8 ಡಿಗ್ರಿ ಸೆಲ್ಶಿಯಸ್ ತಾಪಮಾನ, ಮಂಜುಗಡ್ಡೆಯಷ್ಟೇ ತಣ್ಣಗಿರುವ ನೀರು, ಪರ್ವತದ ಹಿಮ ಕರಗಿ ನದಿಯ ರೂಪದಲ್ಲಿ ಹರಿಯುತ್ತಿರುವ ದೃಶ್ಯ, ಅಕ್ಕಪಕ್ಕದಲ್ಲಿ ಚಾರಣಿಗರು ತಿಂಡಿ-ಕಾಫಿ ಸೇವಿಸುತ್ತಾ ಬ್ಯಾಗ್‍ಗಳನ್ನು ಪ್ಯಾಕ್ ಮಾಡುತ್ತಾ ಚಾರಣಕ್ಕೆ ತಯಾರಾಗುತ್ತಿರುವದು, ದೂರದಲ್ಲಿ ಸೂರ್ಯನ ಕಿರಣಗಳಿಂದ ಪ್ರಕಾಶಿಸುತ್ತಿರುವ ದೈತ್ಯರೂಪದ ಹಿಮದಿಂದ ಕೂಡಿದ ಪಾರ್ವತಿ ಬೆಟ್ಟ. ಇದು ಹಿಮಾಚಲ ಪ್ರದೇಶದ ಕಸೋಲ್ ಎಂಬ ಸ್ಥಳದಲ್ಲಿ ವೈ.ಹೆಚ್.ಎ.ಐ (ಭಾರತ ಯುವಕ ಹಾಸ್ಟೆಲ್ ಸಂಘ) ಏರ್ಪಡಿಸಿದ್ದ ಚಾರಣದ ಬೇಸಿಗೆಯ ಶಿಬಿರದ ಒಂದು ದೃಶ್ಯ. ಹಿಮಾಚಲಿನ್ ಪ್ರಮುಖ ಪ್ರವಾಸಿ ತಾಣವಾದ ಮನಾಲಿಯಿಂದ ಸಮಾರು 75 ಕಿ.ಮೀ ದೂರದಲ್ಲಿರುವ ಸುಂದರವಾದ ನೈಸರ್ಗಿಕ ದೃಶ್ಯಾವಳಿಗಳುಳ್ಳ ಸಣ್ಣದಾದ ಒಂದು ಊರು ಕಸೋಲ್. ಇಲ್ಲಿಗೆ ನಾನು ಹಾಗೂ ನನ್ನ ಗೆಳೆಯ ವೈ.ಹೆಚ್.ಎ.ಐ ಏರ್ಪಡಿಸಿದ್ದ ‘ಸರ್ಪಾಸ್ ಟ್ರೆಕ್’ ಎಂಬ ಚಾರಣಕ್ಕೆ ತೆರಳಿದ್ದೆವು. ಕಸೋಲ್ ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರದಲ್ಲಿದ್ದು, ಇದು ನಮ್ಮ ಬೇಸ್ ಕ್ಯಾಂಪ್ ಆಗಿತ್ತು. ಇಲ್ಲಿ ವೈ.ಹೆಚ್.ಎ.ಐ ಸಂಘದ ಅನೇಕ ಸದಸ್ಯರು ಹಾಗೂ ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಾರೆ.
ಕಸೋಲ್‍ನಲ್ಲಿ ಪ್ರತಿ ವರ್ಷ ಈ ಚಾರಣವು ನಡೆಯುತ್ತಿದ್ದು, ಮೇ. ತಿಂಗಳಲ್ಲಿ ಶುರುವಾಗುವ ಶಿಬಿರ ಜೂನ್ ಮಧ್ಯಭಾಗದವರೆಗೆ ನಡೆಯುತ್ತದೆ, ಪ್ರತಿ ಗುಂಪಿನಲ್ಲಿ ಸುಮಾರು 50-70 ಚಾರಣಿಗರು 9 ದಿನಗಳ ಕಾಲ ಭಾಗವಹಿಸುತ್ತಾರೆ. ನಮ್ಮ ಗುಂಪಿನ ಚಾರಣವು 2019 ಮೇ. 12 ರಿಂದ 20 ರವರೆಗೆ ಏರ್ಪಡಿಸಲಾಗಿತ್ತು. ಈ 9 ದಿನಗಳಲ್ಲಿ 5,000 ಅಡಿ ಎತ್ತರದಿಂದ 13,800 ಅಡಿ ಎತ್ತರದ ‘ತಿಲಾ ಲೋಟನಿ’ ಎಂಬ ಪರ್ವತಕ್ಕೆ ನಾವು ಏರಬೇಕಿತ್ತು. ಬೇಸ್ ಕ್ಯಾಂಪಿನಲ್ಲಿ ಯಾವಾಗಲೂ 3 ಗುಂಪಿನವರು ಇರುತ್ತಾರೆ.
ಮೇ 11 : ‘ಹಾಟ್ ವಾಟರ್ ಸ್ಪ್ರಿಂಗ್’ ಕೊಳದಲ್ಲಿ ಸ್ನಾನ: ಮೇ 11 ರಂದು ನಾವು ಇಲ್ಲಿಗೆ ತಲುಪಿದೆವು. ಅಂದು ಯಾವದೇ ಚಟುವಟಿಕೆಗಳು ಇಲ್ಲದ ಕಾರಣ ಕಸೋಲ್‍ನ ಸುತ್ತಮುತ್ತ ತಿರುಗಾಡಲು ಅವಕಾಶವಿತ್ತು. ನಮಗೆ ನೀಡಲಾಗಿದ್ದ ಟೆಂಟ್‍ನಲ್ಲಿ ನಮ್ಮ ಬ್ಯಾಗ್‍ಗಳನ್ನು ಇಟ್ಟು ಹೊರಗೆ ಹೊರಡುವ ಸಮಯ ಯಾರೋ ಬೆಂಗಳೂರಿನ ಚಾರಣಿಗ ಡಾಕ್ಟರ್ ತಮ್ಮ ಪರಿಚಯ ಮಾಡಿಕೊಂಡರು. ನಾವು ಅವರೊಡನೆಯೆ ಸಮೀಪದ ಮನೀಕರಣ್ ಎಂಬ ಸ್ಥಳದಲ್ಲಿರುವ ಗುರುದ್ವಾರಕ್ಕೆ ತೆರಳಿದೆವು. ಇಲ್ಲಿಗೆ ರಸ್ತೆಯ ಮೂಲಕ 4 ಕಿ.ಮೀ ನಡೆಯುವಷ್ಟರಲ್ಲೆ ಬೆಟ್ಟ ಗುಡ್ಡಗಳ ಸೌಂದರ್ಯ, ದೂರದಲ್ಲಿ ಹರಿಯುವ ನದಿಯ ಕಲರವ ನಮ್ಮ ಮನಸೆಳೆದವು. ಗುರುದ್ವಾರದಲ್ಲಿ ‘ಹಾಟ್ ವಾಟರ್ ಸ್ಪ್ರಿಂಗ್’ ಗಳಿಂದ ಬರುವ ನೈಸರ್ಗಿಕವಾದ ಬಿಸಿ ನೀರನ್ನು ಸಂಗ್ರಹಿಸಿ ಕೊಳವೊಂದನ್ನು ನಿರ್ಮಿಸಿ ಸ್ನಾನ ಮಾಡುವ ಸೌಲಭ್ಯ ಒದಗಿಸಲಾಗಿದೆ. ಈ ನೈಸರ್ಗಿಕವಾದ ಬಿಸಿ ನೀರಿನಲ್ಲಿ ‘ಸಲ್ಫರ್’ನ ಸ್ವಲ್ಪ ಅಂಶವಿರುತ್ತದೆ. 10 ನಿಮಿಷಗಳ ಕಾಲ ಇಲ್ಲಿ ಸ್ನಾನ ಮಾಡಿದರೆ ದೇಹಕ್ಕೆ ಒಳ್ಳೆಯದು. ಆದರೆ ನಾವು ತಿಳಿಯದೆ ಅರ್ಧ ಗಂಟೆ ಇದರಲ್ಲಿ ಸ್ನಾನ ಮಾಡಿದ್ದರಿಂದ ಪ್ರಜೆÐ ತಪ್ಪುವಂತೆ ಆಗಿಬಿಟ್ಟಿತ್ತು. ಸ್ನಾನ ಮುಗಿಸಿ ಲಂಗಾರ್‍ನಲ್ಲಿ ಪ್ರಸಾದ ಸೇವಿಸಿ ಕ್ಯಾಂಪಿಗೆ ತೆರಳುವಾಗ ಸಂಜೆಯ ಹೊತ್ತು. ವಿಶ್ರಮಿಸಲು ಟೆಂಟ್ ಪ್ರವೇಶಿಸಿದಾಗ ಅಲ್ಲಿ ಸುಮಾರು 9 ಮಂದಿ ಇದ್ದರು. ಪ್ರತೀ ಟೆಂಟಿನಲ್ಲಿ 12 ಮಂದಿಗೆ ವ್ಯವಸ್ಥೆ ಎಂದು ನಮಗೆ ಆಗ ತಿಳಿಯಿತು. ಮೊದಲಿಗೆ ಕಿರಿಕಿರಿಯಾದರೂ ನಂತರ ಹೊಂದಾಣಿಕೆಯಾಯಿತು. ಟೆಂಟಿನ 12 ಮಂದಿಯಲ್ಲಿ 11 ಮಂದಿ ಸುಮಾರು 20 ವರ್ಷ ವಯಸ್ಸಿನವರು ಹಾಗೂ ನಮಗೆ ಮೊದಲೇ ಪರಿಚಯವಾದ ಸುಮಾರು 40 ವರ್ಷ ವಯಸ್ಸಿನ ಡಾಕ್ಟರ್ ಅದು ಹೇಗೆ ನಮ್ಮೊಂದಿಗೆ ಹೊಂದಿಕೊಂಡಿದ್ದರು ಎಂಬುದು ಆಶ್ಚರ್ಯ. ಮೊದಲ 2 ದಿನಗಳಂದು ಅಲ್ಲಿನ ತಾಪಮಾನಕ್ಕೆ ಹೊಂದಲು ಅನೇಕ ವ್ಯಾಯಾಮ ಚಟುವಟಿಕೆಗಳನ್ನು ಕಡ್ಡಾಯವಾಗಿ ಮಾಡುವಂತೆ ಸೂಚಿಸಿದ್ದರು. 3ನೇ ದಿನದಂದು ಬೇಸ್ ಕ್ಯಾಂಪ್‍ನಿಂದ ಇನ್ನೂ ಎತ್ತರದ ಪ್ರದೇಶಗಳಿಗೆ ತೆರಳ ಬೇಕಾಗಿತ್ತು. ಬೇಸ್ ಕ್ಯಾಂಪಿನಲ್ಲಿ ಪ್ರತಿ ದಿನ ಮುಂದಿನ ದಿನ (3ನೆ ದಿನ) ಚಾರಣಕ್ಕೆ ಹೊರಡುವವರಿಂದ ಹಾಡು, ನೃತ್ಯ, ನಾಟಕ ಹೀಗೆ ಹಲವಾರು ಕಾರ್ಯಕ್ರಮಗಳ ಪ್ರದರ್ಶನವಿರುತ್ತದೆ. ಕೇವಲ 2 ದಿನಗಳಲ್ಲಿ ಸುಮಾರು 70 ಅಪರಿಚಿತ ವ್ಯಕ್ತಿಗಳ ಪರಿಚಯ ಮಾಡಿಕೊಂಡು ಅವರೊಂದಿಗೆ ಸೇರಿ ಕಾರ್ಯಕ್ರಮವನ್ನು ನೀಡುವದು ವಿಶೇಷ ಎನಿಸಿತು.
ಮೇ 12: ಸೇನೆಯ ಶಿಸ್ತಿನ ಪರಿಚಯ: ಮೇ 12 ರಂದು ಚಾರಣದ ಮೊದಲನೆಯ ದಿನ-“ಂಛಿಛಿಟimಚಿಣisಚಿಣioಟಿ ತಿಚಿಟಞ 1” (ಅಲ್ಲಿನ ಹವಾಮಾನಕ್ಕೆ ಒಗ್ಗಿಸುವಿಕೆ) ಬೆಳಿಗ್ಗೆ, ಸುಮಾರು 5 ಗಂಟೆಗೆ ಜೋರಾದ ಸೀಟಿಯ ಸದ್ದು. ಗಾಬರಿಯಿಂದ ಹಲವು ಮಂದಿಗೆ ಎಚ್ಚರವಾಯಿತು. ನಮ್ಮನ್ನು ಎಬ್ಬಿಸಲು ವೈ.ಎಚ್.ಎ.ಐ ಸ್ವಯಂ ಸೇವಕರೂ ಆಗಿದ್ದ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದು ಬಿಡುವಿನ ನಡುವೆ ಇಲ್ಲಿಗೆ ಬಂದು ಸಹಾಯ ಮಾಡುತ್ತಿದ್ದವರು ಸೀಟಿ ಹಾಕಿ ಎಲ್ಲರು ಏಳುವ ತನಕ ಬಿಡದೆ “ಉಟಾವೋ ಜಲ್ದಿ” ಎಂದು ಜೋರಾಗಿ ಕೂಗುತ್ತಾ ಇದ್ದದ್ದು ನಮಗೆ ಸೇನೆಯಲ್ಲಿ ಇರುವ ಹಾಗೆ ಭಾವನೆ ಮೂಡಿಸಿತು. ಪ್ರಾತರ್ವಿಧಿಗಳ ನಂತರ ಸುಮಾರು 5:30 ಕ್ಕೆ ಟೀ ವ್ಯವಸ್ಥೆ ಇತ್ತು. ಹಲವು ವರ್ಷಗಳಿಂದ ಸಕ್ಕರೆ ಇಲ್ಲದೆ ಕಾಫಿ ಕುಡಿಯುವ ನನಗೆ ಪರಮಾನ್ನದಷ್ಟು ಸಿಹಿಯಾಗಿರುವ ಟೀ ಕುಡಿಯಬೇಕಾದ ಸ್ಥಿತಿ! ಕೊರೆಯುವ ಛಳಿಯಲ್ಲಿ ಈ ಚಾರಣವನ್ನು ಮಾಡಬೇಕಾದರೆ ತುಂಬಾ ತ್ರಾಣದ ಅವಶ್ಯಕತೆ ಇದ್ದು, ಸಿಹಿ ತಿಂಡಿಗಳು ಹಾಗೂ ಪಾನೀಯಗಳ ಅವಶ್ಯಕತೆ ಇರುವುದಾಗಿ ಅಲ್ಲಿನ ಸ್ವಯಂ ಸೇವಕರು ತಿಳಿಸಿದ್ದರು. ಆದ್ದರಿಂದ ಗಟ್ಟಿ ಮನಸ್ಸು ಮಾಡಿ ಟೀ ಸೇವಿಸಬೇಕಾಯಿತು.
ನಂತರ 3ನೇ ದಿನ ಎತ್ತರದ ಪ್ರದೇಶಕ್ಕೆ ಚಾರಣಕ್ಕೆ ಹೊರಡುವ ಗುಂಪನ್ನು ರಾಷ್ಟ್ರಗೀತೆ ಹಾಡಿ ಚಪ್ಪಾಳೆಯ ಮೂಲಕ ಪ್ರೋತ್ಸಾಹಿಸಿ ಕಳುಹಿಸಿದೆವು. ಪೂರಿ ಸಾಗು ಹಾಗೂ ಶಾವಿಗೆ ಪರಮಾನ್ನ (ಸ್ವಯಂ ಸೇವಕರ ಸಲಹೆ ಮೇರೆಗೆ)ಗಳ ಸ್ವಾದನೀಯ ನಾಷ್ಟದ ಬಳಿಕ ಸಣ್ಣ ಪ್ರಮಾಣದ ಚಾರಣಕ್ಕೆ ತೆರಳಬೇಕಾಯಿತು. ಇದಕ್ಕೂ ಮುನ್ನ ಶಿಸ್ತಿನಿಂದ ಸಾಲಾಗಿ ನಿಲ್ಲಿಸಿ, ‘ಹೆಡ್ ಕೌಂಟ್’(ತಲೆ ಎಣಿಕೆ) ನಂತರ ಚಾರಣಕ್ಕೆ ತೆರಳಿದೆವು. ಚಾರಣದ ನಡುವೆ ಹಲವು ಕಡೆ ಸುರಕ್ಷತೆಗಾಗಿ ‘ಹೆಡ್ ಕೌಂಟ್’ ಮಾಡುವುದಾಗಿ ತಿಳಿಸಿದ್ದರು. ಸುಮಾರು 3 ಕಿ.ಮೀ ಚಾರಣದ ಬಳಿಕ ಪಾರ್ವತಿ ನದಿ ದಡದಲ್ಲಿ ನಿಲ್ಲಿಸಿ ‘ಸ್ಟ್ರೆಚ್ಚಿಂಗ್’ (ವ್ಯಾಯಾಮ) ಬಳಿಕ ಸ್ವಲ್ಪ ವಿಶ್ರಮಿಸಿ ಬೇಸ್ ಕ್ಯಾಂಪ್ಗೆ ವಾಪಸು ತೆರಳಿದೆವು. ಮಧ್ಯಾಹ್ನ ಊಟದ ನಂತರ ಸ್ವಲ್ಪ ವಿಶ್ರಮಿಸಿ ನಂತರ ಚಾರಣದಲ್ಲಿನ ‘ಡೂಸ್ ಆಂಡ್ ಡೋಂಟ್ಸ್’ (ಮುಂಜಾಗೃತಿ) ಬಗ್ಗೆ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗುಂಪಿನಲ್ಲಿ ವೈದ್ಯರು ಇದ್ದರೆ ಅವರಿಂದಲೇ ಮಾಹಿತಿ ನೀಡುವುದಾಗಿ ತಿಳಿಸಿದ್ದರು, ನಮ್ಮ ಗುಂಪಿನಲ್ಲಿದ್ದ ಬೆಂಗಳೂರಿನ ವೈದ್ಯರು. ವಿಭಿನ್ನ ರೀತಿಯಲ್ಲಿ ಬಹು ಎತ್ತರ ಪ್ರದೇಶಗಳಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ವಿವರಿಸಿದರು.
ಮೇ 13: ನೈಜ ಚಾರಣದ ಪರಿಚಯ: ಇಬ್ಬರ ನಿರ್ಗಮನ: ಮೇ 13 ರಂದು ಹಿಂದಿನ ದಿನದಂತೆಯೇ ಬೇಗನೇ ಎದ್ದು ನಾಷ್ಟ ಮುಗಿಸಿ ಚಾರಣಕ್ಕೆ-(ಂಛಿಛಿಟimಚಿಣisಚಿಣioಟಿ ತಿಚಿಟಞ 2) ಸಿದ್ದರಾದೆವು. 2ನೇ ದಿನವಾದ ಕಾರಣ ಅಂದು ಬೇಸ್ ಕ್ಯಾಂಪ್ (5000 ಅಡಿ)ನಿಂದ ಸುಮಾರು 5700 ಅಡಿ ಎತ್ತರದ ಪ್ರದೇಶಕ್ಕೆ ನಡೆದು ಬೇಸ್ ಕ್ಯಾಂಪ್ಗೆ ಹಿಂತಿರುಗಬೇಕಿತ್ತ್ತು. ಚಾರಣದ ದಾರಿಯು ಸ್ವಲ್ಪ ಕಷ್ಟಕರವಾಗಿದ್ದು ಮಧ್ಯದಾರಿಯಲ್ಲಿ ಇಬ್ಬರಿಗೆÉ ತಲೆತಿರುಗುವಂತಾಗಿ ಬೇಸ್ ಕ್ಯಾಂಪ್‍ಗೆ ಹಿಂತೆರಳಿದರು. ಇನ್ನುಳಿದ 78 ಮಂದಿ ಹಾಗೂ ಇಬ್ಬರು ಗೈಡ್‍ಗಳು ಸೇರಿ (ಮಾರ್ಗದರ್ಶಕರು) ಚಾರಣ ವನ್ನು ಮುಂದುವರಿಸಿದೆವು.
ಒಬ್ಬ ಗೈಡ್ ನಾವು ಕೆಲವರು ಕನ್ನಡದಲ್ಲಿ ಮಾತನಾಡುತಿದ್ದದನ್ನು ಕಂಡು “ನೀವು ಕನ್ನಡದವರೇ?! ನನಗೂ ಕನ್ನಡ ಬರುತ್ತದೆ” ಎಂದ. ಆಶ್ಚರ್ಯಗೊಂಡ ನಾವು ಅವರು ಕರ್ನಾಟಕದವರಾ ಎಂದು ಪ್ರಶ್ನಿಸಿದಾಗ ಅವರು ಹಿಮಾಚಲದವರೇ ಆಗಿದ್ದು, ಅವರಿಗೆ ಕನ್ನಡ ಮಾತನಾಡುವ ಒಬ್ಬ ಗೆಳೆಯ ಇರುವುದಾಗಿ ತಿಳಿಸಿದ. ಚಾರಣ ಸಾಗುತ್ತಿದ್ದಂತೆಯೆ ಕನ್ನಡ ಪದಗಳನ್ನೆಲ್ಲಾ ಹಾಡಲು ಶುರು ಮಾಡಿದನು. ಬಹಳ ಸ್ಪಷ್ಟವಾಗಿ ಹಾಡುತ್ತಿದ್ದ ಅವನು, ಅವನಿಗೆ ಇರುವ ಕನ್ನಡದ ಪ್ರೇಮವನ್ನು ನೋಡಿ ನಮಗೆ ಸಂತಸವಾಯಿತು. ಸುಮಾರು 5700 ಅಡಿ ಎತ್ತರಕ್ಕೆ ತಲುಪಿದ ನಂತರ ಸ್ವಲ್ಪ ಹೊತ್ತು ವಿಶ್ರಮಿಸಿ ಬೇಸ್ ಕ್ಯಾಂಪಿಗೆ ತೆರಳಿದೆವು. ಬೇಸ್ ಕ್ಯಾಂಪಿನಲ್ಲಿ ಚಾರಣದ ನಡುವೆ ಹಿಂತೆರಳಿದ ಇಬ್ಬರು ತಮ್ಮ ಲಗೇಜ್‍ಗಳನ್ನು ಪ್ಯಾಕ್ ಮಾಡಿ ಮುಂದಿನ ದಿನ ತಮ್ಮ ಊರಿಗೆ ವಾಪಸು ಹೋಗಲು ನಿರ್ಧರಿಸಿದ್ದರು. ಈ ಸಣ್ಣ ಚಾರಣವನ್ನೂ ಪೂರ್ಣಗೊಳಿಸಲು ಅಸಾಧ್ಯವಾದ ಅವರಿಗೆ ಒಟ್ಟು 9 ದಿನಗಳ ಕಾಲ ಸುಮಾರು 80 ಕಿ.ಮೀ ಚಾರಣವನ್ನು ಮಾಡುವುದು ಪ್ರಾಣಕ್ಕೆ ಅಪಾಯವೆಂದು ಅಲ್ಲಿದ್ದ ವೈ.ಹೆಚ್.ಎ.ಐ ಸಂಸ್ಥೆಯವರು ತಿಳಿಸಿದ್ದರು. ಚಾರಣದ ನಡುವೆ ಏನೇ ತೊಂದರೆ ಆದರೂ ಗೈಡ್‍ಗಳಿಗೆ ತಿಳಿಸುವುದಾಗಿ ಹಾಗೂ ಜ್ವರ, ತಲೆನೋವುಗಳು ಬಂದಲ್ಲಿ ಚಾರಣ ಮುಂದುವರಿಸಲು ಅನುಮತಿ ನೀಡುವುದಿಲ್ಲ ಎಂದೂ ತಿಳಿಸಿದರು. (ಮುಂದುವರಿಯುವದು)
?ಜಿ. ಆರ್. ಪ್ರಜ್ವಲ್