ಕೂಡಿಗೆ, ಫೆ. 26: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ವರ್ಷಗಳಿಗಿಂತಲೂ ಈ ವರ್ಷದಲ್ಲಿ ಶುಂಠಿ ಬೆಳೆಗೆ ಭಾರೀ ಬೆಲೆ ಬಂದ ಹಿನ್ನೆಲೆ ಈ ಭಾಗದ ನೂರಾರು ರೈತರು ಈವರೆಗಿಂತಲೂ ಹೆಚ್ಚಿನ ಮಟ್ಟದಲ್ಲಿ ಶುಂಠಿ ಬಿತ್ತನೆ ಮಾಡಲು ಮುಗಿಬಿದ್ದಿದ್ದಾರೆ.

ಹಾರಂಗಿ ಅಚ್ಚುಕಟ್ಟು ನೀರನ್ನು ಅವಲಂಭಿಸದೆ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು, ಗುಡ್ಡೆ ಹೊಸೂರು, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಭತ್ತ, ಜೋಳ ಬೆಳೆಯುತ್ತಿದ್ದ ರೈತರು ಇದೀಗ ವಾಣಿಜ್ಯ ಬೆಳೆ ಶುಂಠಿ ಬಿತ್ತನೆ ಮಾಡಲು ತೊಡಗಿದ್ದಾರೆ.

ಕಳೆದ ಬಾರಿ ಬಿತ್ತನೆ ಶುಂಠಿಗೆ ಚೀಲವೊಂದಕ್ಕೆ (60 ಕೆ.ಜಿ.) ರೂ. 4500 ರಿಂದ ರೂ. 5000 ಇತ್ತು, ಮಾರಾಟ ಬೆಲೆಯೂ ಕೂಡಾ ಅಧಿಕವಾಗಿತ್ತು. ಈ ಸಾಲಿನಲ್ಲಿ ಬಿತ್ತನೆ ಶುಂಠಿ ಬೀಜಕ್ಕೆ ಒಂದು ಚೀಲಕ್ಕೆ ರೂ. 3500 ಇದ್ದು, ಈ ಬಾರಿ ಭಾಗಶಃ ರೈತರು ಶುಂಠಿ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ತಮ್ಮ ಜಮೀನುಗಳಲ್ಲಿ ಬೋರ್‍ವೆಲ್ ಕೊರೆಸಿ ನೀರಿನ ವ್ಯವಸ್ಥೆ ಮಾಡಿಕೊಳ್ಳುವುದರ ಜೊತೆಗೆ ಈಗಾಗಲೇ ಟ್ರ್ಯಾಕ್ಟರ್ ಮೂಲಕ ಭೂಮಿಯನ್ನು ಹದಗೊಳಿಸಿ ಶುಂಠಿ ಬಿತ್ತನೆಗೆ ಬೇಕಾಗುವ ನೂತನ ಮಾದರಿಯ ಹನಿ ನೀರಾವರಿ ಪದ್ಧತಿಯ ಮೂಲಕ ಬೇಸಾಯಕ್ಕೆ ತೊಡಗಿರುವುದು ಕಂಡುಬರುತ್ತಿದೆ.

ಹಾರಂಗಿ ಅಚ್ಚುಕಟ್ಟು ಪ್ರದೇಶದ ಎರಡನೇ ಬೆಳೆಗೆ ನೀರು ಕೇಳುವ ಈ ಭಾಗದ ರೈತರು ತಮಗೆ ಸರ್ಕಾರದಿಂದ ಸಿಗುವ ರಿಯಾಯಿತಿ ದರದ ಕೊಳವೆಬಾವಿಗಳನ್ನು ಕೊರೆಸಿಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ವಾಣಿಜ್ಯ ಬೆಳೆಯನ್ನು ಬೆಳೆಯಲು ಪೈಪೋಟಿಯಲ್ಲಿ ಸನ್ನದ್ಧರಾಗಿದ್ದಾರೆ. ಬೆಳೆಗೆ ಬೇಕಾಗುವ ಕೊಟ್ಟಿಗೆ ಗೊಬ್ಬರ, ಭತ್ತದ ಹುಲ್ಲಿಗೆ ಭಾರೀ ಬೇಡಿಕೆ ಉಂಟಾಗಿದ್ದು, ಅಧಿಕ ಹಣವಾದರೂ ಕೊಂಡುಕೊಂಡು ಸಾವಯವ ಗೊಬ್ಬರದೊಂದಿಗೆ ಬೆರೆಸಿ ಶುಂಠಿ ಬೇಸಾಯ ಮಾಡಲು ರೈತರು ತಾ ಮುಂದು ನಾ ಮುಂದು ಎಂದು ಪೈಪೋಟಿಯಲ್ಲಿ ನಿಂತಂತೆ ಕಾಣುತ್ತಿದೆ. ಫೆಬ್ರವರಿ ಕೊನೆಯಲ್ಲಿ ಹಾಗೂ ಮಾರ್ಚ್ ತಿಂಗಳಲ್ಲಿ ಶುಂಠಿ ಬಿತ್ತನೆ ಮಾಡಿದ್ದಲ್ಲಿ ಜೂನ್, ಜುಲೈ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗುವುದರಿಂದ ಗೆಡ್ಡೆ ಕಟ್ಟಲು ಉತ್ತಮ ಸಮಯವಾಗಿದೆ.

ಶುಂಠಿ ಬೆಳೆಯುವ ಮೂಲಕ ಜಮೀನಿಗೆ ಸಾವಯವ ಮತ್ತು ಕೊಟ್ಟಿಗೆ ಗೊಬ್ಬರವನ್ನು ಉಪಯೋಗಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಭೂಮಿಯ ಮಣ್ಣನ್ನು ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಿ ಮಣ್ಣಿಗೆ ಬೇಕಾಗುವ ಸಾರಜನಕ ಮತ್ತು ರಂಜಕಗಳ ಮಿಶ್ರಣ ಮಾಡಿ ಮಣ್ಣನ್ನು ಸಿದ್ಧ ಮಾಡಿದ್ದಲ್ಲಿ ಉತ್ತಮ ಬೆಳೆ ಬರುತ್ತದೆ. ಭೂಮಿಗೆ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ. ಉತ್ತಮವಾದ ಬೆಳೆ ಬಂದಲ್ಲಿ ನಾವು ಕೂಡಾ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುತ್ತದೆ ಎಂದು ರೈತ ಬೊಮ್ಮೆಗೌಡನ ಚಿಣ್ಣಪ್ಪ ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ