ತ್ರೇತಾಯುಗದಲ್ಲಿ ಶ್ರೀರಾಮನು ತನ್ನ ತಂದೆಯ ವಾಕ್ಯ ಪರಿಪಾಲನೆ ಗಾಗಿ ತನ್ನ ಪತ್ನಿ ಸೀತೆ, ತಮ್ಮ ಲಕ್ಷ್ಮಣನೊಡನೆ ವನವಾಸಕ್ಕೆ ತೆರಳಿ ಹತ್ತು ವರ್ಷಗಳು ಕಳೆದಿತ್ತು. ಅನೇಕ ಋಷಿಗಳ ಆಶ್ರಮಗಳಲ್ಲಿ ಶ್ರೀ ಸೀತಾ-ರಾಮ ಲಕ್ಷ್ಮಣರು ವನವಾಸವನ್ನು ಕಳೆಯುತ್ತ ಬಳಿಕ ಮಹಾನ್ ಬ್ರಹ್ಮರ್ಷಿ ಅಗಸ್ತ್ಯರ ಆಶ್ರಮಕ್ಕೆ ತೆರಳಬೇಕೆಂದು ಸಂಕಲ್ಪಿಸಿದರು.
ರಾಮ-ಲಕ್ಷ್ಮಣರಿಬ್ಬರೂ ಹಲವಾರು ಪರ್ವತಗಳ ತಪ್ಪಲು ಪ್ರದೇಶ ಗಳನ್ನೂ, ಕಾಡುಗಳನ್ನೂ, ನಾನಾ ವಿಧವಾದ ಮತ್ತು ರಮ್ಯವಾದ ನದಿಗಳನ್ನೂ ನೋಡುತ್ತಾ ಸೀತೆಯೊಡನೆ ತೆರಳುತ್ತಿದ್ದರು. ನದಿಯ ಮಳಲಿನಲ್ಲಿ ಸಂಚರಿಸುತ್ತಿದ್ದ ಸಾರಸಪಕ್ಷಿಗಳನ್ನೂ, ಚಕ್ರವಾಕಪಕ್ಷಿಗಳನ್ನೂ, ಕಮಲ-ಪುಷ್ಪಗಳಿಂದಲೂ-ನೀರು ಹಕ್ಕಿಗಳಿಂದಲೂ ಕೂಡಿದ್ದ ಸರೋವರಗಳನ್ನೂ ನೋಡುತ್ತಾ ರಾಮ-ಲಕ್ಷ್ಮಣ-ಸೀತೆಯರು ಸಂಚರಿಸುತ್ತಿದ್ದರು. ಗುಂಪು-ಗುಂಪಾಗಿದ್ದ ಜಿಂಕೆಗಳನ್ನೂ, ಮದಿಸಿ ಉನ್ಮತ್ತ ವಾಗಿದ್ದ ನೀಳವಾದ ಕೊಂಬುಗಳಿಂದ ಕೂಡಿದ್ದ ಕಾಡುಕೋಣ ಗಳನ್ನೂ, ಕಾಡುಹಂದಿಗಳನ್ನೂ, ವೃಕ್ಷಗಳನ್ನು ನಾಶಪಡಿಸುತ್ತಿದ್ದ ಆನೆಗಳನ್ನೂ ನೋಡುತ್ತಾ ರಾಜಕುಮಾರರು ರಾಜಕುಮಾರಿಯೊಡನೆ ಪ್ರಯಾಣ ಮಾಡುತ್ತಿದ್ದರು.
ಶ್ರೀರಾಮನು ವಿವಿಧ ಆಶ್ರಮಗಳಲ್ಲಿ ಸೀತಾ-ಲಕ್ಷ್ಮಣರೊಡನೆ ಯಥಾನುಕೂಲವಾಗಿ ಸಂತೋಷದಿಂದಿರುತ್ತಿದ್ದ ಹದಿನಾಲ್ಕು ವರ್ಷಗಳ ವನವಾಸದ ಅವಧಿಯಲ್ಲಿ ಹತ್ತು ವರ್ಷಗಳು ಕಳೆದು ಹೋದುವು.
ಹೀಗೆ ಶ್ರೀರಾಮನು ಸೀತಾ-ಲಕ್ಷ್ಮಣರೊಡನೆ ಆಶ್ರಮ ಮಂಡಲ ದಲ್ಲಿದ್ದ ಎಲ್ಲಾ ಆಶ್ರಮಗಳನ್ನೂ ಸುತ್ತಿಕೊಂಡು ಒಂದೊಂದು ಆಶ್ರಮ ದಲ್ಲಿಯೂ ಸಾಕಷ್ಟು ಕಾಲ ಸುಖವಾಗಿ ತಂಗಿದ್ದು ಸುತೀಕ್ಷ್ಣರ ಆಶ್ರಮಕ್ಕೆ ಹಿಂದಿರುಗಿದನು. ಅಲ್ಲಿದ್ದ ಮುನಿಗಳಿಂದ ಸತ್ಕøತನಾಗಿ ಸುತೀಕ್ಷ್ಣರ ಆಶ್ರಮದಲ್ಲಿಯೂ ಸ್ವಲ್ಪಕಾಲವನ್ನು ಕಳೆದನು. ಅಲ್ಲಿಯೇ ತಂಗಿದ್ದ ಶ್ರೀರಾಮನು ಒಮ್ಮೆ ಮಹಾಮುನಿಗಳಾದ ಸುತೀಕ್ಷ್ಣರ ಬಳಿಗೆ ಹೋಗಿ ವಿನೀತನಾಗಿ ಹೇಳಿದನು. ‘‘ಮಹಾಮುನಿಗಳೇ, ಮುನಿಶ್ರೇಷ್ಠರಾದ, ಪೂಜ್ಯರಾದ ಅಗಸ್ತ್ಯರು ಈ ಅರಣ್ಯ ಪ್ರದೇಶದಲ್ಲಿಯೇ ವಾಸಮಾಡುತ್ತಿ ದ್ದಾರೆಂಬ ವಿಷಯವನ್ನು ಇಲ್ಲಿ ನಿತ್ಯವೂ ಅರಣ್ಯದ ವಾರ್ತೆಯನ್ನು ಹೇಳುತ್ತಿರುವದರಿಂದ ಕೇಳಿದೆನು, ಆದರೆ ಈ ಅರಣ್ಯವು ಬಹಳ ವಿಸ್ತಾರವಾಗಿರುವದರಿಂದ ಯಾವ ಪ್ರದೇಶದಲ್ಲಿ ಧೀಮಂತರಾದ ಅಗಸ್ತ್ಯರ ಆಶ್ರಮವಿರುವದೆಂಬದನ್ನು ನಾನು ತಿಳಿದಿಲ್ಲ, ಪೂಜ್ಯರಾದ ನಿಮ್ಮ ಅನುಗ್ರಹವನ್ನು ಪಡೆದು ಭಾರ್ಯಾ-ಭ್ರಾತೃಗಳೊಡನೆ ಅಗಸ್ತ್ಯರ ಬಳಿಗೆ ಹೋಗಲು ಮತ್ತು ಅವರಿಗೆ ನಮಸ್ಕರಿಸಿ ಅವರ ಆಶೀರ್ವಾದಗಳನ್ನು ಪಡೆದು ಬರಲು ಬಯಸಿದ್ದೇನೆ. ಮುನಿಶ್ರೇಷ್ಠರಾದ ಅಗಸ್ತ್ಯರನ್ನು ನಾನೇ ಸ್ವತಃ ಶುಶ್ರೂಷೆ ಮಾಡಬೇಕೆಂಬ ದೊಡ್ಡ ಮನೋರಥವು ನನ್ನ ಮನಸ್ಸಿನಲ್ಲಿ ಪದೇ-ಪದೇ ಸುಳಿದಾಡುತ್ತಲೇ ಇದೆ. ಇದಕ್ಕೆ ನೀವು ಅವಕಾಶವನ್ನು ಮಾಡಿಕೊಡಬೇಕೆಂದು ಪ್ರಾರ್ಥಿಸುತ್ತೇನೆ.’’
ಧರ್ಮಾತ್ಮನಾದ ದಶರಥ ಪುತ್ರನಾದ ಶ್ರೀರಾಮನ ವಿನಯಪೂರ್ವಕವಾದ ಆ ಮಾತನ್ನು ಕೇಳಿ ಸುಪ್ರೀತರಾದ ಸುತೀಕ್ಷ್ಣರು ಹೇಳಿದರು.
‘‘ರಾಘವ ! ಸೀತಾ-ಲಕ್ಷ್ಮಣರೊಡನೆ ಅಗಸ್ತ್ಯರ ಆಶ್ರಮಕ್ಕೆ ಹೋಗಿ ಬರುವಂತೆ ನಾನೇ ನಿನಗೆ ಹೇಳಬೇಕೆಂದಿದ್ದೆನು. ದೈವಯೋಗದಿಂದ ಆ ವಿಷಯವಾಗಿ ನೀನೇ ನನ್ನನ್ನು ಪ್ರಾರ್ಥಿಸುತ್ತಿರುವೆ, ಅವರ ಆಶ್ರಮವು ಎಲ್ಲಿರುವದೆಂಬದನ್ನು ಹೇಳುವೆನು, ಕೇಳು.
ಈ ನಮ್ಮ ಆಶ್ರಮದಿಂದ ದಕ್ಷಿಣ ದಿಕ್ಕಿನ ಕಡೆಗೆ ನಾಲ್ಕು ಯೋಜನೆಗಳಷ್ಟು ದೂರ ಪ್ರಯಾಣ ಮಾಡು, ಅಲ್ಲಿ ಮಹಾಮಹಿಮೆಯುಳ್ಳ ಒಂದು ಶ್ರೇಷ್ಠವಾದ ಆಶ್ರಮವಿದೆ. ಅದು ಅಗಸ್ತ್ಯರ ತಮ್ಮನ ಆಶ್ರಮ, ಆ ಆಶ್ರಮ ಪ್ರದೇಶವು ಸಮತಲ ದಲ್ಲಿದೆ. ಬಹುಪುಷ್ಪ ಗಳಿಂದಲೂ, ಫಲಗಳಿಂದಲೂ ಕೂಡಿರುವ, ನಾನಾವಿಧವಾದ ಪಕ್ಷಿಗಳಿಂದ ನಿನಾದಿತವಾಗಿರುವ, ರಮ್ಯ ವಾಗಿರುವ ಪಿಪ್ಪಲೀವನ ದಿಂದ ಆ ಆಶ್ರಮ ಪ್ರದೇಶವು ಕಂಗೊಳಿಸುತ್ತಿದೆ. ಅದರ ಸಮೀಪ ದಲ್ಲಿಯೇ ಪ್ರಸನ್ನವಾದ ಜಲರಾಶಿ ಯಿಂದ ಕೂಡಿರುವ, ಹಂಸ-ಕಾರಂಡವಪಕ್ಷಿಗಳಿಂದ ತುಂಬಿರುವ, ಚಕ್ರವಾಕಪಕ್ಷಿಗಳಿಂದ ಶೋಭಾಯಮಾನವಾಗಿ ಕಾಣುವ ಸುಂದರವಾದ ಸರೋವರಗಳಿವೆ, ಅಂತಹ ರಮ್ಯವಾದ ಆಶ್ರಮದಲ್ಲಿ ರಾತ್ರಿ ತಂಗಿದ್ದು ಬೆಳಗಾಗುತ್ತಲೇ ಪ್ರಾತರ್ವಿಧಿಗಳನ್ನು ಮುಗಿಸಿ ಕೊಂಡು ಅರಣ್ಯದ ಪಾಶ್ರ್ವ ದಲ್ಲಿಯೇ ದಕ್ಷಿಣ ದಿಕ್ಕನ್ನು ಹಿಡಿದು ಹೋದರೆ ಒಂದು ಯೋಜನದ ಒಳಗಾಗಿಯೇ ಅಗಸ್ತ್ಯರ ಆಶ್ರಮವು ಸಿಕ್ಕುತ್ತದೆ. ನಾನು ಹೇಳಿರುವ ಈ ಮಾರ್ಗವನ್ನು ಹಿಡಿದು ನೀವೆಲ್ಲರೂ ಅಗಸ್ತ್ಯರ ಆಶ್ರಮಕ್ಕೆ ಹೋಗಿರಿ ಅನೇಕವಿಧವಾದ ವೃಕ್ಷಗಳಿಂದ ಶೋಭಾಯಮಾನವಾಗಿ ಕಾಣುವ, ರಮಣೀಯವಾದ ಆ ವನ ಪ್ರದೇಶವನ್ನು ನೋಡಿ ವೈದೇಹಿಯೂ ಆನಂದಪಡುತ್ತಾಳೆ. ಲಕ್ಷ್ಮಣನೂ ಸಂತೋಷಪಡುತ್ತಾನೆ. ನಿನಗೂ ಆನಂದವಾಗುತ್ತದೆ. ನಿಶ್ಚಯವಾಗಿಯೂ ಬಗೆ-ಬಗೆಯ ವೃಕ್ಷಗಳಿಂದ ಸಮಾವೃತವಾಗಿರುವ ಆ ವನ ಪ್ರದೇಶವು ಬಹಳ ರಮ್ಯವಾಗಿದೆ. ಯಶೋವಂತನೇ, ಮಹಾಮುನಿಗಳಾದ ಅಗಸ್ತ್ಯರನ್ನು ನೋಡಲು ಮನಸ್ಸು ಮಾಡಿರುವೆಯಾದರೆ ಈಗಲೇ ನೀನಲ್ಲಿಗೆ ಹೊರಟುಬಿಡು’’ ಸುತೀಕ್ಷ್ಣರ ಮಾತನ್ನು ಕೇಳಿ ಶ್ರೀರಾಮನು ಲಕ್ಷ್ಮಣನೊಡನೆ ಮುನಿಗಳಿಗೆ ಅಭಿವಾದನ ಮಾಡಿ ಸೀತಾ-ಲಕ್ಷ್ಮಣರೊಡನೆ ಅಗಸ್ತ್ಯರ ಆಶ್ರಮದ ಕಡೆಗೆ ಹೊರಟನು. ಸುತೀಕ್ಷ್ಣರು ನಿರ್ದೇಶಿಸಿದ್ದ ಮಾರ್ಗದಲ್ಲಿಯೇ ಸುಖವಾಗಿ ಪ್ರಯಾಣ ಮಾಡುತ್ತಾ ಮಾರ್ಗದ ಮಧ್ಯದಲ್ಲಿ ಸಿಕ್ಕುತ್ತಿದ್ದ ರಮ್ಯವಾದ ಅನೇಕಾನೇಕ ಅರಣ್ಯಗಳನ್ನೂ, ಮೇಘಸದೃಶವಾದ ಪರ್ವತಗಳನ್ನೂ, ಸರೋವರಗಳನ್ನೂ, ಹಾದಿಯ ಪಕ್ಕದಲ್ಲಿ ಹರಿಯುತ್ತಿದ್ದ ನದಿಗಳನ್ನೂ, ನೋಡುತ್ತಾ ಶ್ರೀರಾಮನು ಪರಮ ಸಂತುಷ್ಟನಾಗಿ ಲಕ್ಷ್ಮಣನಿಗೆ ಹೇಳಿದನು.
‘‘ಲಕ್ಷ್ಮಣ, ಮಹಾತ್ಮನಾದ ಅಗಸ್ತ್ಯರ ತಮ್ಮನಾದ, ಪುಣ್ಯ ಕರ್ಮನಾದ ಮಹರ್ಷಿಯು ಆಶ್ರಮವಿರುವ ಸ್ಥಳವು ನಿಶ್ಚಯವಾಗಿಯೂ ಇದೇ ಇರಬಹುದೆಂದು ತೋರುತ್ತದೆ. ಅಗಸ್ತ್ಯರ ತಮ್ಮನ ಆಶ್ರಮವಿರುವ ವನಪ್ರದೇಶವು ಹೂವು-ಹಣ್ಣುಗಳಿಂದ ಸಮೃದ್ಧವಾಗಿರುವ ವೃಕ್ಷಗಳಿಂದ ಆವೃತವಾಗಿರುವುದೆಂದು ನಾವು ಸುತೀಕ್ಷ್ಣರಿಂದ ಕೇಳಿದ್ದೆವು. ಅವರು ಹೇಳಿದ್ದಂತೆಯೇ ಈ ಹಾದಿಯಲ್ಲಿ ಹೂವು-ಹಣ್ಣುಗಳು ಭಾರದಿಂದ ಬಗ್ಗಿರುವ ಸಾವಿರಾರು ವೃಕ್ಷಗಳಿವೆ.
ಬಾಲಮೆಣಸಿನ ವನವೇ ಅಲ್ಲಿರುವುದೆಂದು ಸುತೀಕ್ಷ್ಣರು ಹೇಳಿದ್ದರು. ಅದರಂತೆಯೇ ಕಟುವಾದ ವಾಸನೆಯಿಂದ ಕೂಡಿರುವ ಪಕ್ವವಾದ ಮೆಣಸಿನ ವಾಸನೆಯು ಗಾಳಿಯ ಮೂಲಕ ವಾಗಿ ಈ ವನದ ಕಡೆಯಿಂದಲೇ ಬರುತ್ತಿದೆ. ಒಟ್ಟಲು-ಒಟ್ಟಲಾಗಿ ಸೌದೆಯನ್ನು ಕೂಡಿಸಿಟ್ಟಿರುವದೂ ಕಾಣುತ್ತಿದೆ. ವೈಢೂರ್ಯದಂತೆ ಪ್ರಕಾಶಮಾನವಾಗಿ ಕಾಣುವ ಕತ್ತರಿಸಿಟ್ಟಿರುವ ದರ್ಭೆಗಳೂ ಅಲ್ಲಲ್ಲಿ ಕಾಣುತ್ತಿವೆ. ಅರಣ್ಯದ ಮಧ್ಯದಲ್ಲಿರುವ ಆಶ್ರಮದಲ್ಲಿ ಪ್ರತಿಷ್ಠಿತನಾಗಿರುವ ಯಜ್ಞೇಶ್ವರನ ಧೂಮದ ಅಗ್ರಭಾಗವು ಕಪ್ಪಾದ ಮೋಡದ ಶಿಖರದೋಪಾದಿ ಯಲ್ಲಿ ಕಂಗೊಳಿಸುತ್ತಿದೆ.
ಬ್ರಾಹ್ಮಣರು ಏಕಾಂತದಲ್ಲಿ ರುವ ಮತ್ತು ಪವಿತ್ರವಾದ ತೀರ್ಥಗಳಲ್ಲಿ ಸ್ನಾನ ಮಾಡಿ ತಾವೇ ಬಿಡಿಸಿ ತಂದ ಪುಷ್ಪಗಳಿಂದ ದೇವತೆಗಳಿಗೆ ಪುಷ್ಪಬಲಿಯನ್ನು ಅರ್ಪಿಸುತ್ತಿದ್ದಾರೆ. ಸೌಮ್ಯನೇ ಸುತೀಕ್ಷ್ಣರಿಂದ ನಾನು ಯಾವ ಆಶ್ರಮದ ವರ್ಣನೆಯನ್ನು ಕೇಳಿದ್ದೆನೋ ಅದಕ್ಕೆ ಅನುಗುಣವಾಗಿರುವ ಈ ಆಶ್ರಮವು ನಿಶ್ಚಯ ವಾಗಿಯೂ ಅಗಸ್ತ್ಯರ ತಮ್ಮನ ಆಶ್ರಮವೇ ಆಗಿದೆ. ಈ ಆಶ್ರಮದಲ್ಲಿರುವ ಮುನಿಯ ಅಣ್ಣನವರಾದ ಪುಣ್ಯಕರ್ಮರಾದ ಅಗಸ್ತ್ಯರು ಲೋಕಗಳಿಗೆ ಹಿತವನ್ನುಂಟುಮಾಡುವ ಆಶ್ರಯದಿಂದ ಜನರಿಗೆ ಮೃತ್ಯು ಸ್ವರೂಪವಾಗಿದ್ದ ಇಲ್ವಲ-ವಾತಾಪಿಗಳನ್ನು ನಿಗ್ರಹಿಸಿ ದಕ್ಷಿಣದಿಕ್ಕನ್ನು ವಾಸಯೋಗ್ಯವನ್ನಾಗಿ ಮಾಡಿದರು ಎಂದು ಶ್ರೀರಾಮನು ಲಕ್ಷ್ಮಣನಿಗೆ ಅಗಸ್ತ್ಯರ ಪುಣ್ಯಕಥೆಗಳನ್ನು ಹೇಳುತ್ತಿದ್ದಾಗಲೇ ಸೂರ್ಯನು ಅಸ್ತ ಹೊಂದಿದನು, ಸಂಧ್ಯಾಕಾಲವು ಪ್ರಾಪ್ತವಾಯಿತು. ಶ್ರೀರಾಮನು ತಮ್ಮನೊಡನೆ ಯಥಾವಿಧಿಯಾಗಿ ಸಾಯಂಸಂಧ್ಯೋಪಾಸನೆ ಮಾಡಿ ಅಗಸ್ತ್ಯಭ್ರಾತೃವಿನ ಆಶ್ರಮವನ್ನು ಒಳಹೊಕ್ಕು ಅಲ್ಲಿದ್ದ ಮಹರ್ಷಿಗೆ ಅಭಿವಾದನ ಮಾಡಿದನು. ಅಗಸ್ತ್ಯರ ತಮ್ಮನೂ ಸೀತಾ-ರಾಮ-ಲಕ್ಷ್ಮಣರನ್ನು ಆದರದಿಂದ ಬರಮಾಡಿಕೊಂಡು ಕುಶಲ ಪ್ರಶ್ನೆಗಳನ್ನು ವಿಚಾರಿಸಿದನು. ಬಳಿಕ ಮುನಿಯಿತ್ತ ಫಲ-ಮೂಲಾದಿಗಳನ್ನು ಉಪಭುಂಜಿಸಿ ಸೀತಾ-ರಾಮ-ಲಕ್ಷ್ಮಣರು ಆ ರಾತ್ರಿ ಅಲ್ಲಿಯೇ ತಂಗಿದರು.
ರಾತ್ರಿಯು ಕಳೆದು ಸೂರ್ಯಮಂಡಲವು ಪೂರ್ವದಿಕ್ಕಿನಲ್ಲಿ ಕಾಣಿಸಿಕೊಳ್ಳಲಾಗಿ, ಶ್ರೀರಾಮನು ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ಅಗಸ್ತ್ಯ ಭ್ರಾತೃವಿನ ಬಳಿಕ ತೆರಳಿ ಪ್ರಯಾಣಕ್ಕೆ ಅನುಮತಿಯನ್ನು ಪ್ರಾರ್ಥಿಸಿದನು.
ಅಭಿವಾದಯೇ ತ್ವಾಂ ಭಗವನ್ಸುಖಮಸ್ಮ್ಯುಷಿತೋ ನಿಶಾಮ್ |
ಅಮಸ್ತ್ರಯೇ ತ್ವಾಂ ಗಚ್ಛಾಮಿ ಗುರುಂ ತೇದ್ರಷ್ಟುಮಗ್ರಜಮ್||
‘‘ಪೂಜ್ಯರೇ, ನಿಮಗೆ ಅಭಿವಾದನಮಾಡುತ್ತೇನೆ. ನಾನು ರಾತ್ರಿಯನ್ನಿಲ್ಲಿ ಸುಖವಾಗಿ ಕಳೆದೆನು. ಗುರುಗಳಾದ ಮತ್ತು ನಿಮ್ಮ ಅಗ್ರಜರಾದ ಅಗಸ್ತ್ಯರನ್ನು ಸಂದರ್ಶಿಸಲು ಹೋಗುತ್ತಿದ್ದೇನೆ. ಇದಕ್ಕಾಗಿ ನಿಮ್ಮ ಅನುಮತಿಯನ್ನು ಪ್ರಾರ್ಥಿಸುತ್ತೇನೆ.’’
‘ಗಮ್ಯತಾಂ-ಹೋಗಿ ಬನ್ನಿರಿ’ ಎಂದು ಹೇಳಿ ಅಗಸ್ತ್ಯರ ತಮ್ಮನು ಪ್ರಯಾಣಕ್ಕೆ ಅನುಮತಿಸಿದ ನಂತರ ರಾಮನು ಸುತೀಕ್ಷ್ಣರು ನಿರ್ದೇಶಿಸಿದ್ದ ಮಾರ್ಗದಲ್ಲಿಯೇ ಪ್ರಯಾಣ ಮಾಡುತ್ತಾ ಹಾದಿಯುದ್ಧಕ್ಕೂ ಇದ್ದ ಅರಣ್ಯದ ಸೊಬಗನ್ನು ನೋಡುತ್ತಾ ಆನಂದಿಸುತ್ತಿದ್ದನು. ನಿರವಂಜಮರಗಳನ್ನೂ, ಹಲಸಿನ ಮರಗಳನ್ನೂ, ತಾಳೇಮರಗಳನ್ನೂ, ಅಶೋಕ ವೃಕ್ಷಗಳನ್ನೂ, ನೇಮಿ ಗಿಡಗಳನ್ನೂ, ಹುಲಿಗಲಿ ಮರಗಳನ್ನೂ, ಮಧೂಕವೃಕ್ಷಗಳನ್ನೂ, ಬಿಲ್ವ ವೃಕ್ಷಗಳನ್ನೂ, ಪುಷ್ಪಸಮೃದ್ಧಿಯಿಂದ ಕೂಡಿದ್ದ ತಿಂದುಕವೃಕ್ಷಗಳನ್ನೂ, ತುಡಿಯಲ್ಲಿ ಪುಷ್ಪಗಳನ್ನು ಹೊಂದಿದ್ದ ಲತೆಗಳಿಂದ ಆಲಿಂಗಿಸಲ್ಪಟ್ಟು ಶೋಭಾಯಮಾನವಾಗಿ ಕಾಣುತ್ತಿದ್ದ ಕಾಡು-ಮರಗಳನ್ನೂ ಶ್ರೀರಾಮನು ನೂರಾರು ಸಂಖ್ಯೆಯಲ್ಲಿ ನೋಡಿದನು. ಆನೆಯ ಸೊಂಡಿಲುಗಳಿಂದ ಕೆಡವಲ್ಪಟ್ಟ ವೃಕ್ಷಗಳನ್ನೂ, ಕಪಿಗಳಿಂದ ಆವರಿಸಲ್ಪಟ್ಟು ಶೋಭಾಯಮಾನವಾಗಿ ಕಾಣುತ್ತಿದ್ದ ವೃಕ್ಷ ಗಳನ್ನೂ, ಮದಿಸಿದ ಪಕ್ಷಿಗಳ ಸಮೂಹದಿಂದ ನಿನಾದಿತವಾದ ವೃಕ್ಷಗಳನ್ನೂ, ಶ್ರೀರಾಮನು ನೂರಾರು ಸಂಖ್ಯೆಯಲ್ಲಿ ನೋಡಿ ತನ್ನ ಸಮೀಪದಲ್ಲಿಯೇ ಹಿಂಭಾಗದಲ್ಲಿ ಬರುತ್ತಿದ್ದ ವೀರನಾದ, ತಮ್ಮನಿಗೆ ಹೇಳಿದನು.
‘‘ಇತ್ತ ನೋಡು, ಲಕ್ಷ್ಮಣ ಇಲ್ಲಿರುವ ವೃಕ್ಷಗಳು ನವಿರಾದ ಎಲೆಗಳನ್ನು ಹೊಂದಿವೆ. ಮೃಗ, ಪಕ್ಷಿಗಳೂ ತಾಳ್ಮೆಯಿಂದ ಕುಳಿತಿವೆ. ಆದುದರಿಂದ ಶುದ್ಧಾತ್ಮರಾದ ಅಗಸ್ತ್ಯ ಮಹರ್ಷಿಗಳ ಆಶ್ರಮವು ಹತ್ತಿರದಲ್ಲಿಯೇ ಇರುವದಾಗಿ ನಾನು ಭಾವಿಸುತ್ತೇನೆ ತಮ್ಮ ಅದ್ಭುತವಾದ ಕರ್ಮದಿಂದಲೇ ಅಗಸ್ತ್ಯರೆಂಬ ಅನ್ವರ್ಥನಾಮದಿಂದ ಪ್ರಸಿದ್ಧರಾಗಿರುವ ಬಳಲಿ ಬಂದವರ ಶ್ರಮವನ್ನು ಪರಿಹರಿಸುವ ಮಹರ್ಷಿಗಳ ಆಶ್ರಮವು ಇಲ್ಲಿಯೇ ಕಾಣಿಸುತ್ತಿದೆ.
ಆಧಾರ : ಮೂಲ ಸಂಸ್ಕøತದಲ್ಲಿ ವಾಲ್ಮೀಕಿ ಮಹರ್ಷಿ ರಚಿತ ರಾಮಾಯಣದ ಯಥಾವತ್ ಕನ್ನಡಾನುವಾದ : ಭಾರತ ದರ್ಶನ ಪ್ರಕಾಶನದ ‘ವಾಲ್ಮೀಕಿ ರಾಮಾಯಣ’ ಗ್ರಂಥದ ಸಂಪುಟ 4, ಪ್ರಕಟಣೆ : 1987, ಪಂಡಿತರುಗಳಾದ ಹೆಚ್. ಎನ್. ರಂಗಸ್ವಾಮಿ, ರಾಮೇಶ್ವರಾವಧಾನಿ, ಶ್ರೀಹರಿ, ನೆ.ವೆಂ ಶ್ರೀನಿವಾಸರಾಯ, ಹೆಚ್. ಎನ್. ವರದೇಶಿಕಾ ಚಾರ್ಯರಂಗಪ್ರಿಯ, ವಿ. ಸೂರ್ಯನಾರಾಯಣ್ ಮತ್ತು ವಿಶ್ವಾಮಿತ್ರ ನೇತೃತ್ವದಲ್ಲಿ ಪ್ರಕಟಿತ.