ಮಡಿಕೇರಿ, ಫೆ. 28: ರಾತ್ರಿ ಮನೆಯಲ್ಲಿ ಸಂಭವಿಸುವ ಮನೆಗಳ್ಳತನ ಇತ್ಯಾದಿ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಉದ್ದೇಶದಿಂದ ‘ಸುಬಾಹು- ಇ ಬೀಟ್’ ವ್ಯವಸ್ಥೆಯನ್ನು ಕೊಡಗಿನ 16 ಪೊಲೀಸ್ ಠಾಣೆಯಲ್ಲಿ ಅನುಷ್ಠಾನ ಗೊಳಿಸಲಾಗಿದೆ ಎಂಬದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಪ್ರಕಟಿಸಿದರು. ಕೊಡಗು ಪೊಲೀಸ್ ಕೇಂದ್ರದ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ಸುಬಾಹು- ಇ ಬೀಟ್’ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು.ಈ ತನಕ ಪೊಲೀಸ್ ಸಿಬ್ಬಂದಿಗಳಿಗೆ ನೀಡಲಾಗುವ ರಾತ್ರಿ ಶಿಸ್ತು ಸಂದರ್ಭ ನಿಗದಿತ ಸ್ಥಳಗಳಲ್ಲಿ ಇಲಾಖೆಯು ಪುಸ್ತಕವೊಂದನ್ನು ಅಳವಡಿಸಿ ಅದರಲ್ಲಿ ಸಿಬ್ಬಂದಿ ಸಹಿ ಹಾಕುವ ಕ್ರಮವಿತ್ತು.ಸುಬಾಹು-ಇ ಬೀಟ್ ಯೋಜನೆ ಯಿಂದ ಸಂಬಂಧಿಸಿದ ಸಿಬ್ಬಂದಿ ಅಥವಾ ಅಧಿಕಾರಿ ನಿಗದಿತ ಸ್ಥಳಕ್ಕೆ ತೆರಳುವ ಸಂದರ್ಭ ತಮ್ಮ ‘ಸ್ಮಾರ್ಟ್ ಫೋನ್ ‘ ಮೂಲಕ ಅಂತರ್ಜಾಲ ವ್ಯವಸ್ಥೆಯಡಿ ಎಲ್ಲವನ್ನು ನಮೂದಿಸಿ ಕೊಳ್ಳಲು ಅವಕಾಶ ವಾಗಲಿದೆ ಎಂದು ಎಸ್ಪಿ ಹೊಸ ಯೋಜನೆಯ ವಿವರ ನೀಡಿದರು.
ಬೆಂಗಳೂರು ಮೂಲದ “ಸ್ಮಾರ್ಟ್ ಸೆಕ್ಯೂರ್” ಸಂಸ್ಥೆ ಅನುಷ್ಠಾನ ಗೊಳಿಸಿರುವ ಈ ಬೀಟ್ ವ್ಯವಸ್ಥೆಗೆ ಹಿಂದಿನ ಗೃಹ ಸಚಿವ ಎಂ.ಬಿ. ಪಾಟೀಲ್ ವಿಜಯಪುರದಲ್ಲಿ ಚಾಲನೆ ನೀಡಿದ್ದು ಈಗಾಗಲೇ ಶನಿವಾರಸಂತೆ ಹಾಗೂ ಗೋಣಿಕೊಪ್ಪಲುವಿನಲ್ಲಿ ಪ್ರಯೋಗಿಕವಾಗಿ (ಮೊದಲ ಪುಟದಿಂದ) ಜಾರಿಗೊಳಿಸಿದ್ದು ಇನ್ನು ಮುಂದೆ ಜಿಲ್ಲೆಯ ಎಲ್ಲ 16 ಠಾಣಾ ವ್ಯಾಪ್ತಿಗೂ ವಿಸ್ತರಿಸಲಾಗುವದು ಎಂದು ಡಾ. ಸುಮನ್ ತಿಳಿಸಿದರು.ಜಿಲ್ಲೆಯ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಸುಬಾಹು-ಇ ಬೀಟ್ ವ್ಯವಸ್ಥೆಯಿಂದ ಅಪರಾಧಗಳ ತಡೆಗೆ ಸಹಕಾರ ನೀಡುವಂತೆಯೂ ಅವರು ಕರೆ ನೀಡಿದರು.
ಇಲಾಖೆಗೆ ಮಾಹಿತಿ: ಕೊಡಗಿನ ವರ್ತಕರು ಹಾಗೂ ಮನೆ ಮಾಲೀಕರು ತಾವು ಪರ ಊರಿಗೆ ತೆರಳುವ ವೇಳೆ ಸುಬಾಹು ಶಿಸ್ತು ವ್ಯವಸ್ಥೆಯಡಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರೆ ಗಸ್ತು ಸಿಬ್ಬಂದಿ ಅಂಥ ಉದ್ಯಮ ಹಾಗೂ ಮನೆಗಳ ಮೇಲೆ ನಿಗಾವಹಿಸುವದರೊಂದಿಗೆ ಕಳ್ಳತನಗಳನ್ನು ತಪ್ಪಿಸಲು ಸಹಕಾರಿಯಾಗುತ್ತಾರೆ ಎಂದು ಅವರು ನೆನಪಿಸಿದರು.
ಸಂಬಂಧಿಸಿದ ವ್ಯವಸ್ಥೆ ಬಗ್ಗೆ ಏಜೆನ್ಸಿ ಪ್ರತಿನಿಧಿ ಮಹೇಂದ್ರ ಕುಮಾರ್ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಬಿ.ಪಿ. ದಿನೇಶ್‍ಕುಮಾರ್ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ಅಪರಾಧ ಪತ್ತೆಗಳ ಇನ್ಸ್‍ಪೆಕ್ಟರ್ ಜಯರಾಂ ಕಾರ್ಯಕ್ರಮ ನಿರೂಪಿಸಿದರು. ವೀರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಜಯಕುಮಾರ್ ಇನ್ಸ್‍ಪೆಕ್ಟರ್‍ಗಳಾದ ಅನೂಪ್ ಮಾದಪ್ಪ, ಕ್ಯಾತೇಗೌಡ, ಮಹೇಶ್, ಮೇದಪ್ಪ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ನಿರೀಕ್ಷಕರು ಠಾಣಾಧಿಕಾರಿಗಳು ಪಾಲ್ಗೊಂಡಿದ್ದರು. ಮಹಿಳಾ ಠಾಣೆಯ ನಿರೀಕ್ಷಕ ಸೋಮೇಗೌಡ ವಂದಿಸಿದರು.