ಸೋಮವಾರಪೇಟೆ, ಮಾ. 3: ದಕ್ಷಿಣ ಕೊಡಗಿನಲ್ಲಿ ನಡೆಯುವ ಅವಾಚ್ಯ ಪದಗಳೇ ಬಳಕೆಯಾಗುವ ಬೇಡು ಹಬ್ಬವನ್ನು ಮೀರಿಸುವಂತೆ ಸೋಮವಾರಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಸಭೆಯಲ್ಲಿ ಅವಾಚ್ಯ ಪದಗಳು ಬಳಕೆಯಾದವು.
ಕನ್ನಡಿಗರ ಸಾಕ್ಷಿಪ್ರಜ್ಞೆಯಂತೆ ಬಿಂಬಿತವಾಗಿರುವ ಕನ್ನಡ ಸಾಹಿತ್ಯ ಪರಿಷತ್ನ ಇಂದಿನ ಸಭೆಯಲ್ಲಿ ಕೇಳಿಬಂದ ಮಾತುಗಳು ಮರ್ಯಾದಸ್ಥರಂತೂ ಕಿವಿಕೊಟ್ಟು ಕೇಳುವಂತಿರಲಿಲ್ಲ. ಸೋಮವಾರಪೇಟೆ ತಾಲೂಕಿನಲ್ಲಿ ನಡೆದ ಸಮ್ಮೇಳನಗಳು, ಪ್ರಸ್ತುತ ಇರುವ ಸಮಿತಿಯ ಪದಾಧಿಕಾರಿಗಳು ನಿರ್ವಹಿಸಿರುವ ನಿರ್ಣಯ ಪುಸ್ತಕಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭ, ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರ ಸಮ್ಮುಖದಲ್ಲೇ ತರಹೇವಾರಿ ಅವಾಚ್ಯ ಪದಗಳು ಬಳಕೆಯಾದವು.
ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ನಿರ್ದೇಶಕ ಪ್ರಸನ್ನ ಅವರು ನಿರ್ಣಯ ಪುಸ್ತಕದ ಬಗ್ಗೆ ಆಡಿದ ಮಾತಿನಿಂದ ಗರಂ ಆದ ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಕೆ.ಎ. ಆದಂ ಅವರು, ಏಕವಚನ ಪದಪ್ರಯೋಗ ಮಾಡಿದರು. ಆ ಮೂಲಕ ಸಭೆಯಲ್ಲಿ ಅವಾಚ್ಯ ಪದಗಳ ಬಳಕೆಗೆ ನಾಂದಿ ಹಾಡಿದರು.
ನಂತರ ಕಸಾಪ ಭವನದಲ್ಲಿ ಕೆಲಕಾಲ ಬೇಡು ಹಬ್ಬವನ್ನೂ ನಾಚಿಸುವಂತೆ ಅವಾಚ್ಯ ಪದಗಳ ಬಳಕೆಯಾಯಿತು. ಸಭೆಯಲ್ಲಿದ್ದ ಮಹಿಳಾ ಸದಸ್ಯರು ಕಿವಿಮುಚ್ಚಿಕೊಂಡರು. ‘ಥೂ ಇದೆಂತಹ ಸಭೆ; ಕಸಾಪ ಇತಿಹಾಸದಲ್ಲಿಯೇ ಇಷ್ಟೊಂದು ಕೀಳುಮಟ್ಟದ ಸಭೆ ನೋಡಿಲ್ಲ’ ಎಂದು ಸಭೆಯಿಂದ ಹೊರನಡೆದರು.
ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಲೆಕ್ಕಪತ್ರ ಮಂಡನೆಯ ವಿಶೇಷ ಸಭೆ, ಅಧ್ಯಕ್ಷ ವಿಜೇತ್ ಅಧ್ಯಕ್ಷತೆಯಲ್ಲಿ, ಜಿಲ್ಲಾಧ್ಯಕ್ಷ ಲೋಕೇಶ್ಸಾಗರ್ ಉಪಸ್ಥಿತಿಯಲ್ಲಿ ನಡೆಯಿತು. ಸಭೆಯಲ್ಲಿ ಹಲವಷ್ಟು ವಿಷಯಗಳು ಪ್ರಸ್ತಾಪಗೊಂಡವು. ಈ ಮಧ್ಯೆ ಕಳೆದ ಸಭೆಯಲ್ಲಿ ಆಗಿದ್ದ ನಿರ್ಣಯಗಳನ್ನು ಸಭೆಯ ಗಮನಕ್ಕೆ ತಾರದೇ ಇರುವ ಕ್ರಮಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಈ ಹಿಂದೆ ನಡೆದ ಸಭೆಯಲ್ಲಿ, ಕನ್ನಡ ಸಾಹಿತ್ಯ ಪರಿಷತ್ನ ತಾಲೂಕು ಘಟಕದ ಲೆಕ್ಕಪತ್ರ ಸಮರ್ಪಕವಾಗಿಲ್ಲದ ಹಿನ್ನೆಲೆ, ಮುಂದಿನ ಸಭೆಯಲ್ಲಿ ಸಮರ್ಪಕ ಲೆಕ್ಕಪತ್ರವನ್ನು ಮಂಡಿಸುವಂತೆ ನಿರ್ಣಯಿಸಲಾಗಿತ್ತು. ಇದರೊಂದಿಗೆ ಕಸಾಪ ಭವನ ಕಾಮಗಾರಿಯನ್ನು ಯಾವದೇ ಕ್ರಿಯಾಯೋಜನೆ, ಟೆಂಡರ್ ಕರೆಯದೇ ನಡೆಸುತ್ತಿರುವ ಕ್ರಮಕ್ಕೆ ವಿರೋಧ ವ್ಯಕ್ತವಾಗಿ, ಪಾರದರ್ಶಕವಾಗಿ ಕಾಮಗಾರಿ ನಡೆಸುವಂತೆ ತೀರ್ಮಾನಿಸಿ, ಮುಂದಿನ ಸಭೆಯಲ್ಲಿ ಅನುಮತಿ ಪಡೆಯುವಂತೆ ತೀರ್ಮಾನಿಸಲಾಗಿತ್ತು.
ಅದರ ಮುಂದುವರೆದ ಭಾಗವಾಗಿ ನಡೆದ ಇಂದಿನ ಸಭೆಯಲ್ಲಿ, ಕಳೆದ ಸಾಲಿನ ನಿರ್ಣಯಗಳು ನಮೂದಾಗಿದ್ದ ಪುಟಗಳನ್ನು ಗಮ್ನಿಂದ ಅಂಟಿಸಿ, ಬೇರೆಯದೇ ನಿರ್ಣಯ ಬರೆಯಲಾಗಿತ್ತು. ಈ ಬಗ್ಗೆ ಕಸಾಪ ಜಿಲ್ಲಾ ನಿರ್ದೇಶಕ ಪ್ರಸನ್ನ ಅವರು ಆಕ್ಷೇಪ ವ್ಯಕ್ತಪಡಿಸಿ ‘ಬಂಡವಾಳ ಬಯಲಾಗುತ್ತದೆ ಎಂಬ ಕಾರಣಕ್ಕೆ ನಿರ್ಣಯದ ಪುಟಗಳನ್ನು ಅಂಟಿಸಿದ್ದಾರೆ’ ಎಂದರು.
ಇದರಿಂದ ಕೆರಳಿದ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಆದಂ, ‘ಯಾವನಿಗೆ ಹೇಳ್ತಿದೀಯಾ..?’ ಎಂದು ಏಕವಚನದಲ್ಲಿ ಪ್ರಶ್ನಿಸಿದರು. ಆ ಮೂಲಕ ಸಭೆಯಲ್ಲೇ ಅವಾಚ್ಯ ಪದ ಬಳಕೆಗೆ ಕಾರಣರಾದರು. ತೀರಾ ಅವಾಚ್ಯವಾದ ಪದಗಳು ಈರ್ವರ ನಡುವೆ ಪೈಪೋಟಿಯಂತೆ ಬಳಕೆಯಾದವು.
ಇದನ್ನೆಲ್ಲಾ ನೋಡುತ್ತಿದ್ದ ಕಸಾಪ ಮಹಿಳಾ ಪದಾಧಿಕಾರಿಗಳಾದ ಪ್ರೇಮಾ, ನಳಿನಿ ಗಣೇಶ್, ಸುಮಾ ಸುದೀಪ್, ಶರ್ಮಿಳಾ ರಮೇಶ್ ಅವರುಗಳು ಕಿವಿ ಮುಚ್ಚಿಕೊಳ್ಳುವಂತಾಯಿತು. ಒಂದು ಹಂತದಲ್ಲಿ ಆದಂ ಮತ್ತು ಪ್ರಸನ್ನ ಅವರುಗಳ ನಡುವೆ ಕೈ ಕೈ ಮಿಲಾಯಿಸುವ ಸನ್ನಿವೇಶ ಸೃಷ್ಟಿಯಾಯಿತು. ಈ ಸಂದರ್ಭ ಉಳಿದ ಪದಾಧಿಕಾರಿಗಳು ಮಧ್ಯೆ ಪ್ರವೇಶಿಸಿದರು.
ಸಭೆಯಲ್ಲಿ ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮುರುಳೀಧರ್, ಜಿಲ್ಲಾ ಸಮಿತಿ ಸದಸ್ಯ ನಾಗರಾಜ ಶೆಟ್ಟಿ ಸೇರಿದಂತೆ ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಸಾಪಕ್ಕೆ ನೂತನ ಅಧ್ಯಕ್ಷರ ದಿಢೀರ್ ಘೋಷಣೆ: ಇಷ್ಟೆಲ್ಲಾ ಗೊಂದಲಗಳು ನಡೆಯುತ್ತಿದ್ದ ನಡುವೆಯೇ ಸೋಮವಾರಪೇಟೆ ತಾಲೂಕು ಕಸಾಪಕ್ಕೆ ನೂತನ ಅಧ್ಯಕ್ಷರನ್ನಾಗಿ ನಿಕಟಪೂರ್ವ ಅಧ್ಯಕ್ಷ ಜವರಪ್ಪ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಘೋಷಿಸಿದರು.
ಈ ಹಿಂದೆ ನಡೆದ ಒಪ್ಪಂದದಂತೆ ಒಂದೂವರೆ ವರ್ಷಗಳ ಕಾಲ ಜವರಪ್ಪ ಅವರು, ಮುಂದಿನ ಒಂದೂವರೆ ವರ್ಷಗಳ ಕಾಲ ವಿಜೇತ್ ಅವರು ಅಧ್ಯಕ್ಷರಾಗಿದ್ದರು. ಇದೀಗ ಕಸಾಪದ ಅಧ್ಯಕ್ಷರ ಅವಧಿ 5 ವರ್ಷಕ್ಕೆ ಏರಿಕೆಯಾಗಿರುವದರಿಂದ, ಮುಂದಿನ ಸಾಲಿಗೆ ಜವರಪ್ಪ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿ, ನೇಮಕಾತಿ ಪತ್ರವನ್ನೂ ನೀಡಿದರು.
ಇದಕ್ಕೂ ಆದಂ ಮತ್ತು ವಿಜೇತ್ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ, ಅವರುಗಳ ಮಾತಿಗೆ ಸೊಪ್ಪು ಹಾಕದ ಅಧ್ಯಕ್ಷರು ಸಭೆಯನ್ನು ಮುಕ್ತಾಯಗೊಳಿಸಿ ಹೊರ ನಡೆದರು.
ಒಟ್ಟಾರೆ ಕನ್ನಡ ಸಾಹಿತ್ಯ ಪರಿಷತ್ನ ಸಭೆಯಲ್ಲಿ ಕೇಳಿಬಂದ ಮಾತುಗಳು ಮಾತ್ರ ಕರ್ಣಕಠೋರವಾಗಿತ್ತು!