ಸೋಮವಾರಪೇಟೆ, ಫೆ. 28: ಇಲ್ಲಿನ ಭುವನ ಮಂದಾರ ರೈತ ಉತ್ಪಾದಕರ ಕಂಪೆನಿಯ ವಾರ್ಷಿಕ ಸಭೆ ಸ್ಥಳೀಯ ಸಫಾಲಿ ಸಭಾಂಗಣದಲ್ಲಿ ನಡೆಯಿತು.
ಸಭೆಯನ್ನು ನಬಾರ್ಡ್ ಬ್ಯಾಂಕ್ನ ಡಿ.ಡಿ.ಎಂ. ಶ್ರೀನಿವಾಸ್ ಉದ್ಘಾಟಿಸಿ ಮಾತನಾಡಿ, ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದಿರುವದು ಒಂದೆಡೆಯಾದರೆ, ಹವಾಮಾನ ವೈಪರೀತ್ಯದಿಂದಾಗಿ ತಾವು ಬೆಳೆದ ಬೆಳೆಯನ್ನು ಕಳೆದುಕೊಳ್ಳುತ್ತಿರುವದರಿಂದ ಆರ್ಥಿಕ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ನಬಾರ್ಡ್ ಸಂಸ್ಥೆಯೊಂದಿಗೆ ಸೇರಿ ಇಂತಹ ರೈತ ಪರವಾದ ಕಂಪೆನಿಗಳನ್ನು ದೇಶದಲ್ಲಿ ಪ್ರಾರಂಭಿಸಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಕಂಪೆನಿಯ ಮೂಲಕ ಮಾರಾಟ ಮಾಡಿದಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯವಾಗುತ್ತದೆ ಎಂದರು.
ಕಂಪೆನಿಯು ಉತ್ತಮ ಆದಾಯ ಗಳಿಸಬೇಕಾದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಿದೆ. ಮೊದಲೇ ಯೋಜನೆಯನ್ನು ಸಿದ್ಧಪಡಿಸಿಕೊಂಡು ವ್ಯವಹಾರ ಮಾಡಿದಲ್ಲಿ ಮಾತ್ರ ಆರ್ಥಿಕ ಸಬಲತೆ ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.
ಓಡಿಪಿ ಸಂಸ್ಥೆಯ ಸಂಯೋಜಕ ರಮೇಶ್ ಮಾತನಾಡಿ, ರೈತರಿಗೆ ಕಂಪೆನಿ ವತಿಯಿಂದ ಗುಣಮಟ್ಟದ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಹತ್ತು ಹಲವು ಕೃಷಿ ಪೂರಕವಾದ ಪರಿಕರಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಸಂಸ್ಥೆಯ ಆರ್ಥಿಕ ಬೆಳವಣಿಗೆಗೆ ಷೇರುದಾರರ ಸಹಕಾರ ಪ್ರಮುಖವಾಗಿದೆ. ತಮ್ಮ ಕೃಷಿ ಚಟುವಟಿಕೆಗಳಿಗೆ ತಮ್ಮ ಸಂಸ್ಥೆಯಿಂದಲೇ ಖರೀದಿ ಮಾಡಿದಲ್ಲಿ ಹೆಚ್ಚಿನ ಲಾಭಗಳಿಸುವದರೊಂದಿಗೆ ಗುಣಮಟ್ಟದ ಸಾಮಗ್ರಿ ಪಡೆಯಲು ಸಾಧ್ಯ ಎಂದರು.
ಕಂಪೆನಿಯ ಅಧ್ಯಕ್ಷ ಎಸ್.ಎಂ. ಡಿಸಿಲ್ವ ಮಾತನಾಡಿ, ಈಗಾಗಲೇ ಸಂಸ್ಥೆ ಲಾಭ ಗಳಿಸುತ್ತಿದ್ದು, ರಾಜ್ಯದಲ್ಲಿ 7ನೇ ಸ್ಥಾನವನ್ನು ಹಾಗೂ ಜಿಲ್ಲೆಯಲ್ಲಿ 2ನೇ ಸ್ಥಾನವನ್ನು ಹೊಂದಿದೆ. ಸದಸ್ಯರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸದಸ್ಯರು ಸಹಕಾರ ನೀಡಬೇಕೆಂದರು.
ವೇದಿಕೆಯಲ್ಲಿ ನಿರ್ದೇಶಕರಾದ ಖಾಲಿಸ್ತ ಡಿಸಿಲ್ವ, ಮೋಹನ್ದಾಸ್, ಲೋಕೇಶ್, ಕವಿತಾ ವಿರೂಪಾಕ್ಷ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಎನ್.ಬಿ. ಪೂಜಾಶ್ರೀ ಉಪಸ್ಥಿತರಿದ್ದರು.