ನಾಪೆÇೀಕ್ಲು, ಫೆ. 27: ನಾವೆಲ್ಲರೂ ಭಾರತೀಯರು. ಎಲ್ಲರೂ ಪರಸ್ಪರ ಶಾಂತಿ ಸೌಹಾರ್ಧತೆಯೊಂದಿಗೆ ಇದ್ದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮೌಲಾನ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಕುಟ್ಯಾಡಿ ಹೇಳಿದರು.

ಸಮೀಪದ ಚೆರಿಯಪರಂಬು ಮಖಾಂ ಉರೂಸ್‍ನ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಭಾಷಣ ಕಾರರಾಗಿ ಅವರು ಮಾತನಾಡಿದರು. ಎಲ್ಲಾ ಧರ್ಮದ ಸಾರವೂ ಒಂದೇ. ಎಲ್ಲಾ ಧರ್ಮದ ಗುರುಗಳೂ ಶಾಂತಿ ಮತ್ತು ಅಹಿಂಸೆಯನ್ನು ಜಗತ್ತಿಗೆ ಸಾರಿದ್ದಾರೆ. ಆದರೆ ಸಮಾಜದಲ್ಲಿರುವ ಕೆಲವು ಸಮಾಜ ಘಾತುಕ ಶಕ್ತಿಗಳು ಧರ್ಮ, ಜಾತಿಗಳ ನಡುವೆ ಬಿರುಕು ಮೂಡಿಸಿ ತಮ್ಮ ಕಾರ್ಯ ಸಾಧನೆ ಮಾಡಲು ಹೊಂಚು ಹಾಕುತ್ತಿವೆ. ಇದಕ್ಕೆ ನಾವು ಅವಕಾಶ ನೀಡ ಬಾರದು ಎಂದು ಸಲಹೆ ನೀಡಿದರು.

ದೇಶದ ಅಭಿವೃದ್ಧಿಯಲ್ಲಿ ಆಳುವ ಸರಕಾರದೊಂದಿಗೆ ಸಾರ್ಜಜನಿಕರು ಕೈಜೋಡಿಸಬೇಕು. ದೇಶ ನಮಗೇನು ನೀಡಿದೆ ಎನ್ನುವದಕ್ಕಿಂತ ದೇಶಕ್ಕಾಗಿ ನಾನೇನು ಮಾಡಿದ್ದೇನೆ ಎಂಬುದನ್ನು ಅರಿತುಕೊಳ್ಳಬೇಕು ಆಗ ಮಾತ್ರ ದೇಶದ ಉತ್ತಮ ಪ್ರಜೆ ಎನಿಸಿಕೊಳ್ಳಲು ಸಾಧ್ಯ ಎಂದರು. ಸರಕಾರವು ಕೂಡ ಪಕ್ಷ, ಜಾತಿ, ಮತ ಎಂಬ ಭೇದವಿಲ್ಲದೆ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವದರ ಮೂಲಕ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಪಿ.ಎಂ. ಹಸೇನಾರ್ ಹಾಜಿ ವಹಿಸಿದ್ದರು.

ವೇದಿಕೆಯಲ್ಲಿ ಅಲ್‍ಹಾಜ್ ಕೆ.ಎ. ಮಹ್‍ಮೂದ್ ಮುಸ್ಲಿಯಾರ್ ಎಡಪಾಲ, ಜಮಾಅತ್ ಕಾರ್ಯದರ್ಶಿ ಸಿ.ಎಂ. ಉಸ್ಮಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಪಠಣ, ಸಾರ್ವಜನಿಕ ಅನ್ನದಾನ ನಡೆಯಿತು.