ಸಿದ್ದಾಪುರ, ಮಾ. 1: ಸಿದ್ದಾಪುರದ ಶ್ರೀ ಮುತ್ತಪ್ಪ ಹಾಗೂ ಶ್ರೀ ಭಗವತಿ ದೇವಾಲಯದ 45ನೇ ವರ್ಷದ ವಾರ್ಷಿಕೋತ್ಸವ ಹಾಗೂ ತೆರೆ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನಡೆಯಿತು.
5 ದಿನಗಳ ಕಾಲ ನಡೆದ ಪೂಜಾ ಕೈಂಕರ್ಯಗಳಲ್ಲಿ ಪಂಚಗವ್ಯ ಪುಣ್ಯಾಹ, ಗಣಪತಿ ಹೋಮ, ಆಶ್ಲೇಷ ಬಲಿ, ಚಂಡಿಕಾಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಇದಲ್ಲದೇ ದೇವಿಯನ್ನು ಕಾವೇರಿ ನದಿಯಲ್ಲಿ ಸ್ನಾನ ನಂತರ ದೇವಿಯ ನರ್ತನ ಮೆರವಣಿಗೆ ನಡೆಸಲಾಯಿತು.
ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿತು. ಶ್ರೀ ಮುತ್ತಪ್ಪನ, ಶಾಸ್ತಪ್ಪನ, ತಿರುವಪ್ಪನ, ಭಗವತಿ, ವಿಷ್ಣುಮೂರ್ತಿ ತೆರೆಗಳು ನಡೆಯಿತು.
ಇದೇ ಪ್ರಥಮ ಬಾರಿಗೆ 5 ವಸೂರಿಮಾಲಾ ದೇವಿಯ ತೆರೆಗಳು ಏಕಕಾಲಕ್ಕೆ ಕಾವೇರಿ ನದಿಯಿಂದ ವಾದ್ಯಮೇಳದೊಂದಿಗೆ ಕರೆತರಲಾಯಿತು. ದೇವಾಲಯದಲ್ಲಿ ವಸೂರಿಮಾಲಾದ ನರ್ತನವು ಭಕ್ತಾದಿಗಳ ಮನಸೂರೆಗೊಂಡಿತ್ತು.
ಸಿದ್ದಾಪುರದ ಸುತ್ತಮುತ್ತಲಿನ ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. 5 ದಿನಗಳ ಕಾಲ ನಡೆದ ದೇವಾಲಯದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀ ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿ ಸಮಿತಿಯ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಆರ್. ಸುಬ್ರಮಣಿ ಹಾಗೂ ಪದಾಧಿಕಾರಿಗಳಾದ ರವಿ, ವರದರಾಜು, ಶ್ರೀಧರನ್, ಶಿಜು, ಪ್ರವೀಣ್ ಇನ್ನಿತರರು ಹಾಜರಿದ್ದರು.