ಕಣಿವೆ, ಫೆ. 28: ತಾಂತ್ರಿಕತೆ ಎಂಬುದು ಎಲ್ಲಾ ಕ್ಷೇತ್ರದಲ್ಲೂ ದಾಪುಗಾಲಿಟ್ಟರೂ ಕೂಡ ಕುಶಾಲ ನಗರದ ಪಟ್ಟಣ ಪಂಚಾಯಿತಿಗೆ ಮಾತ್ರ ಇದೂವರೆಗೂ ನಿಲುಕಲಿಲ್ಲ. ಏಕೆಂದರೆ ಕುಶಾಲನಗರವನ್ನು ಸುಂದರ ನಗರವಾಗಿ ರೂಪಿಸಲು ಮುಂಜಾನೆಯಿಂದ ಮುಸ್ಸಂಜೆ ಯವರೆಗೂ ಹೆಣಗಾಡುವ ಪೌರ ಕಾರ್ಮಿಕರೆಂಬ ಕಾಯಕಯೋಗಿಗಳು ಮಾತ್ರ ಅದೇ ಅಜ್ಜನ ಕಾಲದಲ್ಲಿ ಮಾಡುತ್ತಿದ್ದ ರೀತಿಯೇ ಈಗಲೂ ಇಡೀ ಊರ ಜನ ಬಿಸಾಕುವ ನಾನಾ ತರಹದ ಕೊಳಕುಗಳನ್ನು ಒಂದೆಡೆ ಸುರಿದು ಅಲ್ಲಿ ಹಸಿ ಹಾಗೂ ಒಣಕಸ ಎಂದು ಬೇರ್ಪಡಿಸುವ ರೀತಿಯನ್ನು ನೋಡಿದ ಎಂತಹವರಿಗೂ ಅರೆ ಕ್ಷಣ ದಿಗಿಲಾಗುತ್ತದೆ. ಇಂತಹ ಚಿತ್ರಣ “ಶಕ್ತಿ”ಗೂ ಗೋಚರಿಸಿತು. ಪಟ್ಟಣದ ಸ್ವಚ್ಛತಾ ಸಿಬ್ಬಂದಿಗಳು ಗಬ್ಬುನಾಥ ಬೀರುವ ಕಸದ ರಾಶಿಯೊಳು ನಿಂತು ಕಸವನ್ನು ಬೇರ್ಪಡಿಸುತ್ತಿದ್ದ ರೀತಿ ಮರುಕ ಹುಟ್ಟಿಸಿತು. ಊರಿನ ರಸ್ತೆಗಳ ಕಸ ಗುಡಿಸಿ ಸ್ವಚ್ಛಗೊಳಿಸುವ, ಚರಂಡಿಗಳ ಕೊಳೆ ತೊಳೆದು ತೋರಣಿಸುವ ಈ ಸ್ವಚ್ಛತಾ ನೌಕರರು ಕೂಡ ನಮ್ಮಂತೆಯೇ ಮನುಷ್ಯರಲ್ಲವೇ...? ಅವರಿಗೂ ಕೂಡ ನಮ್ಮ ಹಾಗೆಯೇ ಒಂದು ಸುಂದರ ಬದುಕು ಇದೆ ಅಲ್ಲವೇ...? ಅವರನ್ನು ನಮ್ಮಂತೆಯೇ ಏಕೆ ನಾವು ಕಾಣುತ್ತಿಲ್ಲ. ಸ್ವಚ್ಛತಾ ಸಿಬ್ಬಂದಿಗಳು ಕೇವಲ ಎರಡು ದಿನಗಳು ತಮ್ಮ ಕೆಲಸ ಸ್ಥಗಿತಗೊಳಿಸಿದರೆ ಆ ಬೀದಿಯ, ಆ ಊರಿನ ಸ್ಥಿತಿ ಹೇಗಿರುತ್ತದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಆ ಪಟ್ಟಣದ ಅಂದ ಹಾಳಾಗುತ್ತದೆ. ಅಂತಹ ಸ್ವಚ್ಛತಾ ಸೇನಾನಿಗಳನ್ನು ಪ್ರತಿಯೊಬ್ಬರು ಗೌರವದಿಂದ ಕಾಣಲೇ ಬೇಕಿದೆ. ಆ ಕೆಲಸ ಹೇಗೆ ಆಗಬೇಕೆಂದರೆ, ಪಟ್ಟಣದ ಪ್ರತಿ ಮನೆಗಳಲ್ಲೂ ದಿನಂಪ್ರತಿ ಸಂಗ್ರಹವಾಗುವ ಕಸವನ್ನು ಒಣ ಹಾಗು ಹಸಿ ಎಂದು ಬೇರ್ಪಡಿಸಿ ಸ್ವಚ್ಛತಾ ಸೇನಾನಿಗಳು ಕಸ ಸಂಗ್ರಹಿಸಲು ಮನೆಗಳ ಮುಂದೆ ವಾಹನಗಳಲ್ಲಿ ಬಂದಾಗ ಖುದ್ದು ನಿವಾಸಿಗಳೇ ಇದು ಒಣ, ಇದು ಹಸಿ ಕಸ ಎಂದು ಹಾಕುವ ಮೂಲಕ ಅವರನ್ನು ನಾವು ಗೌರವಿಸಬೇಕು. ಅಂತಹ ಕೆಲಸ ಕೂಡಲೇ ಆರಂಭವಾಗಬೇಕು.

ಕುಶಾಲನಗರ ಪಟ್ಟಣದಲ್ಲಿ ಕಳೆದ 2011 ರ ಜನಗಣತಿಯ ಪ್ರಕಾರ 16,800 ಜನಸಂಖ್ಯೆ ಇದೆ. (ಆದರೆ ಈಗ ಇದು ಎರಡು ಪಟ್ಟು ಹೆಚ್ಚಿದೆ) ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್ ಅವರು ‘ಶಕ್ತಿ’ಗೆ ನೀಡಿದ ಮಾಹಿತಿಯ ಪ್ರಕಾರ ಪಂಚಾಯತಿ ವ್ಯಾಪ್ತಿಯಲ್ಲಿನ 20 ಕ್ಕೂ ಹೆಚ್ಚು ಬಡಾವಣೆಗಳ ಸ್ವಚ್ಛತೆಗೆ ಹಾಲಿ 27 ಮಂದಿ ಖಾಯಂ ಗೊಂಡ ಪೌರ ಕಾರ್ಮಿಕರಿದ್ದಾರೆ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ಒಟ್ಟು 7 ಗೂಡ್ಸ್ ಆಟೋಗಳಿವೆ. ಒಂದು ಲಾರಿ ಇದೆ. ಪಂಚಾಯತಿ ವ್ಯಾಪ್ತಿಯ ಸ್ವಚ್ಛತೆಗೆ ವಿಶೇಷ ಗಮನ ಹರಿಸಲಾಗಿದೆ ಎಂದು ಮಾಹಿತಿ ನೀಡಿದರು. ಚುನಾಯಿತ ಆಡಳಿತ ಮಂಡಳಿ ಪಟ್ಟಣದ ಜನರಿಂದ ಚುನಾಯಿತಗೊಂಡು 15 ಮಾಸಗಳು ಕಳೆದರೂ ಕೂಡ ಜನಪ್ರತಿನಿಧಿಗಳ ಆಡಳಿತ ಇದ್ದೂ ಇಲ್ಲದಂತಿರುವ ಹಾಲಿ ವ್ಯವಸ್ಥೆಯಲ್ಲಿ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಭಿಯಂತರರ ಮೇಲೆ ಸಾರ್ವಜನಿಕರು ಹಾಗೂ ಪಂಚಾಯಿತಿಗೆ ಚುನಾಯಿತಗೊಂಡ ಕೆಲವು ಸದಸ್ಯರಿಂದ ಒಂದಷ್ಟು ಅಸಮಾಧಾನ ಇದ್ದರೂ ಕೂಡ, ಮುಖ್ಯಾಧಿಕಾರಿ ಸುಜಯ್ ಕುಮಾರ್ ಸ್ವಚ್ಛತೆಗೆ ಮಾತ್ರ ಒತ್ತು ನೀಡಿದ್ದಾರೆ. ಇನ್ನು ಪಂಚಾಯಿತಿ ಒಳಗೆ ಸಾರ್ವಜನಿಕರ ಕೆಲಸ ಕಾರ್ಯಗಳ ನಿಮಿತ್ತ ಲಂಚಾವತಾರ ಮತ್ತು ಮಧ್ಯವರ್ತಿಗಳ ಅಟ್ಟಹಾಸವನ್ನು ನಿಯಂತ್ರಿಸಲು ಮಾತ್ರ ಈ ಮುಖ್ಯಾಧಿಕಾರಿಗಳಿಗೆ ಸಾಧ್ಯವಾಗದಿರುವುದು ಬೇಸರದ ಸಂಗತಿ ಎಂದು ಚುನಾಯಿತ ಸದಸ್ಯ ಬಿ. ಅಮೃತರಾಜು ಹೇಳುತ್ತಾರೆ. ಏನೇ ಇರಲೀ ಪಂಚಾಯಿತಿಯ ಸ್ವಚ್ಛತಾ ಸೇನಾನಿಗಳೆಂಬ ಕಾಯಕ ಯೋಗಿಗಳ ಮೇಲೆ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪಟ್ಟಣದ ಪ್ರತೀ ನಿವಾಸಿಗಳಿಂದ ವಿಶೇಷ ಗೌರವಾದರ ಮಾತ್ರ ಒಡ ಮೂಡಬೇಕು ಅಷ್ಟೆ.

- ಕೆ.ಎಸ್. ಮೂರ್ತಿ