ಮಡಿಕೇರಿ ಫೆ. 29: ಕೊಡಗು ಜಿಲ್ಲೆಯಿಂದ ಶಾಸಕರುಗಳಾಗಿ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಸತತವಾಗಿ ಆಯ್ಕೆಗೊಂಡಿದ್ದು, ಅವರುಗಳಿಗೆ ತಮ್ಮ ಸಂಪುಟದಲ್ಲಿ ಮಂತ್ರಿ ಸ್ಥಾನ ಕಲ್ಪಿಸಬೇಕೆಂದು ಕೊಡಗು ಸಾರ್ವಜನಿಕ ಹಿತರಕ್ಷಣಾ ಸಮಿತಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿದೆ. ಈ ಸಂಬಂಧ ಲಿಖಿತ ಪತ್ರದೊಂದಿಗೆ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಗಮನ ಸೆಳೆದಿದ್ದಾರೆ.
ಅಲ್ಲದೆ ರಾಜ್ಯ ಸಾರಿಗೆ ಸಚಿವರಿಗೆ ಪ್ರತ್ಯೇಕ ಪತ್ರವನ್ನು ರವಾನಿಸಿರುವ ಅವರು, ಜಿಲ್ಲೆಯಲ್ಲಿ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳು ಖಾಲಿಯಿದ್ದು, ಈ ಕೂಡಲೇ ನೇಮಕಾತಿಯೊಂದಿಗೆ ವಾಹನ ಮಾಲೀಕರು ಅನುಭವಿಸುತ್ತಿರುವ ತೊಂದರೆ ನಿವಾರಿಸುವಂತೆ ಒತ್ತಾಯಿಸಿದ್ದಾರೆ.
ಪಿಕ್ಅಪ್ ಬಳಕೆಗೆ ಒತ್ತಡ: ಅಂತೆಯೇ ಜಿಲ್ಲೆಯ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸುತ್ತಿರುವ ಪಿಕ್ಅಪ್ ವಾಹನಗಳಿಗೆ ಹಳದಿ ಫಲಕದ ನಂಬರ್ ಬದಲಿಗೆ ಬಿಳಿ ಫಲಕದೊಂದಿಗೆ ಬಳಸಿಕೊಳ್ಳಲು ಅಡ್ಡಿಪಡಿಸಿದೆ. ಸರಕಾರ ಕೃಷಿಕರ ರಕ್ಷಣೆಗೆ ಮುಂದಾಗುವ ದಿಸೆಯಲ್ಲಿ ಅಧಿಕಾರಿಗಳು ಕಿರುಕುಳ ನೀಡದಂತೆ ನಿರ್ದೇಶಿಸುವಂತೆ ಒತ್ತಾಯಿಸಿದ್ದಾರೆ.
ಭತ್ತ ಖರೀದಿಗೆ ಸಲಹೆ: ಕೊಡಗು ಜಿಲ್ಲೆಯಲ್ಲಿ ಭೂದಾಖಲೆ ಗೊಂದಲ ಸರಿಪಡಿಸಿ, ರೈತರು ಬೆಳೆಯುವ ಭತ್ತವನ್ನು ಜನವರಿಯಿಂದಲೇ ಕೃಷಿ ಇಲಾಖೆ ಮೂಲಕ ಖರೀದಿಸಲು ಸೂಕ್ತ ಕ್ರಮ ವಹಿಸುವಂತೆಯೂ ಅವರು ಕಂದಾಯ ಸಚಿವರಿಗೆ ಮನವಿಯೊಂದಿಗೆ ಗಮನ ಸೆಳೆದಿದ್ದಾರೆ.