ಕುಶಾಲನಗರ, ಫೆ. 29: ಕುಶಾಲನಗರದಲ್ಲಿ ಮೊಬೈಲ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಟ್ಟಣದಲ್ಲಿ ಕಳೆದ ಕೆಲವು ತಿಂಗಳಿನಿಂದ ಪ್ರಾರಂಭಗೊಂಡ ಮೊಬೈಲ್ ಆಪ್ ಚೈನ್ ಲಿಂಕ್ ದಂಧೆ ವ್ಯಾಪಕವಾಗಿ ಹರಡುವುದರೊಂದಿಗೆ ಇದೀಗ ಹಲವರಿಗೆ ಲಕ್ಷಗಟ್ಟಲೆ ಹಣ ವಂಚಿಸಿದ್ದು ಈ ಬಗ್ಗೆ ಪೊಲೀಸ್ ಪುಕಾರಾಗಿರುವ ಹಿನ್ನಲೆಯಲ್ಲಿ ಹೆಚ್ಚಿನ ವಿಚಾರಣೆ ಪ್ರಾರಂಭಗೊಂಡಿದೆ.(ಮೊದಲ ಪುಟದಿಂದ) ಒಂದು ಲಕ್ಷ ರೂ.ಗಳನ್ನು ಮೊಬೈಲ್ ಆಪ್ ಮೂಲಕ ಹೂಡಿಕೆ ಮಾಡಿದರೆ ಸಾಕು. ಪ್ರತಿ ವಾರ 50 ಸಾವಿರ ಆತನ ಅಕೌಂಟ್ಗೆ ಪಾವತಿಯಾಗುವ ಮೂಲಕ ಈ ದಂಧೆ ಎಲ್ಲೆಡೆ ಹಬ್ಬಿಕೊಂಡಿದ್ದು ರಾಜ್ಯದ ವಿವಿಧ ಮೂಲೆಗಳಿಂದ ಹಲವರು ಲಕ್ಷಗಟ್ಟಲೆ ಹೂಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಸ್ಥಳೀಯ ಕೆಲವು ಉದ್ಯಮಿಗಳ ಮೂಲಕ ಈ ದಂಧೆ ಮನಿಚೈನ್ ಮಾದರಿಯಲ್ಲಿ ನಡೆಯುತ್ತಿದ್ದು ಸ್ಥಳೀಯ ಕೆಲವು ಏಜೆಂಟ್ಗಳು ಈ ದಂಧೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಕಮಿಷನ್ ಆಸೆಗಾಗಿ ಕೆಲವರು ಪರದಾಡುತ್ತಿದ್ದರೆ ದುಪ್ಪಟ್ಟು ಹಣ ಗಳಿಸುವ ಆಸೆಯೊಂದಿಗೆ ಕೆಲವರು ಲಕ್ಷಗಟ್ಟಲೆ ಹಣವನ್ನು ಹೂಡಿರುವ ವಿಷಯ ಬೆಳಕಿಗೆ ಬಂದಿದೆ. ಕೋಟಿಗಟ್ಟಲೆ ಹಣ ಸಂಗ್ರಹವಾದ ಬೆನ್ನಲ್ಲೇ ದಂಧೆ ವಂಚನೆಯಲ್ಲಿ ತೊಡಗಿದ್ದು ಇದೀಗ ಕುಶಾಲನಗರ ಸೇರಿದಂತೆ ನೆರೆಯ ಜಿಲ್ಲೆಗಳ ನೂರಾರು ಗ್ರಾಹಕರು ಲಬೋಲಬೋ ಅನ್ನುವಂತಾಗಿದೆ.
ಮಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ಹಣ ನೀಡದೆ ವಂಚಿಸಿರುವುದಾಗಿ ದೂರು ಕೇಳಿಬಂದಿದ್ದು ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಹೆಚ್ಚಿನ ತನಿಖೆ ಪ್ರಾರಂಭಗೊಂಡಿದೆ. ಕೆಲವು ಮಂದಿ ಮನೆಯನ್ನು ಲೀಸ್ಗೆ ನೀಡಿ ಹಣ ತೊಡಗಿಸಿಕೊಂಡಿದ್ದು ಇದೀಗ ತಲೆಮೇಲೆ ಕೈಹೊತ್ತುಕೊಂಡು ಹಣಕ್ಕಾಗಿ ಪರದಾಡುತ್ತಿರುವ ದೃಶ್ಯ ಗೋಚರಿಸಿದೆ. ಈ ದಂಧೆಯಲ್ಲಿ ಕುಶಾಲನಗರದ ನಾಲ್ವರು ತೊಡಗಿಸಿಕೊಂಡಿದ್ದು ಇದೀಗ ತಲೆಮರೆಸಿಕೊಂಡು ಓಡಾಡುತ್ತಿರುವುದಾಗಿ ಹಣ ಕಳೆದುಕೊಂಡ ವ್ಯಕ್ತಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಹಲವು ಸ್ಕೀಂಗಳ ಮೂಲಕ ಕೋಟಿಗಟ್ಟಲೆ ಹಣ ಸಂಗ್ರಹ ಮಾಡಿ ವಂಚಿಸಿದ ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿರುವ ಬೆನ್ನಲ್ಲೇ ಇದೊಂದು ವಂಚನೆ ದಂಧೆ ಸೇರ್ಪಡೆಗೊಂಡಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎನ್ನಬಹುದು.
ಕುಶಾಲನಗರ, ಸುಂಟಿಕೊಪ್ಪದಲ್ಲಿ ಕೆಲವು ಬಾಂಗ್ಲಾ ದೇಶದ ಕಾರ್ಮಿಕರು ಕೂಡ ಇಂತಹ ವ್ಯಕ್ತಿಗಳ ಮೂಲಕ ಮೊಬೈಲ್ ಆಪ್ ಬಳಸಿ ಕಮಿಷನ್ ನೀಡಿ ತಮ್ಮ ಗಳಿಕೆ ಹಣವನ್ನು ತಮ್ಮ ದೇಶಗಳಿಗೆ ಕಳುಹಿಸುವಂತಹ ನಿಗೂಢ ದಂಧೆ ಕೂಡ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದ್ದು ಉನ್ನತ ಮಟ್ಟದ ತನಿಖೆಯಾದಲ್ಲಿ ಭಾರೀ ಪ್ರಕರಣವೊಂದು ಬೆಳಕಿಗೆ ಬರುವ ಸಾಧ್ಯತೆಯಿದೆ. ವರದಿ: ಚಂದ್ರಮೋಹನ್