ಮಡಿಕೇರಿ, ಫೆ. 27: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಂಬಂಧ 6 ನೇ ಸಣ್ಣ ನೀರಾವರಿ ಗಣತಿ ಬಗ್ಗೆ ಕಂದಾಯ ನಿರೀಕ್ಷಕರಿಗೆ ತರಬೇತಿ ನೀಡಿ ತ್ವರಿತವಾಗಿ ಗಣತಿ ಕಾರ್ಯ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 6 ನೇ ಸಣ್ಣ ನೀರಾವರಿ ಗಣತಿ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.
6ನೇ ಸಣ್ಣ ನೀರಾವರಿ ಗಣತಿ ಸಂಬಂಧ ಕಂದಾಯ ನಿರೀಕ್ಷಕರಿಗೆ ತಾಲೂಕು ಮಟ್ಟದಲ್ಲಿ ತರಬೇತಿ ನೀಡಿ ವ್ಯವಸ್ಥಿತವಾಗಿ ಗಣತಿ ಕಾರ್ಯ ಕೈಗೊಂಡು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಜಿಲ್ಲಾ ಸಾಂಖ್ಯಿಕ ಇಲಾಖೆ, ಕಂದಾಯ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು 6ನೇ ಸಣ್ಣ ನೀರಾವರಿ ಗಣತಿ ಕಾರ್ಯ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಗೋಕುಲದಾಸ್ ಮಾಹಿತಿ ನೀಡಿ, ಭಾರತ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಶೇ.100ರಷ್ಟು ಕೇಂದ್ರ ಪುರಸ್ಕøತ ಸಣ್ಣ ನೀರಾವರಿ ಅಂಕಿ ಅಂಶಗಳ ಸಮನ್ವಯೀಕರಣ ಆರ್.ಎಂ.ಐ.ಎಸ್ ಯೋಜನೆಯ ಅಡಿಯಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಣ್ಣ ನೀರಾವರಿ ಗಣತಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಣ್ಣ ನೀರಾವರಿ ಯೋಜನೆಗಳ ಗಣತಿಯಡಿಯಲ್ಲಿ ಸಣ್ಣ ನೀರಾವರಿ ಯೋಜನೆಗಳನ್ನು ಎರಡು ಮುಖ್ಯ ವಿಧಗಳಾಗಿ ವರ್ಗಿಕರಿಸಲಾಗಿದೆ. ಅಂತರ್ಜಲ ಯೋಜನೆಗಳು ಹಾಗೂ ಮೇಲ್ಮೈ ಜಲ ಯೋಜನೆಗಳು, ಅಂತರ್ಜಲ ಯೋಜನೆಗಳಲ್ಲಿ ನಾಲ್ಕು ಪ್ರಕಾರದ ಯೋಜನೆಗಳಿರುತ್ತದೆ. ಅಗೆದ ಬಾವಿಗಳು, ಆಳವಲ್ಲದ ಕೊಳವೆ ಬಾವಿಗಳು, ಮಧ್ಯಮ ಆಳದ ಕೊಳವೆ ಬಾವಿ, ಆಳದ ಕೊಳವೆ ಬಾವಿಗಳು ಎಂದು ವರ್ಗಿಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಮೇಲ್ಮೈಜಲ ಯೋಜನೆಗಳಲ್ಲಿ ಎರಡು ಪ್ರಕಾರದ ಯೋಜನೆಗಳಿರುತ್ತದೆ. ಮೇಲ್ಮೈಜಲ ಹರಿಯುವ ನೀರಾವರಿ ಯೋಜನೆಗಳು ಮತ್ತು ಏತ ನೀರಾವರಿ ಯೋಜನೆಗಳು ಈ ಎರಡು ಪ್ರಕಾರದ ಯೋಜನೆಗಳ ಮೂಲಕ 2000 ಹೆಕ್ಟೇರ್‍ವರೆಗೆ ಅಚ್ಚುಕಟ್ಟುಳ್ಳ ಯೋಜನೆಗಳು ಸಣ್ಣ ನೀರಾವರಿ ಯೋಜನೆಗಳೆಂದು ಪರಿಗಣಿಸಲಾಗಿದೆ ಎಂದರು.
40 ಹೆಕ್ಟೇರ್‍ಗಳಿಗೆ ಮೇಲ್ಪಟ್ಟ 2 ಸಾವಿರ ಹೆಕ್ಟೇರ್‍ವರೆಗಿನ ಸಣ್ಣ ನೀರಾವರಿ ಯೋಜನೆಗಳು ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುತ್ತದೆ. 4 ರಿಂದ 40 ಹೆಕ್ಟೇರ್ ಅಚ್ಚುಕಟ್ಟುಳ್ಳ ಯೋಜನೆಗಳು ಜಿಲ್ಲಾ ಪಂಚಾಯತ್ ಅಧೀನದಲ್ಲಿ ಬರುತ್ತದೆ. 0 ರಿಂದ 40 ಹೆಕ್ಟೇರ್ ಅಚ್ಚುಕಟ್ಟು ಇರುವ ಯೋಜನೆಗಳ ಜವಾಬ್ದಾರಿಯು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧೀನದಲ್ಲಿರುವ ಗ್ರಾಮೀಣ ಅಭಿವೃದ್ಧಿ ಇಂಜಿನಿಯರ್ ವಿಭಾಗಕ್ಕೆ ಸಂಬಂಧಿಸಿರುತ್ತದೆ. 2 ಸಾವಿರ ಹೆಕ್ಟೇರ್‍ಗಿಂತ ಹೆಚ್ಚಿನ ಯೋಜನೆಗಳು ಬೃಹತ್ ನೀರಾವರಿ ಇಲಾಖೆಯ ಅಧೀನದಲ್ಲಿರುತ್ತವೆ ಎಂದು ಅವರು ಮಾಹಿತಿ ನೀಡಿದರು.
ಎಲ್ಲಾ ವಿಧದ ಸಣ್ಣ ನೀರಾವರಿ ಯೋಜನೆಗಳ ಸಮಗ್ರವಾದ ಮಾಹಿತಿಯನ್ನು ಹೊಂದುವ ಗುರಿಯೊಂದಿಗೆ ಸಣ್ಣ ನೀರಾವರಿ ಗಣತಿಯನ್ನು ನಡೆಸಲಾಗುತ್ತಿದೆ. ಸಣ್ಣ ನೀರಾವರಿಯ ವಿವಿಧ ಯೋಜನೆಗಳನ್ನು ಸಂಪೂರ್ಣವಾಗಿ ಗಣತಿ ಮಾಡುವುದು, ಯೋಜನೆಗಳನುಸಾರ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಕಾಲಗಳಲ್ಲಿ ನೀರಾವರಿ ಕ್ಷೇತ್ರದ ಬಗ್ಗೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸುವುದು, ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವಲ್ಲಿ ಗಣತಿಯ ಫಲಿತಾಂಶದ ಬಳಕೆ, ಗಣತಿಯಲ್ಲಿ ಸಂಗ್ರಹಿಸಲಾದ ಮಾಹಿತಿಯಿಂದ ಅಂತರ್ಜಲದ ಪ್ರಮಾಣವನ್ನು ಅಂದಾಜಿಸಬಹುದಾಗಿದೆ ಎಂದರು.
ಪ್ರಸ್ತುತ ಗಣತಿಯಲ್ಲಿ ಮೂರು ರೀತಿಯ ನಮೂನೆಗಳಿರುತ್ತದೆ. ಗ್ರಾಮ ಪ್ರಪತ್ರ, ನಮೂನೆ-1 :ಸಣ್ಣ ನೀರಾವರಿ ಅಂತರ್ಜಲ ಯೋಜನೆಗಳ ಪ್ರಪತ್ರ, ನಮೂನೆ 2: ಸಣ್ಣ ನೀರಾವರಿ ಮೇಲ್ಮೈ ಯೋಜನೆಗಳ ಹೆಸರೆ ಸೂಚಿಸುವ ಹಾಗೇ ಗ್ರಾಮ ಪ್ರಪತ್ರವು ಗ್ರಾಮದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದ್ದು, ಅಂತರ್ಜಲ ಯೋಜನೆಗಳ ಪ್ರಪತ್ರವು ಅಂತರ್ಜಲ ಯೋಜನೆಗಳಾದ ಅಗೆದ ಬಾವಿಗಳು, ಆಳವಲ್ಲದ ಕೊಳವೆ ಬಾವಿಗಳು, ಮಧ್ಯಮ ಆಳದ ಕೊಳವೆ ಬಾವಿ, ಆಳದ ಕೊಳವೆ ಬಾವಿಗಳ ಮಾಹಿತಿಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಮೇಲ್ಮೈ ಯೋಜನೆಗಳ ಪ್ರಪತ್ರವು ಮೇಲ್ಮೈ ಯೋಜನೆಗಳಾದ ಮೇಲ್ಮೈ ಹರಿಯುವ ಯೋಜನೆಗಳು ಹಾಗೂ ಏತ ನೀರಾವರಿ ಯೋಜನೆಗಳ ವಿವರಗಳನ್ನು ಒಳಗೊಂಡಿರುತ್ತದೆ. ಪ್ರತಿ ಸಣ್ಣ ನೀರಾವರಿ ಯೋಜನೆಗೆ ನಿಗದಿತ ಪತ್ರದಲ್ಲಿ ಪ್ರತ್ಯೇಕವಾಗಿ ಮಾಹಿತಿಯನ್ನು ಕಲೆಹಾಕಬೇಕಿದೆ. ಯೋಜನೆಯ ಮಾಲೀಕರಿಂದ ಮಾಹಿತಿಯನ್ನು ಪಡೆದು ನಮೂನೆಗಳನ್ನು ಗಣತಿದಾರರು ಭರ್ತಿ ಮಾಡಬೇಕಿದೆ.
ಗಣತಿಯಲ್ಲಿ ಸಂಗ್ರಹಿಸುವ ಬಹುತೇಕ ಅಂಕಿಅಂಶಗಳು ಪರಿಣಾಮ ಬದ್ಧವಾಗಿದ್ದು ಇದರೊಂದಿಗೆ ಕೆಲವು ಸಾಮಾನ್ಯ ಮಾಹಿತಿಯನ್ನು ಸಹ ಸೇರಿಸಲಾಗಿದೆ. ಒಂದು ವೇಳೆ ಯಾವುದೇ ಸಣ್ಣ ನೀರಾವರಿ ಯೋಜನೆಯು ಸಂಘ, ಸಂಸ್ಥೆ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸರ್ಕಾರಿ ಒಡೆತನಕ್ಕೊಳಪಟ್ಟಲ್ಲಿ ಅಂತಹ ಯೋಜನೆಗಳ ಮಾಹಿತಿಯನ್ನು ಲಭ್ಯವಿರುವ ದಾಖಲೆಗಳಿಂದ ಭರ್ತಿ ಮಾಡಬೇಕಾಗಿರುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪ್ರಕಾಶ್ 6ನೇ ಸಣ್ಣ ನೀರಾವರಿ ಗಣತಿ ಬಗ್ಗೆ ಹಲವು ಮಾಹಿತಿ ನೀಡಿದರು. ಸಣ್ಣ ನೀರಾವರಿ ಇಲಾಖೆಯ ಎಇಇ ಕಾಂತರಾಜು, ಪೌರಾಯುಕ್ತ ರಮೇಶ್, ತಹಶೀಲ್ದಾರರಾದ ಗೋವಿಂದ ರಾಜು, ಪ್ರವೀಣ್ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್, ಶ್ರೀಧರ, ಸಂಜೀವ್ ಕುಮಾರ್, ಇತರರು ಇದ್ದರು.