ಸುಂಟಿಕೊಪ್ಪ, ಫೆ. 27: ಕಳೆದ 20 ವರ್ಷಗಳಿಂದ ಶಿಸ್ತುಬದ್ಧವಾಗಿ ಅರ್ಥಪೂರ್ಣವಾಗಿ ಕ್ರೀಡಾಕೂಟವನ್ನು ನಡೆಸಿಕೊಂಡು, ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಕೆಲಸ ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ಮಾಡುತ್ತಾ ಬಂದಿರುವುದು ಸ್ತುತ್ಯಾರ್ಹವಾದುದು ಎಂದು ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್ ಹೇಳಿದರು.

ನಾಕೂರು-ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ 20ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಕ್ರೀಡಾಕೂಟ ನಡೆಸುವ ಪರಂಪರೆ ನಿರಂತರವಾಗಿ ನಿಯಮಿತವಾಗಿ ಸಾಗಿ ಬಂದಿದೆ. ಇದರಿಂದ ಗ್ರಾಮೀಣ ಪ್ರದೇಶದ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರವನ್ನು ಪ್ರತಿನಿಧಿಸುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಇಂಥಹ ಕ್ರೀಡಾಕೂಟ ಮುಂದುವರಿಯಬೇಕು. ಸಂಘಟಕರ ಸಂಖ್ಯೆ ಕಡಿಮೆಯಾಗಬಾರದು. ದೇಶಿ ಕ್ರೀಡೆ ಕಬಡ್ಡಿಯನ್ನು ಸರಕಾರ ಪ್ರೋತ್ಸಾಹಿಸಬೇಕು. ಕ್ರೀಡೆಗೆ ಎಲ್ಲರ ಪ್ರೋತ್ಸಾಹ, ಸಹಕಾರ ಅಗತ್ಯ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಕೂರು-ಶಿರಂಗಾಲ ಗ್ರಾ.ಪಂ. ಸದಸ್ಯ ವಸಂತಕುಮಾರ ಮಾತನಾಡಿ, ಎಳೆಯ ಪ್ರಾಯದಲ್ಲೇ ಮಕ್ಕಳಲ್ಲಿ ಕ್ರೀಡಾ ಮನೋಭಾವನೆ, ಕ್ರೀಡಾಸ್ಫೂರ್ತಿ ಬೆಳೆಯಬೇಕು. ಕ್ರೀಡೆಯನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಬೇಕು. ಮಕ್ಕಳಿಗೆ ತಾಯಿಯ ಪ್ರೀತಿ ವಾತ್ಸಲ್ಯ ಮುಖ್ಯ 20 ವರ್ಷದಿಂದ ವಿಭಿನ್ನ ರೀತಿಯಲ್ಲಿ ಕ್ರೀಡಾಕೂಟ, ಸಾಂಸ್ಕøತಿಕ ಕಾರ್ಯಕ್ರಮ ನಡೆಸುತ್ತಿರುವ ಫ್ರೆಂಡ್ಸ್ ಯೂತ್ ಕ್ಲಬ್‍ನವರ ಸೇವೆ ಅನನ್ಯವಾದುದು ಎಂದು ಹೇಳಿದರು.

ಸಮಾರೋಪ ಸಮಾರಂಭವನ್ನು ನಾಕೂರು-ಶಿರಂಗಾಲ ಗ್ರಾ.ಪಂ. ಅಧ್ಯಕ್ಷೆ ರಂಜನಿ ಕುಂಞಕೃಷ್ಣ ಉದ್ಘಾಟಿಸಿ ಮಾತನಾಡಿದರು. ಸಮಾರಂಭವನ್ನು ಉದ್ದೇಶಿಸಿ ತಾ.ಪಂ. ಮಾಜಿ ಅಧ್ಯಕ್ಷೆ ಗೀತಾ ಬಸಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ ಬಸವರಾಜು, ಪಿಡಿಓ ಗೂಳಪ್ಪ ಕೋತಿನ ಹಾಗೂ ಕಾನ್‍ಬೈಲ್ ಪ್ರೌಢಶಾಲಾ ಶಿಕ್ಷಕ ದಿನೇಶ್ ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ ಪಂಚಾಯಿತಿ ಸದಸ್ಯರುಗಳಾದ ಚಂದ್ರಶೇಖರ್, ಸತೀಶ, ಚೆನ್ನಮ್ಮ, ಮಾಜಿ ಸದಸ್ಯ ರಮೇಶ, ಜಂಗಲ್ ಕ್ಯಾಂಪ್ ಮಾಲೀಕ ಮಂಜು, ಕಾಫಿ ಬೆಳೆಗಾರರಾದ ಧರ್ಮಪ್ಪ, ಫ್ರೆಂಡ್ಸ್ ಯೂತ್ ಕ್ಲಬ್‍ನ ಅಧ್ಯಕ್ಷ ಶಂಕರನಾರಾಯಣ, ರಜಿ, ಕೃಷಿಕ ನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಕಾನ್‍ಬೈಲ್ ಸರಕಾರಿ ಪ್ರೌಢಶಾಲಾ ಶಿಕ್ಷಕರುಗಳಿಗೆ ಶಾಲೆಗೆ ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 100 ಫಲಿತಾಂಶ ತರುವಲ್ಲಿ ಶ್ರಮಿಸಿದಕ್ಕಾಗಿ ಸನ್ಮಾನಿಸಿ, ಗೌರವಿಸಲಾಯಿತು. ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ವಿವಿಧ ಭಾಗಗಳಿಂದ ಒಟ್ಟು 11 ತಂಡಗಳು ಪಾಲ್ಗೊಂಡಿದ್ದವು. ಜೆಬಿ ಫ್ರೆಂಡ್ಸ್ ಎ. ತಂಡ ಪ್ರಥಮ ಸ್ಥಾನ, ಜೆಬಿ ಫ್ರೆಂಡ್ಸ್ ಬಿ. ತಂಡವು ದ್ವಿತೀಯ ಸ್ಥಾನ, ಟಿಂಬರ್ ಬಾಯ್ಸ್ ಮಳ್ಳೂರು ತಂಡವು ತೃತೀಯ ಸ್ಥಾನಗಳನ್ನು ಪಡೆದುಕೊಂಡಿತು. ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ನೀಡಲಾಯಿತು.