ಸೋಮವಾರಪೇಟೆ, ಫೆ. 26: ತಾಲೂಕು ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ವತಿಯಿಂದ ಔಷಧಿ ಸಸ್ಯ, ಹೂವು, ಹಣ್ಣಿನ ಸಸಿಗಳ ಮಾರಾಟ, ಗ್ರಾಮೀಣ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ, ಮಹಿಳಾ ವೇದಿಕೆಯ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಉಪಾಧ್ಯಕ್ಷೆ ಚಂದ್ರಿಕಾ ಕುಮಾರ್, ಕಾರ್ಯದರ್ಶಿ ಸಂಗೀತಾ ದಿನೇಶ್, ಖಜಾಂಚಿ ಲಾವಣ್ಯ ಮೋಹನ್, ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಎಚ್.ಪಿ.ರಾಜಪ್ಪ, ಜಿ.ಪಿ.ಲಿಂಗರಾಜು, ಶಿವಯ್ಯ ಅವರುಗಳು ಉಪಸ್ಥಿತರಿದ್ದರು.

ಕರ್ಕಳ್ಳಿ ನಿವಾಸಿ ನಿರ್ಮಲ ಪ್ರಕಾಶ್ ಅವರು ಬೆಳೆದಿರುವ ಔಷಧಿ ಸಸ್ಯಗಳು ಹಾಗೂ ಹಣ್ಣಿನ ಗಿಡಗಳು ಗಮನಸೆಳೆದವು. ಲೆಮನ್ ಗ್ರಾಸ್, ಸ್ಪಿವೀಯಾ, ಮಧುನಾಶಿನಿ, ಅಮೃತಬಳ್ಳಿ, ಟಿಂಚರ್, ಅಲೋವೇರಾ, ಲವಂಗಾ ಗ್ರಾಸ್, ವಿಳ್ಯೆದೆಲೆ, ಬಿಲ್ವಪತ್ರೆ, ನೋನಿ, ಬೇವು ಸಸಿಗಳಿಗೆ ಬೇಡಿಕೆ ಇತ್ತು.

ಎಗ್‍ಫ್ರೂಟ್, ಚೆರಿಸೀಬೆ, ಮಲೈನ್ ಆಪಲ್, ಗರ್ಜಿಹಣ್ಣು, ಲಕ್ಷ್ಮಣ ಫಲ, ಸ್ಟ್ರಾಬೆರಿ, ಹಲಸು ಸಸಿಗಳು ಮಾರಾಟವಾದವು. ಪುಷ್ಪ ಸುರೇಶ್, ಚಂದ್ರಕಲಾ, ಶೋಭನಾಗರಾಜ್, ಜ್ಯೋತಿ ದೇವರಾಜ್ ಅವರು ತಯಾರಿಸಿದ ಭತ್ತದ ತೆನೆಯ ತೋರಣ, ಜುಮುಕಿಗಳು ಗಮನ ಸೆಳೆದವು. ಚಿಕನ್ ಲಾಲಿಪಾಪ್, ಬಿರಿಯಾನಿ ಇನ್ನಿತರ ತಿನಿಸುಗಳನ್ನು ಜನರು ಸವಿದರು. ಬಗೆಬಗೆಯ ಹೂವಿನ ಕುಂಡಗಳನ್ನು ಖರೀದಿಸಲಾಯಿತು.