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಜವರೇಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎನ್. ದೀಪಕ್, ಉಪಾಧ್ಯಕ್ಷ ಬಿ.ಬಿ. ಸತೀಶ್, ಕಾರ್ಯದರ್ಶಿ ಸೋಮೇಶ್, ಖಜಾಂಚಿ ಎಸ್.ಎ. ಮುರುಳೀಧರ್, ಪದಾಧಿಕಾರಿಗಳಾದ ಅಭಿಷೇಕ್, ಭರತ್ ಕುಮಾರ್, ಕವಿತಾ ವಿರೂಪಾಕ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು.