ಸೋಮವಾರಪೇಟೆ, ಫೆ. 29: ಸರ್ಕಾರದಿಂದ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿರುವ ಸಂದರ್ಭ ಗ್ರಾಮಸ್ಥರೇ ಸ್ವತಃ ಸ್ಥಳದಲ್ಲಿ ನಿಂತು ಕಾಮಗಾರಿಯ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಸಮೀಪದ ಹಾನಗಲ್ಲು, ಚೌಡ್ಲು, ಬೇಳೂರು, ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ರೂ. 2.43 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರದ ವತಿಯಿಂದ ಕೈಗೊಳ್ಳಲಾಗುವ ಕಾಮಗಾರಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವದು ಹಾಗೂ ಕಾಮಗಾರಿಯ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಖುದ್ದು ಎಲ್ಲಾ ರಸ್ತೆಗಳಿಗೂ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದ್ದು, ಸ್ಥಳೀಯರು ಗುಣಮಟ್ಟದ ಕಾಮಗಾರಿ ಆಗುವಂತೆ ನೋಡಿಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರದಿಂದ ಘೋಷಣೆಯಾದ ವಿಶೇಷ ಪ್ಯಾಕೇಜ್ನಲ್ಲಿ 336 ಕೋಟಿ ಅನುದಾನ ಬರಲು ಬಾಕಿಯಿದ್ದು, ಆ ಅನುದಾನ ಬಂದ ನಂತರ ಮತ್ತೊಮ್ಮೆ ಉಳಿಕೆಯಾಗಿರುವ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವದು. ಪ್ರತಿ ಗ್ರಾ.ಪಂ.ಗಳಿಗೆ 1 ರಿಂದ ಒಂದೂವರೆ ಕೋಟಿಯನ್ನು ಅನುದಾನ ಬಿಡುಗಡೆ ಮಾಡಲಾಗುವದು ಎಂದು ರಂಜನ್ ತಿಳಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯೆ ಹೆಚ್.ಎನ್. ತಂಗಮ್ಮ, ಗ್ರಾ.ಪಂ. ಸದಸ್ಯರಾದ ಪ್ರಕಾಶ್ ಸೇರಿದಂತೆ ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಜಗದೀಶ್, ರಮೇಶ್, ಪೆಮ್ಮಯ್ಯ, ಮಲ್ಲೇಶ್, ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.