ಮಡಿಕೇರಿ, ಫೆ. 28: ಕಳೆದ ವರ್ಷ ಏಪ್ರಿಲ್ 10 ರಂದು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಗುರುತಿಸಲ್ಪಟ್ಟಿದ್ದ 314 ಸಿಲ್ವರ್ ಮರಗಳನ್ನು ಬಹಿರಂಗ ಟೆಂಡರ್ ಮೂಲಕ ಶಂಷುದ್ದೀನ್ ಎಂಬವರಿಗೆ ನೀಡಲಾಗಿದೆ ಎಂದು ತಾ.28 ರಂದು ‘ಶಕ್ತಿ’ಯಲ್ಲಿ ಬಂದ ವರದಿಗೆ ಉಪನಿರ್ದೇಶಕ ಪಿ. ಶಿವಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಮಳೆಗಾಲದಲ್ಲಿ ಕೊಡಗು ಜಿಲ್ಲಾಧಿಕಾರಿಗಳು ಸಿಲ್ವರ್ ಮರ ಸಾಗಾಟಕ್ಕೆ ಮೂರು ತಿಂಗಳು ನಿರ್ಬಂಧ ವಿಧಿಸಿದ್ದರಿಂದ ಈಗ ಮರಗಳನ್ನು ಕಡಿಯಲಾಗಿದೆ ಎಂದು ಅವರು ಸಮಜಾಯಿಷಿಕೆ ನೀಡಿದ್ದಾರೆ.ಪ್ರಸ್ತುತ 288 ಮರಗಳನ್ನು ಈ ತನಕ ಕಡಿಯಲಾಗಿದ್ದು; 264 ಮರಗಳ ಸಾಗಾಟದೊಂದಿಗೆ; ಉಳಿದಿರುವ 24 ಮರಗಳನ್ನು (ಮೊದಲ ಪುಟದಿಂದ) ಮಾತ್ರ ಸಾಗಿಸಲು ಬಾಕಿ ಇರುವದಾಗಿ ಈ ಅಧಿಕಾರಿ ಸಮರ್ಥಿಸಿಕೊಂಡಿದ್ದಾರೆ. ಕಡಿದ ಮರಗಳಿಗೆ ವ್ಯಾಪಾರಿಯಿಂದ ರೂ. 67 ಲಕ್ಷ ಪಾವತಿಸಿದ್ದು; 141 ಅಟ್ಟಿಯಷ್ಟು ಸೌಧೆಗೆ ರೂ. 57810 ಹಾಗೂ ಪಾನುವಾಳ (ಪೊಂಗರೆ) ಮರದ ಬಾಬ್ತು ರೂ. 83,292 ಮೊತ್ತವನ್ನು ಕಾಫಿ ಕೇಂದ್ರಕ್ಕೆ ಪಾವತಿಸಿದ್ದಾರೆ ಎಂದು ಶಿವಪ್ರಸಾದ್ ವಿವರಿಸಿದ್ದಾರೆ.ಆರೋಪಕ್ಕೆ ನಿರುತ್ತರ : ಕಳೆದ ವರ್ಷದ ಟೆಂಡರ್ ವೇಳೆಯಲ್ಲೆ 300ಕ್ಕೂ ಅಧಿಕ ಮರಗಳನ್ನು ಕಾಫಿ ಸಂಶೋಧನಾ ಕೇಂದ್ರದಿಂದ ಕಡಿದು ಸಾಗಾಟಗೊಳಿಸುವದರೊಂದಿಗೆ; ಈಗ 400ಕ್ಕೂ ಅಧಿಕ ಮರಗಳನ್ನು ಯಾವದೇ ಟೆಂಡರ್ ಕರೆಯದೆ ನಿಯಮ ಬಾಹಿರವಾಗಿ ಕಡಿಯಲಾಗಿದೆ ಎಂಬ ಆರೋಪಕ್ಕೆ ಅವರು ನಿರುತ್ತರದೊಂದಿಗೆ ವಿಚಲಿತರಾದಂತೆ ಕಂಡು ಬಂದರು.ಅಲ್ಲದೆ ನಿಗದಿತವಾಗಿ ಯಾರಿಗೆ ಟೆಂಡರ್ ನೀಡಲಾಗಿದೆ; ಎಷ್ಟು ಮೊತ್ತಕ್ಕೆ ಹಾಗೂ ಇದುವರೆಗೆ ಕಡಿದಿರುವ ಮರಗಳ ನಿರ್ದಿಷ್ಟ ಮೌಲ್ಯವೆಷ್ಟು ಎನ್ನುವ ಬಗ್ಗೆಯೂ ಅವರು; ದಾಖಲೆಗಳಲ್ಲಿ ವಿವರ ಇರುವದಾಗಿ ಅಸಹಾಯಕತೆ ತೋಡಿಕೊಂಡರು. ಅಲ್ಲದೆ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪ ಕೇಂದ್ರದಲ್ಲಿ 3 ಸಾವಿರಕ್ಕೂ ಅಧಿಕ ಬಲಿತ ಸಿಲ್ವರ್ ಮರಗಳಿದ್ದು; ಮಳೆಗಾಲ ರಸ್ತೆ ಬದಿ ಬೀಳುವ ಹಂತದಲ್ಲಿರುವ ಮರಗಳನ್ನಷ್ಟೇ ಕಡಿಯಲಾಗಿದೆ ಎಂದು ಮಾರ್ನುಡಿದರು. ಆದರೆ ಸಾರ್ವಜನಿಕರು ಆರೋಪಿಸಿರುವಂತೆ ಕಾಫಿ ತೋಟದ ನಡುವೆ ಅಲ್ಲಲ್ಲಿ ಭಾರೀ ಮರಗಳನ್ನು ಕಡಿದು ದಾಸ್ತಾನುಗೊಂಡಿರುವ ಬಗ್ಗೆ ಪ್ರಸ್ತಾಪಿಸಿದಾಗ; ಎಲ್ಲವೂ ಸೇರಿ ಕೇವಲ 288 ಮರಗಳನ್ನು ಕಡಿಯಲಾಗಿದೆ ಎಂದು ಅಂಕಿ ಅಂಶ ನೀಡಿದರು.

ನಾಗರಿಕರ ಆಕ್ರೋಶ : ಅಧಿಕಾರಿಯ ಈ ಸಮಜಾಯಿಷಿಕೆ ಕುರಿತು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿರುವ ಚೆಟ್ಟಳ್ಳಿ ನಾಗರಿಕರು ಕಡಿದಿರುವ ಮರಗಳ ಗಣತಿಗೆ ಆಗ್ರಹಿಸಿದ್ದಾರೆ.