ಮಡಿಕೇರಿ, ಫೆ. 28: ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿರುವ ಕಾರಣಕ್ಕಾಗಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಕೈಯಲ್ಲಿ ರಕ್ತ ಒಸರುವಂತೆ ಥಳಿಸಿದ ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿಯ ಶಾಂತಿನಿಕೇತನ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಹಾಗೂ ಥಳಿಸಿದ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ನೋಟೀಸ್‍ನ ವಿವರ ಇಂತಿದೆ.ಶಾಂತಿನಿಕೇತನ ಪ್ರೌಢಶಾಲೆ ಕೊಡಗರಹಳ್ಳಿ ಈ ಶಾಲೆಯಲ್ಲಿ ದಿನಾಂಕ 25.02.2020ರಂದು ಪೂರ್ವ ಸಿದ್ಧತಾ ಪರೀಕ್ಷೆಯ ಸಂಬಂಧ ಕಡಿಮೆ ಅಂಕ ತೆಗೆದಿರುವ ಮಕ್ಕಳಿಗೆ ರಾಜಶೇಖರ್ ಕನ್ನಡ ಶಿಕ್ಷಕರು ದೈಹಿಕ ದಂಡನೆಯ ಮೂಲಕ ಕೈಗಳಿಗೆ ಹೊಡೆದು (ಮೊದಲ ಪುಟದಿಂದ) ತೀವ್ರತರವಾದ ದಂಡನೆಯ ಲಕ್ಷಣಗಳು ಕಂಡು ಬಂದಿದ್ದು, ಈ ಸಂಬಂಧ ಪೋಷಕರ ದೂರಿನಂತೆ ದಿನಾಂಕ 26.02.2020ರಂದು ಮೇಲ್ಕಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ದೈಹಿಕ ಪರಿವೀಕ್ಷಕರು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿರವರು ದಿನಾಂಕ 26.02.2020ರಂದು ಭೇಟಿ ನೀಡಿ ಮಕ್ಕಳನ್ನು ಪರಿಶೀಲಿಸಿದಂತೆ ಸುಮಾರು 10 ರಿಂದ 15 ಮಕ್ಕಳಿಗೆ ಹೊಡೆದಿರುವುದು ಹಾಗೂ ಕೈಗಳು ತೀವ್ರತರವಾಗಿ ಊದಿಕೊಂಡಿರುವುದು ಕಂಡುಬಂದಿದೆ.

ರಾಜಶೇಖರ್‍ಗೆ ಮಕ್ಕಳಿಗೆ ಹೊಡೆಯುವ ಅಧಿಕಾರವನ್ನು ನೀಡಿದವರು ಯಾರು? ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆಯನ್ವಯ ಹಾಗೂ ಮಕ್ಕಳ ಹಕ್ಕು ಕಾಯ್ದೆಯನ್ವಯ ಮಕ್ಕಳಿಗೆ ದೈಹಿಕ ದಂಡನೆ ನೀಡಿರುವುದು ಹಾಗೂ ಉಲ್ಲಂಘಿಸಿರುವುದು ನೇರವಾಗಿ ಕಂಡುಬಂದಿದ್ದು, ಮೇಲ್ಕಂಡ ಶಿಕ್ಷಕರನ್ನು ಪ್ರಶ್ನಿಸಲಾಗಿದೆ.

ಈ ಸಂಬಂಧ ಮುಖ್ಯ ಶಿಕ್ಷಕರನ್ನು ಪ್ರಶ್ನಿಸಿದಾಗ ಮುಖ್ಯ ಶಿಕ್ಷಕರು ಬೇಜವಾಬ್ದಾರಿ ರೀತಿಯಲ್ಲಿ ಈ ಘಟನೆ ನನ್ನ ಗಮನಕ್ಕೆ ಬಂದಿರುವುದಿಲ್ಲ ಎಂದು ಹೇಳಿಕೆ ನೀಡಿರುತ್ತಾರೆ. ದಿನಾಂಕ 25.02.2020 ಮಧ್ಯಾಹ್ನ 2.30ರಲ್ಲಿ ಘಟನೆ ನಡೆದಿದ್ದರೂ ಸಹ ಮುಖ್ಯ ಶಿಕ್ಷಕರಾದವರು ಮಕ್ಕಳ ಚಲನವಲನ, ಶಿಕ್ಷಕರ ಚಲನವಲನ, ಶಾಲೆಯ ಮೇಲ್ವಿಚಾರಣೆ ಸೂಕ್ಷ್ಮತೆಯಿಂದ ಪರಿಶೀಲಿಸಬೇಕಾದವರು ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ಆದರೆ ಇಂತಹ ಘಟನೆಗೆ ಮುಖ್ಯ ಶಿಕ್ಷಕರು ಸಹ ನೇರ ಹೊಣೆಗಾರರಾಗಿರುತ್ತಾರೆ ಎಂಬ ಅಂಶವನ್ನು ಗಮನಕ್ಕೆ ತರಲಾಗಿದೆ.

ಮೇಲ್ಕಂಡ ಘಟನೆಗೆ ಸಂಬಂಧಿಸಿದ ಶಿಕ್ಷಕರು ಹಾಗೂ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರು ಸಹ ಈ ಘಟನೆ ನಡೆದಿರುವುದು ಒಪ್ಪಿಕೊಂಡಿರುತ್ತಾರೆ. ಮೇಲ್ಕಂಡ ಅಂಶಗಳನ್ನು ಅವಲೋಕನಾ ಮಾಡಿದಾಗ ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗೂ ಮಕ್ಕಳ ಕಲಿಕೆಯಲ್ಲಿ ಏರುಪೇರುಗಳಾಗಿರುವದು ಸಹಜ ಕಾರಣ. ಎಲ್ಲಾ ಮಕ್ಕಳು ಒಂದೇ ರೀತಿಯಲ್ಲಿ ಕಲಿಕೆಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಈ ಸಂಬಂಧ ಶಿಕ್ಷಕರುಗಳು ಮಕ್ಕಳ ಮನೋವೈಜ್ಞಾನಿಕವಾಗಿ ಪರಿಶೀಲಿಸಿ ಪರಿವರ್ತನೆ ಮಾಡುವ ಜವಾಬ್ದಾರಿ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರುಗಳ ಮತ್ತು ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ಆದರೆ ಎಲ್ಲಾ ಮಾಧ್ಯಮಗಳಿಗೆ ಮಾಹಿತಿ ತಲುಪಿರುವುದು ಹಾಗೂ ಇಲಾಖೆಯ ಉದ್ದೇಶ ಮತ್ತು ಮಕ್ಕಳ ಕಲಿಕೆಗೆ ಪೂರ್ವಕವಾದಂತಹ ವಾತಾವರಣ ನಿರ್ಮಾಣ ಮಾಡುವಲ್ಲಿ ಶಾಲೆಯು ಇಂತಹ ಘಟನೆಗೆ ಆಸ್ಪದ ನೀಡಿರುವದು ಕಂಡು ಬಂದಿದೆ. ಈ ಸಂಬಂಧ ಸಂಬಂಧಿಸಿದ ಶಿಕ್ಷಕರ ಮೇಲೆ ಕ್ರಮ ವಹಿಸಿ ಹಾಗೂ ಮುಖ್ಯ ಶಿಕ್ಷಕರು ಇದರ ಹೊಣೆಯನ್ನು ಹೊರಬೇಕಾಗಿದೆ. ಈ ಸಂಬಂಧ ಇಲಾಖೆಯ ಚೌಕಟ್ಟಿನೊಳಗೆ ಕ್ರಮವಹಿಸಬೇಕಾಗಿರುವುದರಿಂದ ಈ ನೋಟೀಸ್ ತಲುಪಿದ ಮೂರು ದಿನದೊಳಗೆ ಆಡಳಿತ ಮಂಡಳಿಯು ಲಿಖಿತ ವರದಿಯನ್ನು ಈ ಕಚೇರಿಗೆ ನೀಡಲು ಸೂಚಿಸಿದೆ. ನೋಟೀಸಿನ ಪ್ರತಿಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶರಿಗೆ ಸಲ್ಲಿಸಲಾಗಿದೆ.

ಅಧಿಕಾರಿಗಳ ಭೇಟಿ

ಈ ನಡುವೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪಿ.ಎಸ್. ಮಚ್ಚಾಡೋ ಅವರೂ ಕೂಡ ಶಾಲೆಗೆ ಭೇಟಿ ನೀಡಿ; ಪರಿಶೀಲಿಸಿ, ಮಾಹಿತಿ ಸಂಗ್ರಹ ಮಾಡಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾದ ರವೀಂದ್ರ, ಪದಾಧಿಕಾರಿಗಳಾದ ಮಂಜುನಾಥ್ ಹಾಗೂ ಸ್ವಾತಿ ಅವರುಗಳೂ ಕೂಡ ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಅಲ್ಲದೆ, ಈ ಬಗ್ಗೆ ಸೂಕ್ತ ವಿವರಣೆ ನೀಡುವಂತೆ ಅಧ್ಯಕ್ಷ ರವೀಂದ್ರ ಅವರು ಮುಖ್ಯೋಪಾಧ್ಯಾಯರಿಗೆ ನೋಟೀಸ್ ನೀಡಿದ್ದಾರೆ.