ಕುಶಾಲನಗರ, ಫೆ. 26: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸೋಮವಾರಪೇಟೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕುಶಾಲನಗರದ ಮಹಿಳಾ ಸಮಾಜದಲ್ಲಿ ಗರ್ಭಿಣಿಯರಿಗೆ ಪೋಷಣ್ ಅಭಿಯಾನ್ ಮತ್ತು ಸೀಮಂತ ಕಾರ್ಯಕ್ರಮ ನಡೆಯಿತು.

ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯೆ ರೂಪಾ ಉಮಾಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಉದ್ಯಮಿ ಉಮಾಶಂಕರ್ ಮಾತನಾಡಿ, ತಾಯ್ತನ ಎಂಬುದು ಹೆಣ್ಣಿನ ಜೀವನದ ಬಹುಮುಖ್ಯ ಘಟ್ಟವಾಗಿದ್ದು ಈ ಸಂದರ್ಭ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಗರ್ಭಿಣಿಯರಿಗೆ ಆರೋಗ್ಯ ಇಲಾಖೆ ವತಿಯಿಂದ ಕೈಗೊಳ್ಳುತ್ತಿರುವ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಶ್ರಮ ಅತ್ಯಮೂಲ್ಯ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಅನುಪಮ ಮಾತನಾಡಿ, ಗರ್ಭಿಣಿಯರು ತಮ್ಮ ಆರೋಗ್ಯ ಮತ್ತು ಸ್ವಚ್ಛತೆಯ ಕಡೆ ಹೆಚ್ಚಿನ ಗಮನಹರಿಸಬೇಕಿದೆ. ಸರಕಾರದಿಂದ ಗರ್ಭಿಣಿಯರಿಗೆ ಲಭಿಸುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕಿದೆ ಎಂದರು.

ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಪ್ರಾಣೇಶ್ ಮಾತನಾಡಿ, ಗರ್ಭಾವಸ್ಥೆ ಕಾಲದಲ್ಲಿ ಮಹಿಳೆಯರು ಕೈಗೊಳ್ಳಬೇಕಾದ ಕ್ರಮಗಳು, ಪಾಲಿಸಬೇಕಾದ ಆಹಾರ ಪದ್ಧತಿಗಳ ಬಗ್ಗೆ ಮಾಹಿತಿ ಒದಗಿಸಿದರು.

ಕುಶಾಲನಗರ ಪಪಂ ಸದಸ್ಯೆ ರೂಪಾ ಉಮಾಶಂಕರ್ ಗರ್ಭಿಣಿಯರಿಗೆ ಸೀಮಂತ ನೆರವೇರಿಸಿ ಪ್ರೊಟೀನ್ ಪೌಡರ್ ಕಿಟ್ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ನಿರ್ದೇಶಕಿ ನಿರ್ಮಲಾ ಶಿವದಾಸ್, ಕಾರ್ಯದರ್ಶಿ ಶೈಲಾ, ಆರೋಗ್ಯ ನಿರೀಕ್ಷಕ ಎಸ್. ವಿಜೇಂದ್ರ, ಕಿರಿಯ ಆರೋಗ್ಯ ಸಹಾಯಕಿ ಡಿ.ಎಂ. ಸುಶೀಲಾ, ಗೌರಮ್ಮ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.