ಮಡಿಕೇರಿ, ಮಾ. 1: ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಭಾರೀ ಮೌಲ್ಯದ ಮರಗಳನ್ನು ನಿಯಮ ಬಾಹಿರವಾಗಿ ಮಾರಾಟದ ಆರೋಪ ಬೆನ್ನಲ್ಲೇ ಅಲ್ಲಿ ಬೆಳೆದಿರುವ ಒಳ್ಳೆಮೆಣಸು (ಕರಿಮೆಣಸು) ಹಾಗೂ ಕಾಫಿ ಇತ್ಯಾದಿಯಲ್ಲಿ ಅಕ್ರಮ ಮಾರಾಟದ ಗುರುತರ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ವಿಶ್ವಾಸನೀಯ ಮೂಲಗಳು ‘ಶಕ್ತಿ’ಗೆ ಮಾಹಿತಿ ನೀಡಿ, ಕೇವಲ 317 ಸಿಲ್ವರ್ ಮರಗಳಿಗಷ್ಟೇ ಬಹಿರಂಗ ಟೆಂಡರನ್ನು ಕಳೆದ ವರ್ಷ ಕೇಂದ್ರದ ಅಧಿಕಾರಿಗಳು ಕರೆದಿದ್ದಾಗಿ ನೆನಪಿಸಿವೆ.ಮಾತ್ರವಲ್ಲದೆ ಸಂಬಂಧಿಸಿದ ಅಧಿಕಾರಿಗಳು ಕಳೆದ ವರ್ಷ ಮಳೆಗಾಲಕ್ಕೆ ಮುನ್ನವೆ ಟೆಂಡರ್ ಪ್ರಕಾರ ಮರಗಳನ್ನು ಕಡಿದು ವ್ಯಾಪಾರಿಗಳು ಸಾಗಾಟಗೊಳಿಸಿ ದ್ದಾಗಿದೆ ಎಂದು ಪುನರುಚ್ಚರಿಸಿವೆ.ಹೀಗಿರುವಾಗ ಚೆಟ್ಟಳ್ಳಿ ಕೇಂದ್ರದಲ್ಲಿ ಮರಗಳನ್ನು ಇತ್ತೀಚೆಗೆ ಯಾವುದೇ ನಿಯಮ ಪಾಲಿಸದೆ ಕಡಿಯುವುದ ರೊಂದಿಗೆ, ಕೇರಳ, ತಮಿಳುನಾಡು ಮೂಲದ ವ್ಯಾಪಾರಿಗಳು ಖುದ್ದು ಭೇಟಿ ನೀಡಿ ಗುರುತಿಸುವ ಮರಗಳನ್ನು ಕತ್ತರಿಸಿ ಕೊಂಡೊಯ್ಯುತ್ತಿದ್ದಾರೆ ಎಂದು ಬಹಿರಂಗಗೊಳಿಸಿವೆ. ಈ ಮರಗಳಿಗೆ ಪ್ರಸ್ತುತ ಮಾರುಕಟ್ಟೆ ದರಕ್ಕಿಂತ ಕಡಿಮೆ ಮೊತ್ತಕ್ಕೆ ಮತ್ತು ಭಾರೀ ಗಾತ್ರದ ನಾಟಗಳನ್ನು ಸೌದೆಯ ಲೆಕ್ಕದಲ್ಲಿ ಮಾರಾಟಗೊಳಿಸಿ ವಂಚಿಸಲಾಗಿದೆ ಎಂದು ಸುಳಿವು ನೀಡಿವೆ.ಕಾಫಿ ಸಂಶೋಧನಾ ಕೇಂದ್ರದ ಚೆಟ್ಟಳ್ಳಿ ಮಂದಿಯೊಂದಿಗೆ ಈ ದಂಧೆ ಯಲ್ಲಿ ಕಾಣದ ಕೈಗಳು ಕಾರ್ಯ ನಿರ್ವಹಿಸುತ್ತಿದೆ ಎಂದು ಶಂಕಿಸಿರುವ ಮೂಲಗಳು, ನೂರಾರು ಮರಗಳ ಹನನದೊಂದಿಗೆ ಫಸಲುಭರಿತ ಒಳ್ಳೆಮೆಣಸು ಬಳ್ಳಿ, ಕಾಫಿ ಫಸಲು ನಾಶಗೊಳಿಸುತ್ತಿರುವುದು ಹಲವಷ್ಟು ಅನುಮಾನ ಮೂಡಿಸಿರುವುದಾಗಿ ‘ಶಕ್ತಿ’ಗೆ ತಿಳಿಸಿವೆ.ಕರಿಮೆಣಸು ದುರುಪಯೋಗಕಳೆದ ವರ್ಷ ಚೆಟ್ಟಳ್ಳಿಯ ಈ ಕಾಫಿ ಸಂಶೋಧನಾ ಕೇಂದ್ರದಿಂದ ರೂ. 12 ಲಕ್ಷಕ್ಕೆ ಕರಿಮೆಣಸು ಫಸಲು ಮಾರಾಟಗೊಂಡಿದ್ದಾಗಿ ಬಹಿರಂಗ ಪಡಿಸಿರುವ ಮೂಲಗಳು, ಪ್ರಸಕ್ತ ಕೇವಲ (ಮೊದಲ ಪುಟದಿಂದ) ರೂ. 5 ಲಕ್ಷಕ್ಕೆ ಬಿಡ್ ಮಾಡಿದ್ದ ಅಧಿಕಾರಿಗಳು ಜನತೆಯ ಆಕ್ಷೇಪಣೆ ಬಳಿಕ ಈ ಮೊತ್ತವನ್ನು ರೂ. 9 ಲಕ್ಷಕ್ಕೆ ನಿಗದಿಗೊಳಿಸಿದ್ದಾಗಿ ಮಾಹಿತಿ ನೀಡಿವೆ.

ಅಲ್ಲದೆ ಚೆಟ್ಟಳ್ಳಿ ಕೇಂದ್ರದ ಮರಗಳನ್ನು ಸಾಗಾಟಗೊಳಿಸುತ್ತಿರುವ ಮಂದಿಗೆ ನೆಪಮಾತ್ರಕ್ಕೆ ಟೆಂಡರ್ ಮುಖಾಂತರ ಕರಿಮೆಣಸು ಕೂಡ ನೀಡಲಾಗಿದೆ ಎಂದು ಗೊತ್ತಾಗಿದೆ. ಈ ರೀತಿ ಕಾಫಿ ಕೇಂದ್ರದಲ್ಲಿ 300 ಮರಗಳ ಲೆಕ್ಕದೊಂದಿಗೆ ಬಲಿತ 3 ಸಾವಿರ ಮರಗಳ ಸಾಗಾಟಕ್ಕೆ ಯತ್ನಿಸಲಾಗಿದ್ದು, ಇದೀಗ ‘ಶಕ್ತಿ’ ಈ ಬಗ್ಗೆ ಬೆಳಕು ಚೆಲ್ಲಿದ್ದರಿಂದ ಮರ ಕಡಿತಲೆ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ಬೊಟ್ಟು ಮಾಡಿವೆ.