ಶ್ರೀಮಂಗಲ, ಫೆ. 28 : ದಕ್ಷಿಣ ಕೊಡಗಿನಲ್ಲಿ ಕಾಣಿಸಿಕೊಂಡಿರುವ ಹುಲಿ ಹಾವಳಿ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ಸರಕಾರದಿಂದ ಅಧಿಕೃತ ಅನುಮತಿ ಪತ್ರ ಬಂದಿರುವ ಬೆನ್ನಲ್ಲೇ ಅರಣ್ಯ ಇಲಾಖೆ ಸಕಲ ಸಿದ್ಧತೆಯೊಂದಿಗೆ ಕಾರ್ಯಾಚರಣೆಗೆ ಇಳಿದಿದೆ. ಕಾರ್ಯಾಚರಣೆ ಆರಂಭಿಸಿದ ನಾಲ್ಕನೇ ದಿನದಲ್ಲಿ ನಾಗರಹೊಳೆ ಅರಣ್ಯದ ಸಮೀಪದ ಗ್ರಾಮ ನಾಲ್ಕೇರಿಯಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ.

ದಕ್ಷಿಣ ಕೊಡಗಿನಲ್ಲಿ ಇತ್ತೀಚೆಗೆ ಟಿ. ಶೆಟ್ಟಿಗೇರಿ, ನಾಲ್ಕೇರಿ, ಬೆಳ್ಳೂರು, ಹರಿಹರದಲ್ಲಿ ಹುಲಿ ಹಾವಳಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸಿದ ಸ್ಥಳಗಳಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಡಿಜಿಟಲ್ ಕ್ಯಾಮರಾಕ್ಕೆ ಹುಲಿಯ ಚಿತ್ರ ಸೆರೆಯಾಗಿತ್ತು. ಇದಲ್ಲದೆ (ಮೊದಲ ಪುಟದಿಂದ) ಈ ಹಿಂದೆ ದಕ್ಷಿಣ ಕೊಡಗಿನ ಕೆಲವು ಗ್ರಾಮಗಳಲ್ಲಿ ಹುಲಿ ದಾಳಿಗೆ ತುತ್ತಾಗಿ ಜಾನುವಾರು ಬಲಿಯಾಗಿದ್ದ ಸ್ಥಳಗಳಲ್ಲಿ ಇರಿಸಿದ್ದ ಕ್ಯಾಮರಾಕ್ಕೆ ಹುಲಿ ಟ್ರ್ಯಾಪ್ ಆಗಿತ್ತು. ಜಾನುವಾರುಗಳ ಮೇಲೆ ದಾಳಿ ಮಾಡಿರುವ ಹಲವು ಪ್ರಕರಣದಲ್ಲಿ ಹುಲಿಯ ಬಲ ಭಾಗದ ಕೆಳಗಡೆಯ ಹಲ್ಲಿನ ಗುರುತು ಆಳವಾಗಿ ಬೀಳದೆ ಇರುವುದರಿಂದ (ಜಾನುವಾರುಗಳ ಮೇಲೆ ಆಗಿರುವ ಗಾಯ ಪರಿಗಣಿಸಿ) ಒಂದೇ ಹುಲಿ ಈ ವ್ಯಾಪ್ತಿಯಲ್ಲಿ ಹಾವಳಿ ನಡೆಸುತ್ತಿರುವ ಬಗ್ಗೆ ಅರಣ್ಯ ಇಲಾಖೆ ಖಚಿತ ಪಡಿಸಿದೆ.

ಕಾರ್ಯಾಚರಣೆಯ ಸಂಜೆಯ ವೇಳೆಗೆ ದೊರೆತ ಮಾಹಿತಿಯಂತೆ ನಾಗರಹೊಳೆ ಅರಣ್ಯ ಸಮೀಪದ ಗ್ರಾಮ ನಾಲ್ಕೇರಿಯಲ್ಲಿ ಹುಲಿ ಹೆಜ್ಜೆಯ ಗುರುತು ಕೂಂಬಿಂಗ್ ವೇಳೆ ಪತ್ತೆಯಾಗಿದೆ. ನಾಗರಹೊಳೆ ಅರಣ್ಯದಿಂದ ಕೇವಲ 500 ಮೀ ದೂರದಲ್ಲಿ ಹೆಜ್ಜೆ ಪತ್ತೆಯಾಗಿದ್ದು ಹುಲಿ ಅರಣ್ಯದ ಕಡೆಗೆ ತೆರಳಿರುವ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.