ಆಲೂರು ಸಿದ್ದಾಪುರ, ಮಾ. 1: ಅರಣ್ಯದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಎಳನೀರುಗುಂಡಿ ಗ್ರಾಮದ ಮೀಸಲು ಅರಣ್ಯದಲ್ಲಿ ಪತ್ತೆಯಾಗಿದೆ.
ಎಳನೀರುಗುಂಡಿ ಕುರುಡುವಳ್ಳಿ ಗ್ರಾಮದ ಕುಮಾರ್ ಮತ್ತು ಲಕ್ಷ್ಮಿ ದಂಪತಿ ಪುತ್ರ ಅವಿನಾಶ್ (21) ಮೃತಪಟ್ಟಿರುವ ಯುವಕ. ಕೇಬಲ್ ಕೆಲಸ ಮಾಡುತ್ತಿದ್ದ ಅವಿನಾಶ್ ಶನಿವಾರ ರಾತ್ರಿಯಾದರೂ ಮನೆಗೆ ವಾಪಾಸಾಗಿರಲಿಲ್ಲ. ಈ ಬಗ್ಗೆ ಪೋಷಕರು ಎಲ್ಲಾಕಡೆಯಲ್ಲಿ ವಿಚಾರಿಸಿ ಹುಡುಕಾಟ ನಡೆಸಿದ್ದರು. ಭಾನುವಾರ ಸಹ ಪೋಷಕರು ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಎಳನೀರುಗುಂಡಿ ಗ್ರಾಮದ ರಸ್ತೆ ಬದಿಯಲ್ಲಿರುವ ಅರಣ್ಯದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಮಗನ ಶವವನ್ನು ಪೋಷಕರು ಪತ್ತೆ ಮಾಡಿದ್ದಾರೆ. ಅವಿನಾಶ್ ಚಿಕ್ಕಪ್ಪ ದಿವಾಕರ್ ಅವರು ಶನಿವಾರಸಂತೆ ಪೊಲೀಸರಿಗೆ ಅವಿನಾಶ್ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂಬ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.