ಸುಂಟಿಕೊಪ್ಪ, ಫೆ. 27: ಐಗೂರು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಕಾಜೂರು ಸರಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಹಾಸನದ ಶ್ರೀ ಮಂಜುನಾಥ ಯುವಕ ಸಂಘ ಪ್ರಥಮ ಸ್ಥಾನ ಪಡೆÀದು ಕೊಂಡಿದೆ. ದ್ವಿತೀಯ ಸ್ಥಾನ ಐಗೂರು ಬಜರಂಗ ದಳ ತಂಡದ ಪಾಲಾಗಿದೆ.

ಶಿವರಾತ್ರಿ ಅಂಗವಾಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಜಿಲ್ಲಾ ವಿಹೆಚ್‍ಪಿ ಕಾರ್ಯದರ್ಶಿ ಡಿ. ನರಸಿಂಹ ಉದ್ಘಾಟಿಸಿದರು. ರಾತ್ರಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ತಾಲೂಕು ಪಂಚಾಯಿತಿ ಸದಸ್ಯೆ ಸಬಿತಾ ಚೆನ್ನಕೇಶವ, ಉದ್ಯಮಿ ಡಿ.ಪಿ. ನಾಗರಾಜು ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಐಗೂರು ಬಜರಂಗದಳದ ಅಧ್ಯಕ್ಷ ಭರತ್ ವಹಿಸಿದ್ದರು. ವಿ.ಎಂ. ವಿಜಯ ಮಾತನಾಡಿ, ಗ್ರಾಮೀಣ ಪದೇಶದಲ್ಲಿ ಇಂತಹ ಕ್ರೀಡಾಕೂಟ ನಡೆಸುವುದರಿಂದ ಎಲೆಮರೆಕಾಯಿಯಂತಿರುವ ಕ್ರೀಡಾಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗಲಿದೆ ಎಂದರು.

ವೇದಿಕೆಯಲ್ಲಿ ಐಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎ. ಪ್ರಭಾಕರ್, ವಿಹೆಚ್‍ಪಿ ಅಧ್ಯಕ್ಷ ಕೆ.ಜಿ. ಸತೀಶ್, ಕರವೇ ಅಧ್ಯಕ್ಷ ಕೆ.ಎಸ್. ದೀಪಕ್ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಯತೀಶ್ ರೈ, ಅಶ್ವತ್ ಉಪಸ್ಥಿತರಿದ್ದರು.