ಕುಶಾಲನಗರ, ಫೆ. 26: ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಅಧಿಕಾರಿಗಳು ಪಂಚಾಯ್ತಿ ಕಛೇರಿಯ ಸ್ವಚ್ಛತಾ ಕಾರ್ಮಿಕರನ್ನು ಕಡೆಗಣಿಸುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಭರತ್ ಆಕ್ರೋಶÀ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಕಳೆದ 6 ತಿಂಗಳಿನಿಂದ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಮಿಕರಿಗೆ ವೇತನ ನೀಡಿಲ್ಲ. ಈ ಹಿನ್ನಲೆಯಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಮಧ್ಯೆ ಪ್ರವೇಶಿಸಿ ತಕ್ಷಣ ವೇತನ ಪಾವತಿ ಮಾಡುವುದಾಗಿ ಭರವಸೆ ವ್ಯಕ್ತಪಡಿಸಿದ ಕಾರಣ ಧರಣಿ ಕೈಬಿಡಲಾಗಿದೆ ಎಂದು ತಿಳಿಸಿದ ಅವರು, ಗಾಂಧಿ ಪುರಸ್ಕಾರಕ್ಕೆ ಅರ್ಹವಾದ ಕೂಡ್ಲೂರು ಗ್ರಾಮ ಪಂಚಾಯಿತಿ ಸ್ವಚ್ಛತಾ ಕಾರ್ಮಿಕರಿಗೆ ವೇತನ ನೀಡದೆ ತಾತ್ಸಾರ ಮನೋಭಾವ ತಾಳಿರುವುದು ದುರಂತ ಎಂದರು.

ಇದೇ ರೀತಿ ಕೂಡಿಗೆ, ಹಂಡ್ಲಿ ಗ್ರಾಮ ಪಂಚಾಯಿತಿಗಳು ಸೇರಿದಂತೆ ಹಲವೆಡೆ ಕಾರ್ಮಿಕರು ವೇತನವಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ. ಪಂಚಾಯಿತಿಯಲ್ಲಿ ಬರುವ ಆದಾಯದಲ್ಲಿ ಶೇ. 40 ರಷ್ಟನ್ನು ಕಾರ್ಮಿಕರ ವೇತನಕ್ಕೆ ಮೀಸಲಿರಿಸುವ ನಿಯಮವನ್ನು ಅಧಿಕಾರಿಗಳು ಧಿಕ್ಕರಿಸಿ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ. ಈ ಹಿನ್ನೆಲೆ ಈ ಬಾರಿ ಬಜೆಟ್‍ನಲ್ಲಿ ರಾಜ್ಯ ಸರಕಾರ ಸ್ವಚ್ಛತಾ ಕಾರ್ಮಿಕರ ವೇತನಕ್ಕಾಗಿ ರೂ. 398 ಕೋಟಿ ಮೀಸಲಿರಿಸಬೇಕಾಗಿದೆ ಎಂದು ಭರತ್ ಆಗ್ರಹಿಸಿದ್ದಾರೆ. ಈ ಸಂದರ್ಭ ಕಾರ್ಮಿಕರಾದ ಹೆಚ್.ಆರ್. ಮಂಜು, ನಾಗರಾಜು, ಚುಂಚನಾಯಕ್ ಇದ್ದರು.