ನಾಪೋಕ್ಲು, ಫೆ. 29: ಕೊಡವ ಜನಾಂಗದ ಹಿತರಕ್ಷಣೆಗಾಗಿ ಸಮುದಾಯದ ವಿದ್ಯಾರ್ಥಿಗಳು ಸಂಘಟಿತರಾಗಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಮಾಣಿಪಂಡ ಸಂತೋಷ್ ತಮ್ಮಯ್ಯ ಕರೆ ನೀಡಿದರು.

ಮಂಗಳೂರಿನ ಸೈಂಟ್ ಅಲೋಷಿಯಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿಯ ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್‍ನ ವಾರ್ಷಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ವಿದ್ಯಾರ್ಥಿಗಳು ಉತ್ತಮ ಬದುಕಿಗಾಗಿ ಹಿರಿಯರ ಮಾರ್ಗದರ್ಶನದಿಂದ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು. ಕೊಡವ ಸಮಾಜದ ಯುವ ಘಟಕದ ಅಧ್ಯಕ್ಷ ಜೋಕಂಡ ಸೂರಜ್ ಮಾತನಾಡಿ ಕೊಡವ ಸಮುದಾಯ ಶ್ರೀಮಂತ ಸಂಸ್ಕøತಿ ಹಾಗೂ ಸಂಪ್ರದಾಯಗಳನ್ನು ಹೊಂದಿದೆ ಎಂದರು.

ವಿವಿಧ ಕಾರ್ಯಕ್ರಮಗಳ ಸಂದರ್ಭ ನಡೆಸಲಾಗುವ ಕೊಡವ ಸಂಸ್ಕøತಿ ಮತ್ತು ಧಾರ್ಮಿಕ ಆಚರಣೆಗಳ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಕೆ.ಎಸ್.ಎ ಅಧ್ಯಕ್ಷ ಕೇಟೋಳಿರ ವಿಕಾಸ್ ತಿಮ್ಮಯ್ಯ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಮನೋಜ್ ಮೇದಪ್ಪ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಮುಕ್ಕಾಟಿರ ಅಯ್ಯಪ್ಪ ಮತ್ತು ಕೀತಿಯಂಡ ಲಿಯ ಕಾರ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚೆಪ್ಪುಡಿರ ನಿತಿನ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಕುಟ್ಟಂಜೆಟ್ಟೀರ ದಿಯ ವಂದಿಸಿದರು. ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭ ಗೌರವಿಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಕೊಡವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.